ಪುತ್ತೂರು ಶಾರದೋತ್ಸವ ಸಂಪನ್ನ

0

ಪುತ್ತೂರು:ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ನಡೆದ 90ನೇ ವರ್ಷದ ಶಾರದೋತ್ಸವದ ವೈಭವದ ಶೋಭಾಯಾತ್ರೆ ಅ.12ರಂದು ಸಂಜೆ ನಡೆಯಿತು.

ಶಾರದಾ ಭಜನಾ ಮಂದಿರದಲ್ಲಿ ಅ.9ರಂದು ಪ್ರತಿಷ್ಟಾಪಿಸಲ್ಪಟ್ಟ ಶಾರದೆ ಮಾತೆಯ ಮೂರ್ತಿಗೆ ಶೃಂಗಾರ ಮಾಡಿ ಪೂಜೆ ಸಲ್ಲಿಸಿ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಸುತ್ತು ಬಂದು ಕೆರೆಯ ಬಳಿಯಿಂದ ಅಲಂಕೃತ ರಥಕ್ಕೆ ತರಲಾಯಿತು.ಶಾರದಾ ಭಜನಾ ಮಂದಿರದ ಬಳಿ ತೆಂಗಿನ ಕಾಯಿ ಒಡೆದು ಶಾರದೆ ವಿಗ್ರಹವನ್ನು ಬೊಳುವಾರಿಗೆ ಕೊಂಡೊಯ್ಯಲಾಯಿತು.ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಿ ಕರ್ನಾಟಕ, ಕೇರಳ ಮತ್ತು ತುಳುನಾಡಿನ ವಿವಿಧ ಜಾನಪದ ಕಲಾ ತಂಡಗಳ ವಿಭಿನ್ನ ಕಲಾ ಪ್ರದರ್ಶನಗಳೊಂದಿಗೆ ಆರಂಭಗೊಂಡ ಶೋಭಾಯಾತ್ರೆಯು ಪುತ್ತೂರು ಪೇಟೆಯಿಂದ ದರ್ಬೆ ವೃತ್ತದವರೆಗೆ ಸಾಗಿ ಪರ್ಲಡ್ಕ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯ ಕೆರೆಯಲ್ಲಿ ಶಾರದೆ ವಿಗ್ರಹ ಜಲಸ್ಥಂಭನಗೊಳಿಸಲಾಯಿತು.


ಶೋಭಾಯಾತ್ರೆಗೆ ಬೊಳುವಾರಿನಲ್ಲಿ ಚಾಲನೆ:
ಬೊಳುವಾರು ವೃತ್ತದಲ್ಲಿ ಭಗವಾಧ್ವಜ ಇರುವ ಅಲಂಕೃತಗೊಂಡ ತೆರೆದ ವಾಹನದಲ್ಲಿದ್ದ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರಕ್ಕೆ ಸೇರಿದ್ದ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅರ್ಚಕ ವಿ.ಎಸ್.ಭಟ್ ಭಗವಧ್ವಜಾರೋಹಣ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.ಬಳಿಕ ಶ್ರೀ ಶಾರದಾ ಮೂರ್ತಿಗೆ ಮಂಗಳಾರತಿ ನಡೆದು ಶೋಭಾಯಾತ್ರೆ ಆರಂಭಗೊಂಡಿತು.ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು,ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಮಹಾವೀರ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ.ಸುರೇಶ್ ಪುತ್ತೂರಾಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ ಜೈನ್, ಬಿಜೆಪಿ ಪ್ರಮುಖರಾದ ಎಸ್.ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ರಾಧಾಕೃಷ್ಣ ಬೋರ್ಕರ್, ಮುರಳಿಕೃಷ್ಣ ಹಸಂತಡ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ರಾಧಾಕೃಷ್ಣ ನಂದಿಲ, ಶಿವರಾಮ ರೈ, ರತ್ನಾಕರ ರೈ ಕೆದಂಬಾಡಿಗುತ್ತು, ಶಿವರಾಮ ಆಳ್ವ ಕುರಿಯ, ಮಧು ನರಿಯೂರು, ಹರಿಣಿ ಪುತ್ತೂರಾಯ, ದೇವಾಲಯಗಳ ಅಧ್ಯಯನಕಾರ ಚಂದ್ರಶೇಖರ್ ಪಿ.ಜಿ, ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ್ ಹೆಚ್., ಉಪಾಧ್ಯಕ್ಷರಾದ ಯಶವಂತ ಆಚಾರ್ಯ, ದಯಾನಂದ, ಜತೆ ಕಾರ್ಯದರ್ಶಿ ಸುಽರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಜಯಕಿರಣ್ ಉರ್ಲಾಂಡಿ, ವಸಂತ್, ಪಕೀರ ಗೌಡ, ಕೃಷ್ಣ ಪುತ್ತೂರು, ಕೃಷ್ಣ ಪಿ.ಜಿ, ಗೋಪಾಲ ಆಚಾರ್ಯ, ಗಿರೀಶ್, ಪದ್ಮನಾಭ, ತೇಜಸ್ ತೆಂಕಿಲ, ಗಣೇಶ್ ಆಚಾರ್ಯ, ಪ್ರಜ್ನೇಶ್, ಪ್ರಜ್ವಲ್, ಪ್ರವೀತ್, ಸಾಗರ್, ಪ್ರಥಮ್, ಶ್ರೀವಿದ್ಯಾ ಜೆ.ರಾವ್, ವೈಷ್ಣವಿ ಜೆ.ರಾವ್, ಸುನಿತಾ ಉರ್ಲಾಂಡಿ, ಚಂದ್ರಿಕಾ ಬಾಬುಗುಡ್ಡೆ, ಆಯೂಷ್, ಭರತ್, ಹರಿಣಿ, ಕರಣ, ಪುಷ್ಪರಾಜ್ ಹೆಗ್ಡೆ, ಗೋಪಾಲ ಆಚಾರ್ಯ, ಯೋಗಾನಂದ ರಾವ್, ಕೃಷ್ಣ ಕುಲಾಲ್, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕರ ತಂಡದ ಸದಸ್ಯರು, ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಶೋಭಾಯಾತ್ರೆಯ ಸಂಚಾಲಕ ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.


ವೈವಿಧ್ಯಮಯ ಕಲಾ ತಂಡಗಳು:
ಶೋಭಾಯಾತ್ರೆಯಲ್ಲಿ ಭಗವಧ್ವಜ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರ ಹೊಂದಿರುವ ತೆರೆದ ವಾಹನ, ಕರ್ನಾಟಕ, ಕೇರಳ ಹಾಗೂ ತುಳುನಾಡಿನ ವೈವಿಧ್ಯಮಯ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿತ್ತು.ವೇದಘೋಷ, ಚೆಂಡೆ ಮೇಳ, ವಾದ್ಯ ಘೋಷ, ವಾದ್ಯ ವೃಂದ, ಕುಣಿತ ಭಜನೆಗಳೊಂದಿಗೆ ಕರ್ನಾಟಕದ ಕಲಾ ಮೇಳಗಳಾದ ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ವೀರಭದ್ರ ಕುಣಿತ, ಕಹಳೆ, ಜಗ್ಗುಲಿಗ ಮೇಳ, ಮಂಗಳೂರಿನ ನಡೆದಾಡುವ ಬೃಹತ್ ಹನುಮಂತ, ಬೃಹತ್ ಘಟೋದ್ಗಜ ಅಲ್ಲದೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಕೇರಳದ ತ್ರಿಶೂರಿನ ಪಂದಳಾಟಮ್, ಸಿಂಗಾರಿ ಕಾವಡಿ, ಕಥಕ್ಕಳಿ, ಮಹಿಳಾ ಸಿಂಗಾರಿ ಮೇಳಮ್, ತಿರಾಯಾಟ್ಟಮ್, ಸಿಂಗಾರಿ ಮೇಳ ಶೋಭಾಯಾತ್ರೆಯಲ್ಲಿ ಎಲ್ಲರ ಮನರಂಜಿಸಿತು.20 ಭಜನಾ ತಂಡಗಳಿಂದ ಭಜನೆ, 2 ತಂಡಗಳ ಸಿಂಗಾರಿ ಮೇಳದೊಂದಿಗೆ ಶೋಭಾಯಾತ್ರೆ ಸಾಗಿಬಂತು.ವಿಶೇಷವಾಗಿ ಶೋಭಾಯಾತ್ರೆಯಲ್ಲಿ ಡಿಜೆ ಮತ್ತು ಸುಡುಮದ್ದು ಪ್ರದರ್ಶನಗಳನ್ನು ನಿಷೇಧಿಸಲಾಗಿತ್ತು.


ಪೇಟೆಯುದ್ದಕ್ಕೂ ದೀಪಾಲಂಕಾರ:
ಶೋಭಾಯಾತ್ರೆ ಸಾಗಿಬರುವ ಬೊಳುವಾರಿನಿಂದ ದರ್ಬೆ ವೃತ್ತದವರೆಗೆ ಶೋಭಾಯಾತ್ರೆ ಸಮಿತಿ ವತಿಯಿಂದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.ಮುಖ್ಯ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಹಾಗೂ ರಸ್ತೆ ವಿಭಜಕದ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.


ಯಾಂತ್ರೀಕೃತ ವಿಧಾನದಲ್ಲಿ ವಿಗ್ರಹದ ಜಲಸ್ಥಂಭನ:
ದರ್ಬೆ ವೃತ್ತದ ತನಕ ಸಾಗಿ ನಂತರ ಹಿಂತಿರುಗಿ ದೇವಸ್ಥಾನದ ಎದುರಿನ ಗದ್ದೆಯಲ್ಲಿರುವ ಕೆರೆಯಲ್ಲಿ ಯಾಂತ್ರೀಕೃತ ತಂತ್ರಜ್ಞಾನದ ಮೂಲಕ ವಿಶಿಷ್ಠ ರೀತಿಯಲ್ಲಿ ಶಾರದಾ ವಿಗ್ರಹದ ಜಲಸ್ಥಂಭನ ನಡೆಯಿತು. ಶೋಭಾಯಾತ್ರೆಯಲ್ಲಿ ಶಾರದಾ ಮಾತೆಗೆ ಭಕ್ತಾದಿಗಳು ಹಣ್ಣುಕಾಯಿ ಹಾಗೂ ಮಂಗಳಾರತಿ ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಿದರು.ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕತೆಗೆ ಅನುಗುಣವಾಗಿ ಸುಂದರವಾಗಿ, ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಾಗಿ ಶೋಭಾಯಾತ್ರೆ ನೆರವೇರಿತು.


ನಳಿನ್ ಭೇಟಿ:
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಧ್ಯಾಹ್ನ ವೇಳೆಗೆ ಶಾರದಾ ಭಜನಾ ಮಂದಿರಕ್ಕೆ ಭೇಟಿ ನೀಡಿ ಶಾರದೋತ್ಸವದಲ್ಲಿ ಪಾಲ್ಗೊಂಡರು.

ಮಧ್ಯಾಹ್ನದಿಂದ ಮಳೆಯ ವಾತಾವರಣವಿತ್ತು.ಇದೊಂದು ಜಗನ್ಮಾತೆಯ ಕಾರ್ಯಕ್ರಮ.ಶ್ರೀ ಮಹಾಲಿಂಗೇಶ್ವರ ದೇವರು, ಬಲ್ನಾಡು ಉಳ್ಳಾಲ್ತಿ ದಂಡನಾಯಕ ದೈವಗಳು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದದಿಂದ ಶೋಭಾಯಾತ್ರೆ ಚೆನ್ನಾಗಿ ನಡೆಯುತ್ತಿದೆ.ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆಯಲ್ಲಿದ್ದೇವೆ.ಶೋಭಾಯಾತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ-
| ಸೀತಾರಾಮ ರೈ ಕೆದಂಬಾಡಿಗುತ್ತು
ಗೌರವಾಧ್ಯಕ್ಷರು, ಶಾರದಾ ಭಜನಾ ಮಂದಿರ
(ಶೋಭಾಯಾತ್ರೆ ಹೊರಡುವ ಸಂದರ್ಭ ಹೇಳಿದ್ದು)

12 ಕೇಂದ್ರಗಳಲ್ಲಿ ಕಲಾ ಪ್ರದರ್ಶನ
ಶೋಭಾಯಾತ್ರೆಯಲ್ಲಿ ಬೊಳುವಾರು ವೃತ್ತದಿಂದ ದರ್ಬೆಯ ತನಕ 12 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಶೋಭಾಯಾತ್ರೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.ಕಲಾ ತಂಡಗಳು 12 ಕೇಂದ್ರಗಳಲ್ಲಿ ಪ್ರದರ್ಶನ ನೀಡಿದರು.ಬೊಳುವಾರು ವೃತ್ತ, ಪ್ರಗತಿ ಆಸ್ಪತ್ರೆ, ಇನ್‌ಲ್ಯಾಂಡ್ ಮಯೂರ, ಶ್ರೀಧರ ಭಟ್ ಬ್ರದರ್ಸ್, ಅಂಚೆ ಕಚೇರಿ, ಶ್ರೀ ವೆಂಕಟ್ರಮಣ ದೇವಸ್ಥಾನ, ಹಳೆಯ ಸಂಜೀವ ಶೆಟ್ಟಿ ಮಳಿಗೆ ಬಳಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅರುಣಾ ಕಲಾ ಮಂದಿರ, ಕಲ್ಲಾರೆ, ಹರ್ಷ ಮಳಿಗೆ ಹಾಗೂ ದರ್ಬೆ ವೃತ್ತದ ಬಳಿ ಕಲಾ ತಂಡಗಳಿಂದ ವಿಶೇಷ ಪ್ರದರ್ಶನಗಳು ನಡೆಯಿತು.

LEAVE A REPLY

Please enter your comment!
Please enter your name here