ಹಂತ ಹಂತವಾಗಿ ಬೇಡಿಕೆಗಳ ಈಡೇರಿಕೆ ಭರವಸೆ -ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಅಂತ್ಯ

0

ಪುತ್ತೂರು:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸರಕಾರ ನಡೆಸಿದ ಎರಡನೇ ಸುತ್ತಿನ ಮಾತುಕತೆ ಫಲಪ್ರದವಾಗಿರುವುದರಿಂದ ಮುಷ್ಕರ ಹಿಂಪಡೆದು ಅ.4ರಿಂದ ಕರ್ತವ್ಯಕ್ಕೆ ಹಾಜರಾಗಲು ಗ್ರಾಮ ಆಡಳಿತಾಧಿಕಾರಿಗಳು ತೀರ್ಮಾನಿಸಿದ್ದಾರೆ.


ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26ರಿಂದ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ ನಡೆಸುತ್ತಿದ್ದರು.ಆರಂಭದಲ್ಲಿ ಸೆ.30ರಂದು ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದ್ದರು.ಆದರೆ ಈ ಕುರಿತು ಲಿಖಿತ ಆದೇಶ ದೊರೆಯದ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಽಕಾರಿಗಳು ಮುಷ್ಕರ ಮುಂದುವರಿಸಿದ್ದರು.ಗ್ರಾಮ ಆಡಳಿತಾಽಕಾರಿಗಳ ಬೇಡಿಕೆ ಕುರಿತು ರಾಜ್ಯ ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿಯವರು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ಗಮನಕ್ಕೆ ತಂದಿದ್ದರು.ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದರು.


ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸೂಚನೆಯಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು ಅ.3ರಂದು ಗ್ರಾಮ ಆಡಳಿತಾಧಿಕಾರಿಗಳ ರಾಜ್ಯ, ಜಿಲ್ಲಾ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಹರಿಸುವ ಕುರಿತು ಸರಕಾರ ಭರವಸೆ ನೀಡಿರುವುದಾಗಿ ತಿಳಿಸಿದ ಪ್ರಧಾನ ಕಾರ್ಯದರ್ಶಿಯವರು,ಮುಷ್ಕರ ಹಿಂಪಡೆದುಕೊಳ್ಳುವಂತೆ ಕೇಳಿಕೊಂಡರು.ಸರಕಾರದ ಭರವಸೆಯ ಮೇರೆಗೆ ಮುಷ್ಕರ ಹಿಂಪಡೆದುಕೊಂಡಿರುವ ಗ್ರಾಮ ಆಡಳಿತಾಧಿಕಾರಿಗಳು ಅ.4ರಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.ಸರಕಾರದೊಂದಿಗೆ ಮಾತುಕತೆ ಫಲಪ್ರದವಾದ ಬಳಿಕ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿಯಾಗಿ ಅ.4ರಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದರು.

ಇಂದಿನಿಂದ ಕರ್ತವ್ಯಕ್ಕೆ
ಗ್ರಾಮ ಆಡಳಿತಾಧಿಕಾರಿಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಮತ್ತು ಮೂಲಭೂತ ಸೌಲಭ್ಯಗಳ ಸಹಿತ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.26ರಿಂದ ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದೆವು.ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನದಂತೆ ಅ.3ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ನಮ್ಮ ಬೇಡಿಕೆಗಳ ಕುರಿತು ಚರ್ಚಿಸಿದ್ದು,ಹಂತ ಹಂತವಾಗಿ ಈಡೇರಿಸುವ ಕುರಿತು ಸರಕಾರದಿಂದ ಭರವಸೆ ವ್ಯಕ್ತವಾಗಿರುವುದರಿಂದ ಮುಷ್ಕರವನ್ನು ಹಿಂತೆಗೆದುಕೊಂಡು ಅ.4ರಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ-

ಉಮೇಶ್ ಕಾವಡಿ,
ಅಧ್ಯಕ್ಷರು, ಗ್ರಾಮ ಆಡಳಿತಾಧಿಕಾರಿಗಳ ಸಂಘ,ಪುತ್ತೂರು

LEAVE A REPLY

Please enter your comment!
Please enter your name here