ಕಾಣಿಯೂರು: ಕುದ್ಮಾರು ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನ.14ರಂದು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಾಯಕ ಮಹಮ್ಮದ್ ತಾಜುದ್ದೀನ್ ವಹಿಸಿದ್ದರು. ಅದೃಷ್ಟ ಉದ್ಘಾಟಕರಾಗಿ 7ನೇ ತರಗತಿಯ ವಿದ್ಯಾರ್ಥಿ ಸುದರ್ಶನ್ ಆಯ್ಕೆಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ನವ್ಯ ಅನ್ಯಾಡಿ ಹಾಗೂ ಶಾಲಾ ಮುಖ್ಯಗುರು ಕುಶಾಲಪ್ಪ ಬಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಗಣ್ಯರು ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರುಗಳಿಗೆ ಮಹಾಜನಾ ಚಾರಿಟೇಬಲ್ ಟ್ರಸ್ಟ್ ಸ್ಟೀಲ್ ನೀರಿನ ಬಾಟಲ್ ಹಾಗೂ ಜಾಮಿಟ್ರಿ ಬಾಕ್ಸ್ ಅನ್ನು ಬಹುಮಾನವಾಗಿ ನೀಡಲಾಯಿತು. ವಿದ್ಯಾರ್ಥಿ ಸಂಪ್ರೀತ್ ಇವರು ಸ್ವಾಗತಿಸಿ ವಿದ್ಯಾರ್ಥಿನಿ ಫಾತಿಮತ್ ಸಹಲಾ ವಂದಿಸಿದರು. ವಿದ್ಯಾರ್ಥಿನಿ ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷವಾದ ಸಹಭೋಜನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಪರಾಹ್ನದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ವೃಂದದವರು, ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.