ಹಿರಿಯರ ಹೆಸರಲ್ಲೋ, ಹೋರಾಟಗಾರರ ಹೆಸರಲ್ಲೋ, ಅಥವಾ ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಸವಿನೆನಪಿಗಾಗಿ ತಂಗುದಾಣ ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡುವುದು ಪ್ರತಿನಿತ್ಯ ನೋಡುತ್ತಿದ್ದೇವೆ. ಆದರೆ ಇದೊಂದು ಈವರೆಗೂ ಎಲ್ಲೂ ನಡೆಯದ ಸೇವಾ ಕಾರ್ಯ ಎಂಬುದಂತೂ ಸತ್ಯ. ಬಂಟ್ವಾಳದಲ್ಲಿ ನ್ಯಾಯವಾದಿಯಾಗಿರುವ ಶ್ರೀಮತಿ ಚೇತನಾ ರಾಮಚಂದ್ರ ಶೆಟ್ಟಿಯವರು ತಮ್ಮ ಪ್ರೀತಿಯ ಗೋಮಾತೆ ಗೌರಿಯ ಸ್ಮರಣಾರ್ಥ ಅದ್ಧೂರಿಯಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಾಮಾಜಕ್ಕೆ ಕೊಡುಗೆ ನೀಡುವ ಮೂಲಕ ಅಗಲಿದ ಗೋಮಾತೆಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಮೂಡುನಡುಗೋಡು ಗ್ರಾಮದ ದಂಡೆಗೋಳಿ ನಿವಾಸಿಯಾದ ಚೇತನಾ ರಾಮಚಂದ್ರ ಶೆಟ್ಟಿಯವರು ತನ್ನ ಮನೆ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ಹೈಟೆಕ್ ತಂಗುದಾಣ ನಿರ್ಮಿಸಿ ಕೊಡುಗೆ ನೀಡಿದ್ದಾರೆ.
ಶನಿವಾರ ಗೋಧೋಳಿ ಲಗ್ನದಲ್ಲಿ ದಂಡೆ ಮಹಾಗಣಪತಿ ದೇವಸ್ಥಾನದ ಮುಖ್ಯ ಅರ್ಚಕರಾದ ಗಣೇಶ್ ಉಡುಪ, ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ ನೇತೃತ್ವದಲ್ಲಿ ತಂಗುದಾಣ ನನ್ನು ಲೋಕಾರ್ಪಣೆ ಮಾಡಿದರು. ಏಳೆಂಟು ವರ್ಷಗಳಿಂದ ಒಡಹುಟ್ಟಿದವರಂತೆ ಮನೆಯಲ್ಲಿದ್ದ ಗೋಮಾತೆ ಗೌರಿ ಏಳು ತಿಂಗಳ ಹಿಂದೆ ಮೃತಪಟ್ಟಿದ್ದಾಳೆ. ಗೌರಿಯ ಅಗಲಿಕೆಯಿಂದ ನೋವಿನಲ್ಲಿರುವ ನಾನು ಆಕೆಯ ಸವಿನೆನಪಿಗಾಗಿ ಸಮಾಜಕ್ಕೆ ತಂಗುದಾಣ ಕೊಡುಗೆ ನೀಡುತ್ತೇನೆ. ಆ ಮೂಲಕ ಗೋಮಾತೆ ಗೌರಿ ಶಾಶ್ವತವಾಗಿ ನಮ್ಮೊಂದಿಗಿದ್ದಾಳೆ ಎನ್ನುವುದು ನ್ಯಾಯವಾದಿ ಚೇತನಾ ರಾಮಚಂದ್ರ ಶೆಟ್ಟಿಯವರ ಮಾತಾಗಿದೆ. ತಂಗುದಾಣ ಲೋಕಾರ್ಪಣೆ ಸಮಾರಂಭದಲ್ಲಿ ವಸಂತ ಶೆಟ್ಟಿ ಕೇದಗೆ, ಚಂದ್ರಾವತಿ ಶೆಟ್ಟಿ ಬುಡೋಳಿ, ನಳಿನಾಕ್ಷಿ ಶೆಟ್ಟಿ ದಂಡೆ, ಕಮಲಾಕ್ಷಿ ಶೆಟ್ಟಿ ಶೀನಾಜೆ ಸಹಿತ ಊರಿನ ಹಲವಾರು ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಗೋಮಾತೆಯ ಸವಿನೆನಪಿಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ತಂಗುದಾಣ ಕೊಡುಗೆ ನೀಡಿದ ಚೇತನಾ ರಾಮಚಂದ್ರ ಶೆಟ್ಟಿಯವರ ಸಮಾಜ ಸೇವೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.