ವಿಧಾನಪರಿಷತ್ ಉಪ ಚುನಾವಣೆ-ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಭೆ

0

ಪುತ್ತೂರು: ದಕ್ಷಿಣ ಕನ್ನಡದ ಸ್ಥಳೀಯ ಪ್ರಾಧಿಕಾರದಿಂದ ವಿಧಾನಪರಿಷತ್‌ನ 1 ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಸಂಬಂಧಿಸಿ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯು ಅ.13ರಂದು ಜೈನಭವನದಲ್ಲಿ ನಡೆಯಿತು.


ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಮಾತನಾಡಿ, ವಿದ್ಯಾರ್ಥಿಯಾಗಿರುವಾಗಲೇ ಸಂಘಟನೆಯಲ್ಲಿ ಬೆಳೆದ, ಹಿಂದುತ್ವ, ಯುವ ಮೋರ್ಚಾಗಳಲ್ಲಿ ಜವಾಬ್ದಾರಿ ನಿರ್ವಹಿಸಿ ವಿರೋಧಿಗಳಿಗೆ ಎದೆಯೊಡ್ಡಿದ ನಾಯಕನನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಬೇಕಾದ ಅಗತ್ಯ ಇದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಮಂತ್ರಿ ಮಕ್ಕಳಿಗೆ ಟಿಕೆಟ್ ನೀಡಿದರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡುತ್ತಿದ್ದು ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ಅದರಂತೆ ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಿಶೋರ್ ಕುಮಾರ್‌ರವರಿಗೆ ಅವಕಾಶ ನೀಡಿದೆ. ಕಾಶ್ಮೀರಕ್ಕೆ ಹೋಗುವುದೇ ಅಸಾಧ್ಯವಾಗಿದ್ದ ಕಾಲದಲ್ಲಿ ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿದ ಧೀರ ಕಿಶೋರ್ ಕುಮಾರ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಕಳುಹಿಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಕಿಶೋರ್‌ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡಬೇಕು. ನಮ್ಮ ಮತಗಳ ಜೊತೆಗೆ ಹಿಂದುತ್ವ ಹಾಗೂ ರಾಷ್ಟ್ರದ ಪರವಾಗಿರುವವರನ್ನು ನಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನಪರಿವರ್ತನೆ ಮಾಡಬೇಕು. ಈ ಚುನಾವಣೆಯ ಮಹತ್ವವನ್ನು ತಿಳಿಸಬೇಕು. ಪಕ್ಷದ ಎಲ್ಲಾ ಪ್ರಮುಖರು ಸಮಪರ್ಕವಾಗಿ ಕೆಲಸ ಮಾಡುವಂತೆ ಕರೆ ನೀಡಿದರು.


ಚುನಾವಣಾ ನಿರ್ವಹಣಾ ಜಿಲ್ಲಾ ಸಂಚಾಲಕ ಗಣೇಶ್ ಕಾರ್ಣಿಕ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು 1593 ಮತಗಳಿಂದ ಗೆಲುವು ಸಾಧಿಸಿದ್ದರು. ಈ ಅಂತರ ಕಡಿಮೆಯಾಗಬಾರದು. ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ಅಂತರವನ್ನು 2000ಕ್ಕೆ ಏರಿಸಬೇಕು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತನ್ನ ವೈಯಕ್ತಿಕ ಲಾಭವನ್ನು ಲೆಕ್ಕಹಾಕಬಾರದು. ಪ್ರತಿಹೆಜ್ಜೆಯೂ ಸೂಕ್ಷ್ಮವಾದುದು. ಈ ಚುನಾವಣೆ ಮುಂದಿನ ಎಲ್ಲಾ ಚುನಾವಣೆಗಳಿಗೂ ಸಂದೇಶ ನೀಡಬೇಕು. ಪ್ರತಿ ಪಂಚಾಯತ್‌ಗಳಿಗೆ ಪ್ರಮುಖರಿಗೆ ಜವಾಬ್ದಾರಿ ನೀಡಿದ್ದು ನಮ್ಮ ಮತಗಳ ಜೊತೆಗೆ ಇನ್ನಷ್ಟು ಮತಗಳನ್ನು ತಮ್ಮತ್ತ ಸೆಳೆಯಬೇಕು. ಅಭೂತಪೂರ್ವ ಗೆಲ್ಲುವ ಮೂಲಕ ರಾಜ್ಯವನ್ನು ಮಾರಾಟ ಮಾಡಲು ಹೊರಟಿರುವ ಸಿದ್ದರಾಮಯ್ಯನವರಿಗೆ ಸಂದೇಶ ನೀಡಬೇಕು ಎಂದು ತಿಳಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಳೆದ ಒಂದೂವರೇ ವರ್ಷದಿಂದ ರಾಜ್ಯ ಸರಕಾರದಿಂದ ಸ್ಥಳೀಯಾಡಳಿತಗಳಿಗೆ ಯಾವುದೇ ಅನುದಾನ ಇಲ್ಲದೆ ಅಭಿವೃದ್ಧಿಯಾಗಿಲ್ಲ. ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆ ಹಾಗೂ ಇತರ ಅನುದಾನದಿಂದ ಸ್ಥಳೀಯಾಡಳಿತದಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ. ರಾಜ್ಯದಿಂದ ಬೀದಿ ದೀಪ ದುರಸ್ಥಿಗೂ ಅನುದಾನವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಇದರ ಬಗ್ಗೆ ಯೋಚಿಸುತ್ತಿಲ್ಲ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆಡಳಿತ ವಿರೋಧಿ, ಭ್ರಷ್ಟಾಚಾರದ ವಿರುದ್ದ ನಮ್ಮ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಬೇಕು. ಅಂತಹ ದೊಡ್ಡ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಕಿಶೋರ್‌ರವರು ಕೋಟ ಶ್ರೀನಿವಾಸ ಪೂಜಾರಿಯವರಂತೆ ಪಂ.ರಾಜ್ ವ್ಯವಸ್ಥೆಗೆ ಸಮರ್ಥ ಅಭ್ಯರ್ಥಿ. ಅಧಿಕಾರಿಗಳಲ್ಲಿ ಕೆಲಸ ಮಾಡಿಸುವ ಸಮರ್ಥ ಯುವ ನಾಯಕನಾಗಿದ್ದಾರೆ. ನಮ್ಮ ಕಷ್ಟಗಳಿಗೆ ಧ್ವನಿ ಆಗಲಿದ್ದಾರೆ. ಪ್ರತಿಯೊಬ್ಬರೂ ನನ್ನ ಕರ್ತವ್ಯ ಎಂದು ತಿಳಿದುಕೊಳ್ಳಬೇಕು. ಕಿಶೋರ್‌ರವರನ್ನು ಎರಡು ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.


ಅಭ್ಯರ್ಥಿ ಕಿಶೋರ್ ಬೊಟ್ಯಾಡಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಪಕ್ಷ ಅವಕಾಶ ನೀಡಿದೆ. ಇದನ್ನು ಜವಾಬ್ದಾರಿ ಎಂದು ತಿಳಿದು ಯಾವುದೇ ಲೋಪ ಬಾರದಂತೆ ಸೇವೆ ಸಲ್ಲಿಸುತ್ತೇನೆ. ಗ್ರಾಮೀಣ ಭಾಗದ ಕಟ್ಟ ಕಡೆಯ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವ ಗ್ರಾ.ಪಂ ಸದಸ್ಯರ ಸಮಸ್ಯೆಗಳಿಗೆ ವಿಧಾನಪರಿಷತ್‌ನಲ್ಲಿ ಗಟ್ಟಿ ಧ್ವನಿಯಾಗಿ ಕೆಲಸ ಮಾಡಲಿದ್ದೇನೆ. ನಿಮ್ಮ ಸಮಸ್ಯೆಗಳ ಪರಿಹಾರದ ಮೂಲಕ ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದರು.


ಚುನಾವಣಾ ನಿರ್ವಹಣಾ ಜಿಲ್ಲಾ ಸಹ ಸಂಚಾಲಕ ರಾಕೇಶ್ ಕೆಡೆಂಜಿ ಮಾತನಾಡಿ, ಮತಗಟ್ಟೆಗಳ ಮಾಹಿತಿ ನೀಡಿ ಮತದಾನದ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ರಾಜ್ಯ ಒಬಿಸಿ ಕಾರ್ಯದರ್ಶಿ ಆರ್.ಸಿ ನಾರಾಯಣ, ನಗರ ಸಭಾ ಅಧ್ಯಕ್ಷೆ ಲೀಲಾವತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಮಂಡಲದ ಕಾರ್ಯದರ್ಶಿ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಚುನಾವಣಾ ನಿರ್ವಹಣಾ ಪುತ್ತೂರು ನಗರದ ಸಹ ಸಂಚಾಲಕ ಸಂತೋಷ್ ರೈ ಕೈಕಾರ ಮತ್ತಿತರರು ಉಪಸ್ಥಿತರಿದ್ದರು.


ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಬಿ.ಆರ್ ಪ್ರಾರ್ಥಿಸಿದರು. ಚುನಾವಣಾ ನಿರ್ವಹಣೆಯ ತಾಲೂಕು ಸಂಚಾಲಕ ನಿತೀಶ್ ಶಾಂತಿವನ ಸ್ವಾಗತಿಸಿದರು. ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ವಂದಿಸಿದರು. ಸುನಿಲ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಕಾರ್ಯಕರ್ತ ಕಿಶೋರ್‌ರವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಬೇಕಾಗಿದೆ. ಈ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು.
ವಿಧಾನಪರಿಷತ್‌ಗೆ ಅಭ್ಯರ್ಥಿ ಆಯ್ಕೆಯು ಮೊದಲ ಬಾರಿಗೆ ಪುತ್ತೂರಿನಿಂದ ನಡೆದಿದ್ದು ಪುತ್ತೂರಿಗೆ ಡಬ್ಬಲ್ ಸಂಭ್ರಮವಿದೆ.
-ಕ್ಯಾ| ಬ್ರಿಜೇಶ್ ಚೌಟ, ಸಂಸದರು


ಅ.15 ಬಂಟ್ವಾಳದಲ್ಲಿ ಜನಪ್ರತಿನಿಧಿಗಳ ಜಿಲ್ಲಾ ಸಮಾವೇಶ
ವಿಧಾನ ಪರಿಷತ್ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಜನಪ್ರತಿನಿಽಗಳ ಜಿಲ್ಲಾ ಸಮಾವೇಶವು ಅ.15ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ವಾಳದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಮಂದಿ ನಾಯಕರು ಆಗಮಿಸಲಿದ್ದಾರೆ. ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಬೇಕು.
-ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರು.

LEAVE A REPLY

Please enter your comment!
Please enter your name here