





ವರದಿ:ಯೂಸುಫ್ ರೆಂಜಲಾಡಿ


ಪುತ್ತೂರು: ಹನಿಟ್ರ್ಯಾಪ್ ಜಾಲದ ಸದ್ದು ಕೆಲವು ವರ್ಷಗಳಿಂದ ದ.ಕ ಜಿಲ್ಲೆಯಲ್ಲಿ ಕೇಳಿ ಬರುತ್ತಿದ್ದು ಆ ಮೋಸದ ಜಾಲಕ್ಕೆ ಹಲವರು ತುತ್ತಾಗಿ ಕಷ್ಟ-ನಷ್ಟ ಅನುಭವಿಸಿದ್ದಾರೆ ಎನ್ನಲಾಗುತ್ತಿದೆ. ಹನಿಟ್ರ್ಯಾಪ್ಲ್ಲಿ ವಿವಿಧ ವಿಧಗಳಿದ್ದು ಪುರುಷರೊಡನೆ ಮಹಿಳೆ ಆತ್ಮೀಯತೆ ಬೆಳೆಸಿ ಬಳಿಕ ಫೋಟೋ, ವಿಡಿಯೋ ಮೂಲಕ ಬೆದರಿಸುವ ತಂತ್ರ ಒಂದೆಡೆಯಾದರೆ, ಅನಾಮಧೇಯ ಮೊಬೈಲ್ ನಂಬರ್ಗಳಿಂದ ವೀಡಿಯೋ ಕರೆ ಮಾಡಿ ಬಳಿಕ ಬ್ಲ್ಯಾಕ್ಮೇಲ್ ಮಾಡಿ ಹಣ ದೋಚುವ ಪ್ರಕ್ರಿಯೆಯೂ ನಡೆಯುತ್ತಿದೆ. ಇಂತಹ ಮೋಸದ ಜಾಲಕ್ಕೆ ತುತ್ತಾಗಿ ಹಲವರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು ಇನ್ನೂ ಕೆಲವರು ಅಂತಹ ಜಾಲಕ್ಕೆ ಬಲಿಯಾಗಿ ಚಡಪಡಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಮುಖ್ಯವಾಗಿ ಅಪರಿಚಿತರಿಂದ ಬರುವ ವೀಡಿಯೋ ಕಾಲ್ ಸ್ವೀಕರಿಸಿದ ಅನೇಕರು ಆ ಬಳಿಕ ಹನಿಟ್ರ್ಯಾಪ್ಗೆ ಒಳಗಾಗಿರುವ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಜನತೆ ಎಚ್ಚರಿ ವಹಿಸುವಂತೆ ಪೊಲೀಸ್ ಇಲಾಖೆ ಕೂಡಾ ಮನವಿ ಮಾಡಿದೆ. ಹನಿಟ್ರ್ಯಾಪ್ಗೆ ಒಳಗಾಗಿ ಹಲವರು ಮೋಸ ಹೋಗಿ ಸುಮ್ಮನಾಗಿದ್ದರೆ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ.





ಹಣಕ್ಕೆ ಬೇಡಿಕೆ:
ಫೆಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತ ವ್ಯಕ್ತಿಗಳು ಮೊದಲಿಗೆ ಯಾವುದಾದರೊಂದು ಸಂದೇಶ ಕಳುಹಿಸುತ್ತಾರೆ, ಅದಕ್ಕೆ ನೀವು ಉತ್ತರಿಸುತ್ತಾ ಹೋದಂತೆ ನಿಮ್ಮ ಜೊತೆ ಆತ್ಮೀಯವಾಗಿ ವರ್ತಿಸುವ ಅಪರಿಚಿತರು ನಿಮಗೆ ವೀಡಿಯೋ ಕರೆ ಮಾಡುತ್ತಾರೆ. ನೀವೇನಾದರೂ ಅಪರಿಚಿತ ಸಂಖ್ಯೆಯ ವೀಡಿಯೋ ಕರೆ ಸ್ವೀಕರಿಸಿದ್ದೇ ಆದಲ್ಲಿ ನಿಮಗೆ ಅಶ್ಲೀಲ ವೀಡಿಯೋ, ಚಿತ್ರಗಳು ಗೋಚರಗೊಳ್ಳುತ್ತದೆ. ಕೆಲವರು ಅಂತಹ ವಿಡಿಯೋ ಕಾಲ್ಗೆ ಮರುಳಾಗಿ ಅವರು ಹೇಳಿದ ರೀತಿಯಲ್ಲಿ ವರ್ತಿಸಿ ಪೇಚಿಗೆ ಸಿಲುಕಿದರೆ, ಮತ್ತೂ ಕೆಲವರು ವಿಡಿಯೋ ಕಾಲ್ ಕಟ್ ಮಾಡಿಯೂ ತೊಂದರೆಗೆ ಸಿಲುಕಿದ್ದಾರೆ. ವಿಡಿಯೋ ಕಾಲ್ ತಕ್ಷಣವೇ ಕಡಿತಗೊಂಡರೂ ಕೂಡಾ ಕೆಲವು ಹೊತ್ತಿನ ಬಳಿಕ ನಿಮ್ಮ ಮೊಬೈಲಿಗೆ ನಿಮ್ಮದೇ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ವೀಡಿಯೋವನ್ನು ಕಳುಹಿಸುತ್ತಾರೆ. ಜೊತೆಗೆ ಒಂದು ಬೇಡಿಕೆಯೂ ಇರುತ್ತದೆ. ನೀವು ಇಂತಿಷ್ಟು ಹಣವನ್ನು ನಾನು ಹೇಳುವ ಅಕೌಂಟಿಗೆ ಕಳುಹಿಸಬೇಕು, ಇಲ್ಲದೇ ಹೋದಲ್ಲಿ ನಿಮ್ಮ ಈ ಅಶ್ಲೀಲ ವೀಡಿಯೋವನ್ನು ವಾಟ್ಸಾಪ್, ಫೆಸ್ಬುಕ್, ಯೂಟ್ಯೂಬ್ಗಳಿಗೆ ಅಪ್ಲೋಡ್ ಮಾಡುತ್ತೇವೆ ಎಂದು ಬೆದರಿಸಿ ಬ್ಲ್ಯಾಕ್ಮೇಲ್ ಮಾಡುತ್ತಾರೆ. ಈ ಸಂದರ್ಭದಲ್ಲಿ ವಂಚನೆಗೊಳಗಾದವರು ತಮ್ಮ ಮಾನ ಮರ್ಯಾದೆ ಎಲ್ಲಿ ಹರಾಜಾಗುತ್ತದೋ ಎನ್ನುವ ಭಯದಿಂದ ಅಪರಿಚಿತರು ಹೇಳಿದಂತೆ ಹಣ ವರ್ಗಾವಣೆ ಮಾಡಿ ಮೋಸ ಹೋಗುತ್ತಾರೆ. ಇಂತಹ ಘಟನೆಗಳು ರಾಜ್ಯದ ವಿವಿಧ ಕಡೆಗಳಲ್ಲಿ ಇತ್ತೀಚೆಗೆ ವರದಿಯಾಗುತ್ತಿದ್ದು ಇದೀಗ ದ.ಕ ಜಿಲ್ಲೆಯ ಪುತ್ತೂರಿನ ಕೆಲವರಿಗೂ ಇದರ ಅನುಭವವಾಗಿರುವ ಬಗ್ಗೆ ಮಾಹಿತಿಯಿದೆ.
ಸಾವಿರದಿಂದ ಲಕ್ಷ ರೂ ವರೆಗೂ ಬೇಡಿಕೆ:
ಹನಿಟ್ರ್ಯಾಪ್ ಜಾಲದಲ್ಲಿ ಮೋಸ ಹೋದವರ ಜೊತೆ ಲಕ್ಷಾಂತರ ರೂಪಾಯಿ ವರೆಗೂ ಬೇಡಿಕೆ ಇಡುತ್ತಾರೆ. ಹಣ ಇರುವ ಕೆಲವರು ಅದನ್ನು ಅಪರಿಚಿತರಿಗೆ ವರ್ಗಾವಣೆ ಮಾಡಿ ಸುಮ್ಮನಾದರೆ ಇನ್ನೂ ಕೆಲವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಉದಾಹರಣೆಯೂ ಇದೆ. ಈ ಮೋಸದ ಜಾಲವನ್ನು ಭೇದಿಸುವುದು ಪೊಲೀಸ್ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ.
ವೀಡಿಯೋ ಕಾಲ್ ಜಾಲದಲ್ಲಿ ಸಕ್ರಿಯರಾಗಿರುವ ವಂಚಕರಿಗೆ ಅವಿವಾಹಿತ ಪುರುಷರು ಹಾಗೂ ಉದ್ಯಮಿಗಳು ಹೆಚ್ಚು ಟಾರ್ಗೆಟ್. ಜಾಲತಾಣಗಳ ಸಂದೇಶಗಳ ಮೂಲಕ ಫ್ರೇಂಡ್ಸ್ ರಿಕ್ವೆಸ್ಟ್ ಕಳುಹಿಸಿ ಅದನ್ನು ಸ್ವೀಕರಿಸಿದ ವೇಳೆಯೂ ಹಲವರು ಮೋಸ ಹೋದ ಘಟನೆಗಳು ಬೆಳಕಿಗೆ ಬರುತ್ತಿದೆ. ಹೆಚ್ಚಾಗಿ ಯುವತಿಯರ ಅಥವಾ ಮಹಿಳೆಯರ ಹೆಸರಿನಲ್ಲಿ ಸಂದೇಶ ಕಳುಹಿಸಲಾಗುತ್ತಿದ್ದು ಒಂದು ವೇಳೆ ಅದನ್ನು ಸತ್ಯವೆಂದು ನಂಬಿ ಅವರ ಜೊತೆ ಮಾತಿಗಿಳಿದರೆ ವಂಚನೆಯ ಖೆಡ್ಡಾಕ್ಕೆ ಬೀಳುವುದರಲ್ಲಿ ಅನುಮಾನವಿಲ್ಲ. ಮಹಿಳೆಯರನ್ನು ಬಳಸಿಕೊಂಡು ಉದ್ಯಮಿಗಳಿಗೆ ಗಾಳ ಹಾಕುವ ತಂಡ ಉದ್ಯಮಿ ಬಲೆಗೆ ಬಿದ್ದದ್ದೇ ಆದಲ್ಲಿ ಬಳಿಕ ಅವರನ್ನು ಬ್ಲ್ಯಾಕ್ಮೇಲ್ ಮಾಡಿ ಹಣ ದೋಚುತ್ತಾರೆ, ಕೆಲವರು ಹಣ ನೀಡಿ ಸುಮ್ಮನಾದರೆ, ಇನ್ನೂ ಕೆಲವು ಮೋಸ ಹೋದವರು ಸ್ವಾಭಿಮಾನಕ್ಕೆ ಹೆದರಿ ಸಾವಿಗೂ ಶರಣಾಗುತ್ತಾರೆ. ಯಾವುದಕ್ಕೂ ಜನರು ಹುಷಾರಾಗಿರುವುದು ಒಳಿತು.
ಅಪರಿಚಿತ ಕರೆಗಳನ್ನು ಸ್ವೀಕರಿಸುವ ಮುನ್ನ ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರು ಕಳುಹಿಸುವ ಫ್ರೇಂಡ್ಸ್ ರಿಕ್ವೆಸ್ಟನ್ನು ಸ್ವೀಕರಿಸದೇ ಇರುವುದು ಹಾಗೂ ಫೆಸ್ಬುಕ್, ವಾಟ್ಸಾಪ್ ಮುಖಾಂತರ ಬರುವ ಅಪರಿಚಿತರ ವೀಡಿಯೋ ಕರೆಗಳನ್ನು ಸ್ವೀಕರಿಸದೇ ಇರುವುದು ಉತ್ತಮ. ಒಂದು ವೇಳೆ ಅಪರಿಚಿತ ವೀಡಿಯೋ ಕರೆಗಳನ್ನು ಸ್ವೀಕರಿಸುವುದಿದ್ದರೂ ಮುಖ ಮುಚ್ಚಿಕೊಂಡು ಅಥವಾ ಮೊಬೈಲ್ ಕ್ಯಾಮರಾಗೆ ಕೈ ಅಡ್ಡ ಇಟ್ಟು ಪರಿಚಿತರೇ ಎಂದು ಖಾತ್ರಿಪಡಿಸಿಕೊಳ್ಳುವುದು ಉತ್ತಮ. ಇಂತಹ ಪ್ರಕರಣಗಳು ಹೆಚ್ಚಾಗಿ ಫೇಕ್ ಅಕೌಂಟ್ ಮೂಲಕವೇ ನಡೆಯುವ ಕಾರಣ ಇದನ್ನು ಭೇದಿಸುವುದು ಪೊಲೀಸ್ ಇಲಾಖೆಗೂ ತುಸು ಕಷ್ಟದ ಕೆಲಸ. ಆದರೂ ಪೊಲೀಸ್ ಇಲಾಖೆ ಇಂತಹ ಪ್ರಕರಣ ಭೇದಿಸಲು ಪ್ರಯತ್ನಿಸುತ್ತಿದೆ. ಈ ರೀತಿಯ ಕರೆಗಳು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ನೀಡಬಹುದು. ಜನರೇ ಜಾಗೃತರಾಗುವುದರಿಂದ ಮಾತ್ರ ಇದನ್ನು ನಿಯಂತ್ರಿಸಲು
ಸಾಧ್ಯ.










