ರಾಮಕುಂಜ: ಶ್ರೀ ಶಾರದೋತ್ಸವ ಸಮಿತಿ ರಾಮಕುಂಜ ವಲಯ ಶಾರದಾನಗರ ಇವರ ವತಿಯಿಂದ 21ನೇ ವರ್ಷದ ಶ್ರೀ ಶಾರದೋತ್ಸವ ಅ.10ರಿಂದ 12ರ ತನಕ ಶಾರದಾನಗರ ಶ್ರೀ ಶಾರದಾಂಬಾ ಮಂದಿರದಲ್ಲಿ ನಡೆಯಿತು.
ಅ.10ರಂದು ಸಂಜೆ ಶಾರದಾಂಬಾ ಮಂದಿರದಲ್ಲಿ ಶಾರದಾಂಬೆಯ ಪ್ರತಿಷ್ಠೆ ನಡೆಯಿತು. ಬಳಿಕ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಮಹಾಪೂಜೆ,ಪ್ರಸಾದ ಭೋಜನ ನಡೆಯಿತು. ನಂತರ ಖ್ಯಾತ ಗಾಯಕ ಡಾ| ಕಿರಣ್‌ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರ ಪುತ್ತೂರು ಇದರ ರಾಮಕುಂಜ ಶಾಖೆಯ ವಿದ್ಯಾರ್ಥಿಗಳಿಗೆ ಟಿ.ವಿ.ರಿಯಾಲಿಟಿ ಶೋ ಮಾದರಿಯ ಗಾಯನ ಸ್ಪರ್ಧೆ ’ ಗಾನಸಿರಿ ವಾಯ್ಸ್ ಆಫ್ ಶಾರದಾನಗರ’ ನಡೆಯಿತು.ನಂತರ ಸ್ಥಳೀಯ ಮಕ್ಕಳಿಂದ ನೃತ್ಯ ನಡೆಯಿತು.
ಅ.12ರಂದು ಬೆಳಿಗ್ಗೆ ವಾಹನ ಪೂಜೆ, ಮಾರಿ ಚಾಮುಂಡಿ, ಗುಳಿಗ ದೈವಗಳ ತಂಬಿಲ, ವಾಲಿಬಾಲ್ ಪಂದ್ಯಾಟ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಮೂಹಿಕ ದುರ್ಗಾಪೂಜೆ. ಮಹಾಪೂಜೆ ನಡೆಯಿತು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ಟೋಳಿ ಸದಸ್ಯ ಸುರೇಶ್ ಪರ್ಕಳ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಿದರು. ಬಳಿಕ ಪ್ರಸಾದ ಭೋಜನ, ಬೊಳ್ಳಿಮಲೆತ ಶಿವಶಕ್ತಿಲು ನಾಟಕ ನಡೆಯಿತು.
ಅ.12ರಂದು ಬೆಳಿಗ್ಗೆ ಸರಸ್ವತಿ ಪೂಜೆ, ವಿದ್ಯಾರಂಭ, ಸಾಂಸ್ಕೃತಿಕ ಹಾಗೂ ಕ್ರೀಡಾಸ್ಪರ್ಧೆ, ಭಜನೆ ನಡೆಯಿತು. ಸಂಜೆ ಧಾರ್ಮಿಕ ಸಭೆ ನಡೆಯಿತು. ಶಾರದೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಜಿ. ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ರಾಮಕುಂಜ ಗ್ರಾ.ಪಂ.ಸದಸ್ಯ ಸೂರಪ್ಪ ಕುಲಾಲ್, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲಾ ನಿವೃತ್ತ ಪ್ರ.ದ.ಸಹಾಯಕಿ ರತ್ನಕುಮಾರಿ ಎಚ್.ಪಿ., ಶುಭ ಹಾರೈಸಿದರು. ವಾಯುಸೇನೆ ನಿವೃತ್ತ ಸೈನಿಕ ಕೃಷ್ಣಪ್ರಸಾದ್ ವಾಟೆಡ್ಕ, ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ವಿಜೇತೆ ಯುಕ್ತ ವಿ.ಜಿ ಗಾಂಧಿಪೇಟೆ, ಭಜನಾ ತರಬೇತುದಾರ ಭರತ್ ಕುಮಾರ್ ಕಾಳೂರು ಹಾಗೂ ಚಾರ್ಟಡ್ ಅಕೌಂಟೆಂಟ್ ಹೃಷಿಕೇಶ್ ಶರ್ಮಾ ಅವರ ಪರವಾಗಿ ಅವರ ತಂದೆಯವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ವಾಸುದೇವ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೇಯಾ ಪ್ರಾರ್ಥಿಸಿದರು. ನಿಶ್ಚಿತ್ ಶಾರದಾನಗರ ಸ್ವಾಗತಿಸಿದರು. ಸಿಂಚನ ಬರಮೇಲು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ದೀಕ್ಷಿತಾ ವಂದಿಸಿದರು. ಜಯಪ್ರಕಾಶ್ ಅಮೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾರದಾಂಬೆಯ ವೈಭವದ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವಿವಿಧ ಭಜನಾ ತಂಡಗಳ ಕುಣಿತ ಭಜನೆ ಮೆರವಣಿಗೆಗೆ ಮೆರಗು ನೀಡಿತು.