ಪುತ್ತೂರು: 2001 ಸೆ. 11 ರಂದು ಅಮೆರಿಕದ ನ್ಯೂಯಾರ್ಕ್ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡ ದುರಂತದಲ್ಲಿ ಹುತಾತ್ಮರಾದ ವಿಪ್ರೋ ಕಂಪೆನಿಯಲ್ಲಿ ಸಿಸ್ಟಮ್ ಮ್ಯಾನೇಜರ್ ಆಗಿದ್ದ ಪುತ್ತೂರಿನ ಹೇಮಂತ ಕುಮಾರ್ ರವರ ಸ್ಮಾರಕಕ್ಕೆ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ, ಇತ್ತೀಚೆಗೆ ಪ್ರಧಾನಿ ಮೋದಿಯ ಅಮೆರಿಕ ಭೇಟಿ ವೇಳೆ 15 ಸಾವಿರಕ್ಕೂ ಮಿಕ್ಕಿ ಅನಿವಾಸಿ ಭಾರತೀಯವರನ್ನು ಸಂಘಟಿಸಿದ ಕೋರ್ ಕಮಿಟಿಯ ಸದಸ್ಯರಾಗಿದ್ದ, ಪುತ್ತೂರಿನ ವಿಫುಲ್ ಎಸ್. ರೈ ಮತ್ತು ಅವರ ಪತ್ನಿ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ನ್ಯೂಯಾರ್ಕ್ನ ಅವಳಿ ಕಟ್ಟಡ ದುರಂತದಲ್ಲಿ ಸುಮಾರು 2900 ಕ್ಕೂ ಮಿಕ್ಕಿ ಜನರು ಹುತಾತ್ಮರಾಗಿದ್ದರು. ಕಟ್ಟಡವಿದ್ದ ಜಾಗದಲ್ಲಿ ಪ್ರಸ್ತುತ ಪ್ರತಿಯೊಬ್ಬ ಹುತಾತ್ಮರ ಹೆಸರು ಬರೆದು ಸ್ಮಾರಕ ಮಾಡಲಾಗಿದೆ. ಪಕ್ಕದಲ್ಲೇ ಮ್ಯೂಸಿಯಂ ಮತ್ತು ಜಾಗತಿಕ ವ್ಯಾಪಾರ ಕೇಂದ್ರ ಹೋಲಿಕೆಯ ಕಟ್ಟಡವಿದೆ. ಹೇಮಂತ ಕುಮಾರ್ ಹೆಸರು ಬರೆದಿರುವ ಸ್ಮಾರಕ ಬಳಿ ವಿಫುಲ್ ಎಸ್. ರೈ, ಅವರ ಪತ್ನಿ ಸ್ಪೂರ್ತಿ ಎಸ್. ರೈ ಮತ್ತು ಪುತ್ರ ಸಿದ್ದಾರ್ಥ್ ರೈ ನುಡಿನಮನ ಸಲ್ಲಿಸಿದರು. ʻಶ್ರಮಜೀವಿಯಾಗಿದ್ದು, ಸರಳತೆ ಮತ್ತು ಪ್ರಾಮಾಣಿಕತೆಯಿಂದ ಹೆಸರಾಗಿರುವ ಆನಂದ ಟೈಲರ್ರವರ ವ್ಯಕ್ತಿತ್ವದ ಪ್ರತಿಬಿಂಬದಂತೆ ಹೇಮಂತ ಕುಮಾರ್ ರವರೂ ಶ್ರಮಜೀವಿಯಾಗಿ ಬೆಳೆದು ತಂದೆಯ ಎಲ್ಲಾ ಆದರ್ಶಗಳನ್ನು ಮೈಗೂಡಿಸಿಕೊಂಡವರು. ಅವರ ಆತ್ಮಕ್ಕೆ ದೇವರು ಚಿರಶಾಂತಿ ಅನುಗ್ರಹಿಸಲೆಂದು ವಿಫುಲ್ ಎಸ್. ರೈ ಈ ವೇಳೆ ಪ್ರಾರ್ಥಿಸಿರುವುದಾಗಿ ಹೇಳಿದ್ದಾರೆ.
ಅ.6 ರಂದು ವಿಫುಲ್ ತಾಯ್ನಾಡಿಗೆ
ಬಿಜೆಪಿ ದ.ಕ ಜಿಲ್ಲಾ ಮಾಜಿ ಅಧ್ಯಕ್ಷರಾದ ಕಡಮಜಲು ಸುಭಾಸ್ ರೈಯವರ ಪುತ್ರರಾಗಿರುವ ವಿಫುಲ್ ಎಸ್. ರೈಯವರು ತನ್ನ ಕುಟುಂಬ ಸಮೇತ ಅ.6 ರಂದು ತಾಯ್ನಾಡಿಗೆ ಮರಳಲಿದ್ದಾರೆ. ʻಪುತ್ತೂರಿಗೆ ಬಂದು ಆನಂದ ಟೈಲರ್ ರವರನ್ನು ಭೇಟಿಯಾಗಲಿದ್ದೇನೆ. ಅಲ್ಲದೇ ನ್ಯೂಯಾರ್ಕ್ ಮೋದಿ ಭೇಟಿ ವೇಳೆ ಅನಿವಾಸಿ ಭಾರತೀಯರ ಸಂಘಟನೆಯ ಬಗ್ಗೆ ಪತ್ರಿಕಾಗೋಷ್ಠಿ ಮಾಡಲಿದ್ದೇನೆʼ ಎಂದು ವಿಫುಲ್ ಎಸ್. ರೈ ʻಸುದ್ದಿʼ ಯೊಂದಿಗೆ ಹೇಳಿಕೊಂಡಿದ್ದಾರೆ.