ಪುತ್ತೂರಿನಲ್ಲಿ ಸಂಜೀವ ಮಠಂದೂರು ತಂದ ಅನುದಾನದ ಉದ್ಘಾಟನೆ ಆಗುತ್ತಿದೆ ಹೊರತು ಹೊಸ ಅನುದಾನವಿಲ್ಲ !

0

ಪುತ್ತೂರು: ಪುತ್ತೂರಿನಲ್ಲಿ ಸಂಜೀವ ಮಠಂದೂರು ಅವರು ಶಾಸಕರಾಗಿದ್ದಾಗ ಬಿಡುಗಡೆಯಾದ ಅನುದಾನದ ಕಾಮಗಾರಿ ಈಗ ಉದ್ಘಾಟನೆ ಆಗುತ್ತಿದೆ ಹೊರತು ಹೊಸದಾದ ಅನುದಾನ ಇಲ್ಲ. ಇಡಿ ರಾಜ್ಯದಲ್ಲಿ ಇದೇ ಪರಿಸ್ಥಿತಿ. ಪುತ್ತೂರಿನಲ್ಲಿ ಬಿಡುಗಡೆಯಾದ ಅನುದಾನ ದಿನಾಂಕ ಕಾಮಗಾರಿ ಪ್ರಾರಂಭವಾದ ದಿನಾಂಕವನ್ನು ಕಾಂಗ್ರೆಸ್ ಬಿಡುಗಡೆಗೊಳಿಸಲಿ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಕಾಂಗ್ರೆಸ್ ಆಡಳಿತದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಶಾಸಕರ ಅನುದಾನ ಬರುತ್ತಿಲ್ಲ. ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಕಾಮಗಾರಿಗಳು ಕುಂಠಿತ ಆಗಿದೆ. ಬೊಮ್ಮಾಯಿ ಸರಕಾರ, ಯಡಿಯೂರಪ್ಪ ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ತಡೆ ಹಿಡಿಯುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಉದಾಹರಣೆಗೆ ಪುತ್ತೂರಿನಲ್ಲಿ ಸಂಜೀವ ಮಠಂದೂರು ಶಾಸಕರಾಗಿದ್ದಾಗ ಸಹಸ್ರಾರು ಕೋಟಿ ರೂಪಾಯಿ ಅನುದಾನ ತಂದರು. ಆ ಅನುದಾನವನ್ನು ತಡೆ ಹಿಡಿಯುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಅದರಲ್ಲೂ ಕಮೀಷನ್ ಕೇಳುವ ಕೆಲಸ ಆಗುತ್ತಿದೆ. ಹಿಂದೆ ನಮ್ಮ ಸರಕಾರದ ವಿರುದ್ಧ ಶೇ.40 ಕಮೀಷನ್ ಆರೋಪ ಮಾಡಿದ್ದರು. ಇವತ್ತು ಕಾಂಗ್ರೆಸ್ ಸರಕಾರ ಶೇ.80 ಕಮೀಷನ್ ಸರಕಾರ ಆಗಿದೆ. ಹಾಗಾಗಿ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಪುತ್ತೂರಿನಲ್ಲಿ ಸಂಜೀವ ಮಠಂದೂರು ಶಾಸಕರಾಗಿದ್ದಾಗ ಬಿಡುಗಡೆಯಾಗಿದ್ದ ಅನುದಾನದ ಕಾಮಗಾರಿಗಳು ಈಗ ಉದ್ಘಾಟನೆ ಆಗುತ್ತಿವೆ ಹೊರತು ಹೊಸ ಕಾಮಗಾರಿಗಳು ಇಲ್ಲ. ಇಡಿ ರಾಜ್ಯದಲ್ಲಿ ಶಾಸಕರ ಅನುದಾನ ಇಲ್ಲ. ನಮ್ಮ ಸರಕಾರ ಇದ್ದಾಗ ಮಠ ,ಮಂದಿರಗಳಿಗೆ ಅನುದಾನ ಕೊಟ್ಟಿದೆ. ಇವತ್ತು ಕಾಂಗ್ರೆಸ್ ಸರಕಾರ ಲೂಟಿಕೋರರ, ಡಕಾಯಿತರ ಸರಕಾರವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಂತರಿಕ ಕಲಹದ ಮೂಲಕ ಯಾರು ಮುಖ್ಯಮಂತ್ರಿ ಎಂದು ಸಂಗೀತ ಕುರ್ಚಿ ನಡೆಯುತ್ತಿದೆ. ಒಂದು ಕಡೆ ಭ್ರಷ್ಟಾಚಾರ, ಇನ್ನೊಂದು ಕಡೆ ಆಂತರಿಕ ಕಲಹ, ಇನ್ನೊಂದು ಕಡೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದವರು ಹೇಳಿದರು.


ಕಿಶೋರ್ ಕುಮಾರ್ ವಿಧಾನಪರಿಷತ್‌ನ ಸಮರ್ಥ ನಾಯಕರಾಗುತ್ತಾರೆ:
ಪಂಚಾಯತ್ ಸದಸ್ಯರಿಗೆ ಗೌರವ ಧನ ಹೆಚ್ಚಿಸುವ ಕೆಲಸ, ಶೇ.50ಮಹಿಳಾ ಮೀಸಲಾತಿ ನೀಡುವ ಮೂಲಕ ನಿರಂತರವಾದ ಹೋರಾಟವನ್ನು ಕೋಟ ಶ್ರೀನಿವಾಸ ಪೂಜಾರಿ ಮಾಡಿದ್ದರು. ಪಂಚಾಯತ್ ಆಕ್ಟ್‌ನ ಕುರಿತು ಈ ರಾಜ್ಯದಲ್ಲಿ ತಿಳುವಳಿಕೆ ಗೊತ್ತಿರುವುದು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತ್ರ. ಅಧ್ಯಾಯನ ಶೀಲತೆಯಿಂದ ಮಾತನಾಡುವ ಶಕ್ತಿ ಅವರಿಗಿದೆ. ಸಚಿವರಾಗಿದ್ದಾಗಲೂ ಪಂಚಾಯತ್‌ಗೆ ಹೆಚ್ಚು ಅನುದಾನ, ಹಳ್ಳಿಯಲ್ಲಿರುವ ಹಿಂದುಳಿದ ದೇವಸ್ಥಾನಕ್ಕೆ ಅನುದಾನ ನೀಡುವ ಕೆಲಸವನ್ನು ಕೋಟ ಶ್ರೀನಿವಾಸ ಪೂಜಾರಿ ಮಾಡಿದ್ದರು. ಹಾಗಾಗಿ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಅತ್ಯಂತ ಹೆಚ್ಚು ಗೌರವ ಇರುವುದು ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ. ಅವರು ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕನಾಗಿ ಅದ್ಭುತ ಸಾಧನೆ ಮಾಡಿದವರು. ಅಷ್ಟೇ ಸಾಮಾರ್ಥ್ಯ ಮತ್ತು ಅಧ್ಯಯನ ಮಾಡುವ ಶಕ್ತಿ ಇರುವ ಕಿಶೋರ್ ಪುತ್ತೂರು ಅವರನ್ನು ಇವತ್ತ ಬಿಜೆಪಿ ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ. ಒಳ್ಳೆಯ ಸಂಘಟಕ, ವಿಚಾರಧಾರೆಯುಳ್ಳ ಬೇರೆ ಬೇರೆ ಅನ್ಯಾನ್ಯ ಜವಾಬ್ದಾರಿ ನಿಭಾಯಿಸಿದ ಅವರು ಕೋಟ ಶ್ರೀನಿವಾಸ ಪೂಜಾರಿ ಮಾಡಿರುವ ಎಲ್ಲಾ ವಿಚಾರಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ವವ್ಯಾಪ್ತಿ, ಸರ್ವಸ್ಪರ್ಶಿ ಅನ್ನುವುದನ್ನು ತೋರಿಸಲು ಅವರಿಗೆ ಅವಕಾಶ ಕೊಟ್ಟಿದೆ. ಅವರು ಸಮರ್ಥವಾಗಿ ವಿಧಾನಪರಿಷತ್‌ನ ನಾಯಕರಾಗುತ್ತಾರೆ. ಹಾಗಾಗಿ ಅವರಿಗೆ ಮತದಾನ ಮಾಡಬೇಕೆಂದು ನಾನು ಜನಪ್ರತಿನಿಧಿಗಳಲ್ಲಿ ವಿನಂತಿ ಮಾಡುತ್ತಿದ್ದೇನೆ ಬಿಜೆಪಿಯಲ್ಲಿ ಅಡ್ಡಮತದಾನದ ಭೀತಿಯಿಲ್ಲ. ನಾವು 2 ಸಾವಿರಕ್ಕಿಂತಲೂ ಹೆಚ್ಚಿನ ಮತ ಪಡೆಯುತ್ತೇವೆ ಎಂದು ನಳಿನ್‌ ಕುಮಾರ್‌ ಕಟೀಲ್ ಹೇಳಿದರು.


ಹಲವು ಯೋಜನೆ, ಅಭಿವೃದ್ಧಿ ನೀಡಿದ್ದರಿಂದ ಬಿಜೆಪಿಗೆ ಆಶೀರ್ವಾದ:
ಗ್ರಾ.ಪಂಗಳಿಗೆ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಅತಿ ಹೆಚ್ಚು ಅನುದಾನ, ಕುಡಿಯವ ನೀರಿನ ಯೋಜನೆಯಲ್ಲಿ ಮನೆಮನೆಗೆ ಗಂಗೆ, ದೀನ್ ದಯಾಳ್ ವಿದ್ಯುದ್ದೀಕರಣ ಯೋಜನೆಯಲ್ಲಿ ಗ್ರಾ.ಪಂಗಳಿಗೆ ಬೆಳಕು ಯೋಜನೆ, ಗ್ರಾ.ಪಂಗಳಿಗೆ ಗೈಡ್ ಲೈನ್ ಬದಲಾವಣೆ ಮಾಡಿ ನರೇಗಕ್ಕೆ ಹೆಚ್ಚು ಅನುದಾನ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸ್ವರ್ಣಗ್ರಾಮ ಪರಿಕಲ್ಪನೆಯಲ್ಲಿ ಹೆಚ್ಚು ಅನುದಾನ, ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಮ್ಮೂರು ನಮ್ಮ ರಸ್ತೆ ಮೂಲಕ ಗ್ರಾ.ಪಂ ಜೋಡಿಸುವ ಕೆಲಸ. ಅತಿ ಹೆಚ್ಚು ಗೌರವ ಧನ ಬಂದಿರುವುದು ಬಿಜೆಪಿ ಕಾಲಘಟ್ಟದಲ್ಲಿ. ನಗರೋತ್ಥಾನ ಯೋಜನೆಯಲ್ಲಿ ಪಟ್ಟಣ ಪಂಚಾಯತ್‌ಗಳಿಗೆ ಹೆಚ್ಚು ಅನುದಾನ, ನರೇಂದ್ರ ಮೋದಿಯವರಿಂದ ಅಮೃತನಗರ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಹಾನಗರ ಪಾಲಿಕೆಗಳ ಅಭಿವೃದ್ಧಿ. ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗ ಅವರ ಜವಾಬ್ದಾರಿಗೆ ಅನುಸಾರವಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದರೆ ಅದು ಬಿಜೆಪಿ ಸರಕಾರ ಮಾತ್ರ ಎಂಬುದು ಸ್ಪಷ್ಟ. ಈ ಎಲ್ಲಾ ಕಾರಣಕ್ಕೆ ಚುನಾಯಿತ ಪ್ರತಿನಿಧಿಗಳು ಬಿಜೆಪಿಗೆ ಆಶಿರ್ವಾದ ಮಾಡಲು ಸಿದ್ದರಾಗಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ವಿಧಾನಪರಿಷತ್ ಚುನಾವಣೆ ಉಸ್ತುವಾರಿ ದೇವದಾಸ್, ಸಂಚಾಲಕ ನಿತೀಶ್ ಕುಮಾರ್ ಶಾಂತಿವನ, ಸಹ ಸಂಚಾಲಕ ಸಂತೋಷ್ ಕುಮಾರ್ ರೈ ಕೈಕಾರ, ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ,ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here