‘ಸಿಎಂ ಪ್ರೇರಣೆಯಿಂದಲೇ ಕಾಂಗ್ರೆಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’-ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ

0

ಪುತ್ತೂರು:ಕಾಂಗ್ರೆಸಿಗರಿಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನವೇ ಮಾದರಿಗಳಾಗಿವೆ.ಐವನ್ ಡಿ’ಸೋಜಾ ಅವರಂತು ರಾಜ್ಯಪಾಲರನ್ನು ಬಾಂಗ್ಲಾದೇಶದಂತೆ ಓಡಿಸುವ ಮಾತುಗಳನ್ನಾಡುತ್ತಾರೆ.ಸಿಎಂ ಪ್ರೇರಣೆಯಿಂದಲೇ ಕಾಂಗ್ರೆಸಿಗರು ಈ ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಹಾಗಾಗಿ ಅವರಿಗೆ ಬಾಂಗ್ಲಾ, ಪಾಕಿಸ್ತಾನ ಮಾದರಿಯಾದರೆ ಬಿಜೆಪಿಗರಿಗೆ ಸನಾತನ ಭಾರತೀಯ ಸಂಸ್ಕೃತಿ ಮಾದರಿಯಾಗಿದೆ ಎಂದು ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.


ಬಿಜೆಪಿ ಸದಸ್ಯತ್ವ ಅಭಿಯಾನದ ಹಿನ್ನೆಲೆಯಲ್ಲಿ ಅ.5ರಂದು ಪುತ್ತೂರಿಗೆ ಆಗಮಿಸಿದ ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ದಲಿತರ ಭೂಮಿಯನ್ನು ನುಂಗಿದ ಸಿದ್ದರಾಮಯ್ಯ ಅವರು ಅದನ್ನು ತಮ್ಮ ಪತ್ನಿಯ ಹೆಸರಿಗೆ ಬರೆಸಿಕೊಂಡಿದ್ದಲ್ಲದೆ, ಮುಡಾ ಸ್ವಾಧಿನಪಡಿಸಿಕೊಂಡ ಬಳಿಕ ನಿಯಮ ಮೀರಿ ಹೆಚ್ಚುವರಿ ನಿವೇಶನ ಪಡೆದುಕೊಂಡು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ.ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬಳಿಕ ಕೋರ್ಟ್ ಕೂಡ ಇದಕ್ಕೆ ಸಮ್ಮತಿಸಿದೆ.ಈಗ ಏನೇನೋ ನೆಪ ಹೇಳುವ ಬದಲು, ಅವರಿವರ ಮಾತು ಕೇಳುವ ಬದಲು ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.


ಅಶೋಕ್ ಕುಮಾರ್ ರೈ ಅವರ ಹೇಳಿಕೆ ಯಾವ ಮಾನದಂಡ ಗೊತ್ತಿಲ್ಲ:
ವಿದೇಶದಿಂದ ಅಡಕೆ ಆಮದು ಮಾಡುವುದರಿಂದ ನಮ್ಮ ಅಡಿಕೆ ಮಾರುಕಟ್ಟೆ ಮೇಲಾಗುವ ಪರಿಣಾಮದ ಬಗ್ಗೆ ಕ್ಯಾಂಪ್ಕೋ ಜತೆ ಸೇರಿಕೊಂಡು ಕೇಂದ್ರದ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು.ಬೆಳೆಗಾರರಿಗೆ ಸಮಸ್ಯೆಯಾಗದಂತೆ ನಾನು ರೈತರ ಜತೆಗಿದ್ದೇನೆ.ಆಮದು ಕಾರಣದಿಂದ ಅಡಕೆ ಧಾರಣೆ ಇಳಿಯಲಿದೆ ಎಂದು ಶಾಸಕ ಅಶೋಕ್ ರೈ ಅವರು ಯಾವ ಮಾನದಂಡದಿಂದ ಹೇಳಿದರೋ ಗೊತ್ತಿಲ್ಲ ಎಂದು ಕ್ಯಾ|ಬ್ರಿಜೇಶ್ ಚೌಟ ಹೇಳಿದರು.


ಕೊಂಕಣ ರೈಲ್ವೆ ವಿಲೀನಕ್ಕೆ ಚರ್ಚೆ:
ಕಬಕ-ಪುತ್ತೂರು ರೈಲು ನಿಲ್ದಾಣದ ಅವಶ್ಯಕತೆಗಳ ಬಗ್ಗೆ ವರದಿ ತರಿಸಿಕೊಂಡು ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ ಸಂಸದ ಚೌಟ ಅವರು, ಕೊಂಕಣ ರೈಲ್ವೆಯನ್ನು ರೈಲ್ವೆ ಜತೆ ವಿಲೀನಗೊಳಿಸುವ ಚರ್ಚೆ ಆರಂಭಗೊಂಡಿದೆ.ಈ ಪ್ರಕ್ರಿಯೆ ಪೂರ್ಣಗೊಂಡರೆ ಅನೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದು ಬ್ರಿಜೇಶ್ ಚೌಟ ಹೇಳಿದರು.


ಸದಸ್ಯತ್ವ 2ನೇ ಹಂತ ಆರಂಭಗೊಂಡಿದೆ:
ಸೆ.2ರಿಂದ 30ರವರೆಗೆ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಮೊದಲ ಹಂತ ದೇಶದೆಲ್ಲೆಡೆ ಯಶಸ್ವಿಯಾಗಿ ನಡೆದಿದೆ.ಇದೀಗ ಎರಡನೇ ಹಂತ ಆರಂಭಿಸಲಾಗಿದೆ.ಅಟಲ್ ಸದಸ್ಯತ್ವ ಅಭಿಯಾನ ಎಂಬ ಹೆಸರಿನಲ್ಲಿ ಸಾರ್ವಜನಿಕ ವಲಯವನ್ನು ಸಂಪರ್ಕಿಸಿ ಸಾಮೂಹಿಕವಾಗಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.ಸದಸ್ಯತ್ವ ಅಭಿಯಾನ ಎಂಬುದು ಪಕ್ಷಕ್ಕೆ ಜೀವ ತುಂಬುವ ಕಾರ್ಯಕ್ರಮ. ಪಕ್ಷವನ್ನು ಮತ್ತೊಮ್ಮೆ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಬೆಳೆಸಲು ಇದು ಸಹಕಾರಿ. ಈ ಅಭಿಯಾನದ ಮೂಲಕ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಮಾಡಲಾಗುತ್ತಿದೆ.ಮೊದಲ ಹಂತದ ಅಭಿಯಾನ ಯಶಸ್ವಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.50 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ.ಸಾಮೂಹಿಕ ಅಭಿಯಾನ ಮುಗಿದಾಗ ಜಿಲ್ಲೆಯಲ್ಲಿ 3.50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬ್ರಿಜೇಶ್ ಚೌಟ ಹೇಳಿದರು.ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು.


ಪುತ್ತೂರಿನ ಉದ್ಯಮ ಮಳಿಗೆಗೆಳಿಗೆ ಭೇಟಿ:
ಬಿಜೆಪಿಯಲ್ಲಿ ಬೆಳಿಗ್ಗೆ ಸಭಾ ಕಾರ್ಯಕ್ರಮ ಬಳಿಕ ಪುತ್ತೂರಿನ ಮುಳಿಯ ಜ್ಯುವೆಲ್ಸ್ ಸಹಿತ ಹಲವು ಉದ್ಯಮ ಮಳಿಗೆಗಳಿಗೆ ಭೇಟಿ ನೀಡಿದ ಸಂಸದರು ಸದಸ್ಯತ್ವ ಅಭಿಯಾನ ಕೈಗೊಂಡರು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಅರುಣ್ ಕುಮಾರ್ ಪುತ್ತಿಲ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಮುರಳಿಕೃಷ್ಣ ಹಸಂತಡ್ಕ, ಸುರೇಸ್ ಅತ್ರಿಮಜಲು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಭಟ್, ಬಿಜೆಪಿ ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಸುಂದರ ಪೂಜಾರಿ ಬಡಾವು, ದೀಕ್ಷಾ ಪೈ, ಮಂಜುನಾಥ್ ಎನ್.ಎಸ್, ಮಂಜುನಾಥ್ ಎನ್.ಎಸ್ ಪ್ರವೀಣ್ ಭಂಡಾರಿ, ಪ್ರವೀಣ್ ತಿಂಗಳಾಡಿ, ಹರಿಪ್ರಸಾದ್ ಯಾದವ್, ಶ್ರೀಧರ್ ಗೌಡ ಕಣಜಾಲು, ನಾಗೇಶ್ ಟಿ.ಎಸ್, ನಾಗೇಶ್ ಪ್ರಭು, ಅನಿಲ್ ತೆಂಕಿಲ ಸಹಿತ ಹಲವಾರು ಮಂದಿ ಜೊತೆಯಲ್ಲಿದ್ದರು. ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಶಾರದಾ ಭಜನಾ ಮಂದಿರಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು.

ಸಿಎಂ ಬಿಳಿಚುಕ್ಕೆ ಎಲ್ಲಿದೆಯೆಂದು ಹುಡುಕ ಬೇಕಾಗಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಿಳಿ ಅಂಗಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎಂದು ಹೇಳುತ್ತಿದ್ದರು. ಆದರೆ ಅವರೀಗ ಬಿಳಿ ಚುಕ್ಕೆ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಆ ಮೂಲಕ ಅವರು ಅವರಿವರ ಮಾತು ಕೇಳುವ ಬದಲು ಸಿ.ಎಮ್ ಹುದ್ದೆಗೆ ರಾಜೀನಾಮೆ ನೀಡಲಿ
-ಕ್ಯಾ|ಬ್ರಿಜೇಶ್ ಚೌಟ ಸಂಸದರು

ಕಿಶೋರ್ ಬೊಟ್ಯಾಡಿಗೆ ಭರ್ಜರಿ ಜಯ ನಿಶ್ಚಿತ
ಪುತ್ತೂರು ಮೂಲದ ಬಿಜೆಪಿ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 13 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.6011 ಮತಗಳ ಪೈಕಿ 3500 ಮತಗಳು ನಮ್ಮ ಪಕ್ಷದ್ದೇ ಇದೆ.ಹೀಗಾಗಿ ಕಿಶೋರ್ ಬೊಟ್ಯಾಡಿ ಭರ್ಜರಿ ಬಹುಮತದಿಂದ ಗೆಲ್ಲಲಿದ್ದಾರೆ ಎಂದು ಕ್ಯಾ| ಬ್ರಿಜೇಶ್ ಚೌಟ ಹೇಳಿದರು.

LEAVE A REPLY

Please enter your comment!
Please enter your name here