ಪುತ್ತೂರು:ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲೇ ಉಳಿತಾಯ ಮಾಡುವುದರಿಂದ ತಮ್ಮ ಮತ್ತು ದೇಶದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಗೀತಾ ವಿಜಯ್ ಅವರು ಹೇಳಿದರು.
ಸುದಾನ ಸಮೂಹ ಸಂಸ್ಥೆಗಳ ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ಅ. 29 ರಂದು ಸಂಸ್ಥೆಯ ಎಡ್ವರ್ಡ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಹಣಕಾಸಿನ ಸಾಕ್ಷರತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಗೀತಾ ವಿಜಯ್ ರವರು ವಿದ್ಯಾರ್ಥಿಗಳಿಗೆ ಉಳಿತಾಯದ ಮಹತ್ವವನ್ನು ತಿಳಿಸುತ್ತಾ ಹಣವನ್ನು ಜಾಗರೂಕತೆಯಿಂದ ಬಳಸಬೇಕೆಂದು ಹಾಗೂ ಉಳಿತಾಯ ನಡೆಸಲು ವಿವಿಧ ಖಾತೆಗಳ ಬಗ್ಗೆ ಹಾಗೂ ವಿಮೆ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನೆಹರುನಗರ ಶಾಖೆಯ ಮ್ಯಾನೇಜರ್ ಶ್ರೀಮತಿ ಶೆರೆನಾ ಕೆ ಜಿ ಅವರು ಪ್ರಧಾನ ಮಂತ್ರಿ ಜನ್ ಧನ್ ಖಾತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಮುಕುಂದಕೃಷ್ಣರವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿಯರಾದ ಧನ್ಯಶ್ರೀ ಹಾಗೂ ಕಸ್ತೂರಿ ಇವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸ್ವಸ್ತಿ ಶೆಟ್ಟಿ ಮತ್ತು ಬಳಗ ಪ್ರಾರ್ಥಿಸಿದರು. ಆಂಗ್ಲ ವಿಭಾಗದ ಉಪನ್ಯಾಸಕಿ ಕ್ಯಾರಲ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಬಂಧುಗಳು ಉಪಸ್ಥಿತರಿದ್ದರು.