*ಮಕ್ಕಳ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ಸಹಕಾರಿ-ಅರಿಯಡ್ಕ ಹಾಜಿ
*ಇಲ್ಲಿ ಆಡಿದ ಪ್ರತಿಭೆಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ-ಅಶೋಕ್ ಶೆಟ್ಟಿ
ಪುತ್ತೂರು: 2024-25ನೇ ಸಾಲಿನ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟ ಅ.22ರಂದು ಪಾಪೆಮಜಲು ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಮಾತೃಶ್ರೀ ಅರ್ಥ್ ಮೂವರ‍್ಸ್ ಸಂಸ್ಥೆಯ ಮಾಲಕ ಮೋಹನದಾಸ್ ರೈ ಕುಂಬ್ರ ಅವರು ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಕ್ರೀಡಾಕೂಟಗಳು ಮಕ್ಕಳ ಪ್ರತಿಭೆ ಅನಾವರಣಕ್ಕಿರುವ ಉತ್ತಮ ವೇದಿಕೆಯಾಗಿದ್ದು ಇಲ್ಲಿ ಅರಳಿದ ಪ್ರತಿಭೆಗಳು ಭವಿಷ್ಯದಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ಪ್ರಗತಿಪರ ಕೃಷಿಕ ರಾಮ್ ಮೋಹನ್ ಭಟ್ ಮಾತನಾಡಿ ವಿದ್ಯೆಯ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಬೇಕಾಗಿದ್ದು ದೈಹಿಕ, ಮಾನಸಿಕ ಸಮತೋಲನಕ್ಕೆ ಕ್ರೀಡೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕ್ರೀಡಾ ಜ್ಯೋತಿ ಪ್ರಜ್ವಲನೆಗೈದ ಉದ್ಯಮಿ ಅಶೋಕ್ ಶೆಟ್ಟಿ ಮಾತನಾಡಿ ನಾನು ಪಾಪೆಮಜಲು ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು ನಮ್ಮ ಶಾಲೆಯಲ್ಲಿ ಇಂತಹ ಕ್ರೀಡಾಕೂಟ ಆಯೋಜನೆಗೊಂಡಿರುವುದು ಖುಷಿ ನೀಡಿದೆ, ಈ ಮೈದಾನದಲ್ಲಿ ಆಡಿದ ಪ್ರತಿಭೆಗಳು ಮುಂದಕ್ಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಆಶಿಸಿದರು.
ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಗ್ರಾಮೀಣ ಭಾಗದ ಶಾಲೆಯಲ್ಲಿ ಇಷ್ಟೊಂದು ವ್ಯವಸ್ಥಿತ ಕ್ರೀಡಾಕೂಟ ನಡೆಯುತ್ತಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ, ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಅವರ ಬಳಗದವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ನಿವೃತ್ತ ಶಿಕ್ಷಕ ನಾರಾಯಣ ಮನಿಯಾಣಿ ಮಾತನಾಡಿ ಪಾಪೆಮಜಲು ಶಾಲೆ ಕ್ರೀಡಾಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದು ಇದರ ಹಿಂದೆ ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಅವರ ದೊಡ್ಡ ಕೊಡುಗೆ ಇದೆ, ಜೊತೆಗೆ ಶಿಕ್ಷಕಿ ಸವಿತಾ ಮತ್ತು ಬಳಗದ ಶ್ರಮ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಾಪೆಮಜಲು ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ನಮ್ಮ ಶಾಲೆ ಕಲಿಕೆಯಲ್ಲೂ, ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದು ಇದಕ್ಕೆ ಶಾಲಾ ಶಿಕ್ಷಕ ವೃಂದದವರ ಪರಿಶ್ರಮ ಮತ್ತು ಎಸ್‌ಡಿಎಂಸಿ ಮತ್ತು ಊರವರ, ದಾನಿಗಳ ಸಹಕಾರವೇ ಕಾರಣ ಎಂದು ಹೇಳಿದರು. ಕೊಡುಗೈ ದಾನಿ ಚಿಕ್ಕಪ್ಪ ನಾಯ್ಕ್ ಸಹಿತ ಹಲವಾರು ದಾನಿಗಳು ನಮ್ಮ ಶಾಲೆ ಜೊತೆ ಕೈ ಜೋಡಿಸಿದ್ದರ ಫಲವಾಗಿ ಇಂದು ನಮ್ಮ ಶಾಲೆ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ, ಅರಿಯಡ್ಕ, ಒಳಮೊಗ್ರು, ಮಾಡ್ನೂರು ಗ್ರಾಮದವರೂ ನಮಗೆ ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ, ಅಂತಹ ದಾನಿಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ಪಾಪೆಮಜಲು ಪ್ರೌಢ ಶಾಲೆ ವಾಲಿಬಾಲ್‌ನಲ್ಲಿ ಸತತ 8 ವರ್ಷಗಳಿಂದ ತಾಲೂಕು ಮಟ್ಟದಲ್ಲಿ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದು ಇದಕ್ಕೆ ನಮ್ಮ ಶಾಲೆಯ ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಪ್ರಮುಖ ಕಾರಣ, ಪ್ರವೀಣಾ ರೈ ಅವರು ಸರಕಾರದ ಸಂಬಲಕ್ಕೆ ಅನುಸಾರವಾಗಿ ಕೆಲಸ ಮಾಡದೆ ಅದರಾಚೆಗೂ ಕೆಲಸ ಮಾಡಿದ ಪರಿಣಾಮ ನಮ್ಮ ಮಕ್ಕಳು ಇಂದು ಕ್ರೀಡೆಯಲ್ಲಿ ಬೆಳಗುತ್ತಿದ್ದಾರೆ ಎಂದು ಹೇಳಿದರು.
ದೈ.ಶಿ.ಶಿಕ್ಷಕಿ ಪ್ರವೀಣಾ ರೈಗೆ ಸನ್ಮಾನ:
ಪಾಪೆಮಜಲು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು ಹತ್ತು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಮಕ್ಕಳ ಕ್ರೀಡಾ ಸಾಧನೆಗೆ ಶಾಲಾ ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಅವರ ತರಬೇತಿ ಕಾರಣವಾಗಿದ್ದು ಶಾಲೆಗೂ, ಊರಿಗೂ ಹೆಮ್ಮೆ ತಂದ ಪ್ರವೀಣಾ ರೈ ಅವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಪ್ರವೀಣಾ ರೈ ಮಾತನಾಡಿ ನಾನು ಸನ್ಮಾನ ಬಯಸಿ ಯಾವುದನ್ನೂ ಮಾಡಿಲ್ಲ, ಶಾಲಾ ಕಾಯಾಧ್ಯಕ್ಷರ ಕೋರಿಕೆಯ ಮೇರೆಗೆ ಸನ್ಮಾನ ಸ್ವೀಕರಿಸಿದ್ದೇನೆ, ಈ ಸನ್ಮಾನ ಇನ್ನಷ್ಟು ಕೆಲಸ ಮಾಡಲು ಪ್ರೇರೇಪಣೆಯಾಗಲಿದೆ ಎಂದು ಹೇಳಿದರು.
ಶಿಕ್ಷಣ ಸಂಯೋಜಕಿ ಅಮೃತಕಲಾ, ಸಂಯೋಜಕ ಹರಿಪ್ರಸಾದ್, ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಜಗನ್ನಾಥ ರೈ ಗುತ್ತು, ಸಮಯೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯಾ, ಪಾಪೆಮಜಲು ಸ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಕುಮಾರ್, ಮುಖ್ಯ ಶಿಕ್ಷಕಿ ಶಶಿಕಲಾ, ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಪಾಪೆಮಜಲು ಪ್ರೌಢ ಶಾಲಾ ಎಸ್‌ಡಿಎಂಸಿ ಸದಸ್ಯ ಚನಿಯಪ್ಪ ಕೆ, ಕಾವು ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಅಮ್ಮು ರೈ ಅಂಕೊತ್ತಿಮಾರ್, ದೇವಣ್ಣ ರೈ, ರಮೇಶ್ ಆಳ್ವ, ಕೆ.ಕೆ ಇಬ್ರಾಹಿಂ ಹಾಜಿ, ಶಿಕ್ಷಣ ತಜ್ಞ ದಶರಥ ರೈ, ನಿವೃತ್ತ ವಲಯಾರಣ್ಯಾಧಿಕಾರಿ ಸುಬ್ರಹ್ಮಣ್ಯ ಗೌಡ, ನಿವೃತ್ತ ಶಿಕ್ಷಕಿ ಇಂದಿರಾ, ದಾನಿಗಳಾದ ಅಶೋಕ್ ರೈ ದೇರ್ಲ, ಪಿ.ಬಿ ಅಮ್ಮಣ್ಣ ರೈ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನ ಹೊಂದಿದ ಶಾಲಾ ದಾನಿ ತಿಮ್ಮಪ್ಪ ಗೌಡರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು.
ಪಾಪೆಮಜಲು ಪ್ರೌಢ ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಪ್ರವೀಣಾ ರೈ ವಂದಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾವು ಪ್ರಾ.ಕೃ.ಪ.ಸಹಕಾರ ಸಂಘದ ನಿರ್ದೇಶಕರು, ಊರವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು, ಎಸ್‌ಡಿಎಂಸಿಯವರು, ಅಡುಗೆ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.