ಉಪ್ಪಿನಂಗಡಿ: 187 ವರ್ಷಗಳ ಇತಿಹಾಸವನ್ನು ಹೊಂದಿರುವ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಆರೋಗ್ಯ ರಕ್ಷಿಸುವ ಸಲುವಾಗಿ ಶಾಲಾ ಹಿಂಬದಿಯಲ್ಲಿರುವ ಗಬ್ಬೆದ್ದು ನಾರುತ್ತಿರುವ ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಹಾಗೂ ಚರಂಡಿಗೆ ಮೇಲ್ಚಾವಣಿಯನ್ನು ನಿರ್ಮಿಸಬೇಕೆಂದು ಎಂದು ಶಾಲಾ ಎಸ್ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ರವರಿಗೆ ಲಿಖಿತ ಮನವಿ ಸಲ್ಲಿಸಿದರು.
ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಿಲ್ಲಿ ಕೊಳಚೆ ನೀರು ನಿಂತಿರುವುದರಿಂದ ಸೊಳ್ಳೆಗಳು ಭಾರೀ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ ಮಾತ್ರವಲ್ಲದೆ ಸಹಿಸಲಸಾಧ್ಯವಾದ ದುರ್ನಾತ ಬೀರುತ್ತಿದೆ. ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಕಾರಣದಿಂದಾಗಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿ ನೀಡಿದ ನಿಯೋಗದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಕಲ್ಲಳಿಕೆ, ಪದಾಧಿಕಾರಿ ಅಬ್ದುಲ್ ರಹಿಮಾನ್ ಯುನಿಕ್, ಎಸ್ಡಿಎಂಸಿ ಉಪಾಧ್ಯಕ್ಷೆ ಶೀಲಾ ಪದವು, ಸದಸ್ಯರಾದ ಕಲಂದರ್ ಶಾಫಿ, ಫಾರೂಕ್ ಜಿಂದಗಿ, ಬಿ. ನೆಬಿಸಾ, ಮೊಯ್ದೀನ್ ಕುಟ್ಟಿ, ಶಾಲಾ ಮುಖ್ಯ ಶಿಕ್ಷಕ ಹನುಮಂತಯ್ಯ ಉಪಸ್ಥಿತರಿದ್ದರು.