ಪುತ್ತೂರು: ರಾಷ್ಟ್ರಮಟ್ಟದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಟನೆಯಾಗಿರುವ ವಿದ್ಯಾಭಾರತಿಯು ವಿದ್ಯಾರ್ಥಿಗಳ ಸರ್ವೋತ್ತೋಮುಖ ಅಭಿವೃದ್ಧಿಗಾಗಿ ಪಂಚಮುಖಿ ಶಿಕ್ಷಣದ ಆಶಯಗಳನ್ನು ಇಟ್ಟುಕೊಂಡು ಹಲವು ಕಾರ್ಯಗಳನ್ನು ಮಾಡಿಕೊಂಡಿದ್ದು ಅದರಲ್ಲಿ ಒಂದಾದ ದೈಹಿಕ ಶಿಕ್ಷಣ ಮತ್ತು ಕ್ರೀಡೆಗೆ ವಿಶೇಷ ಪ್ರಾಧ್ಯಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟವು ಅ.16 ರಿಂದ 19ರ ತನಕ ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ಕ್ಯಾಂಪಸ್‌ನಲ್ಲಿ ಜರುಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಯಂ ಕೃಷ್ಣ ಭಟ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ಕರ್ನಾಟಕ ಇದರ ಅಧ್ಯಕ್ಷ ಪರಮೇಶ್ವರ ಹೆಗ್ಗಡೆಯವರು ವಹಿಸಲಿದ್ದಾರೆ. ಉದ್ಘಾಟನೆಯ ಸಮಾರಂಭದ ಪೂರ್ವಭಾವಿಯಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳನ್ನು ಸ್ವಾಗತಿಸಿ, ದರ್ಬೆ ವೃತ್ತದಿಂದ ಶಾಲಾ ಮೈದಾನದ ತನಕ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ಅ.17 ಮತ್ತು 18ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜೋಡಿಸಲಾಗಿದೆ ಎಂದವರು ಹೇಳಿದರು.
720 ಸ್ಪರ್ಧಾಳುಗಳು, 3 ವಿಭಾಗಳಲ್ಲಿ ಪಂದ್ಯಾಟ:
ದೇಶದ ಎಲ್ಲಾ ರಾಜ್ಯಗಳಲ್ಲೂ ವಿದ್ಯಾಭಾರತಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ 562 ಶಾಲೆಗಳಿದೆ.ಜಿಲ್ಲೆಯಲ್ಲಿ 142 ಶಾಲೆಗಳಿವೆ. ದೇಶದಲ್ಲಿ ಒಟ್ಟು 32ಲಕ್ಷ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. 15ಲಕ್ಷ ಅಧ್ಯಾಪಕರು, 1ಲಕ್ಷ ಆಡಳಿತ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ. ಬೇರೆ ಬೇರೆ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ. ಅದರಲ್ಲಿ ಪುತ್ತೂರಿನಲ್ಲಿ ನಡೆಯುವ ವಾಲಿಬಾಲ್‌ನಲ್ಲಿ ಬಾಲ, ಕಿಶೋರ, ತರುಣ ಎಂಬ ಮೂರು ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ.
6 ರಿಂದ 8ನೇ ತರಗತಿ, 9 ರಿಂದ 10ನೇ ತರಗತಿ ಮತ್ತು ಪಿಯುಸಿ ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ. ಸುಮಾರು 720 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 274 ವಿದ್ಯಾರ್ಥಿನಿಯರು, ಉಳಿದವರು ವಿದ್ಯಾರ್ಥಿಗಳಿದ್ದಾರೆ. ಒಟ್ಟು ಆರು ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದ್ದು, 2 ಕ್ರೀಡಾಂಗಣ ಹೊನಲು ಬೆಳಕಿನ ವ್ಯವಸ್ಥೆ ಮಾಡಿದೆ. ವಿದ್ಯಾಭಾರತಿ ಸಂಯೋಜನಾ ಶಾಲೆಯಲ್ಲಿ ಕಲಿತವರು ಅನೇಕರು ಉನ್ನತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಡಾ. ಕೆ.ಎಂ. ಕೃಷ್ಣಭಟ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವಿದ್ಯಾಭಾರತಿಯ ದಕ್ಷಿಣ ಮಧ್ಯಕ್ಷೇತ್ರೀಯ ನೈತಿಕ, ಅಧ್ಯಾತ್ಮಿಕ, ಶಿಕ್ಷಣ ಪ್ರಮುಖ್ ಮಂಕುಡೆ ವೆಂಕಟ್ರಮಣ ರಾವ್, ವಿದ್ಯಾಭಾರತಿ ದಕ್ಷಿಣ ಕನ್ನಡ ಖೇಲ್ ಕೂದ್ ಪ್ರಮುಖ್ ಕರುಣಾಕರ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್, ಮುಖ್ಯಗುರು ಸತೀಶ್ ರೈ ಉಪಸ್ಥತರಿದ್ದರು.