ದೇವರಲ್ಲಿ ವಿಶ್ವಾಸ, ನಂಬಿಕೆಯಿರಿಸಿದಾಗ ಕುಟುಂಬವು ಪಾವಿತ್ರ್ಯತೆ-ವಂ|ನೀಲೇಶ್ ಕ್ರಾಸ್ತಾ
ಪುತ್ತೂರು: ಮನುಷ್ಯ ಯಾವಾಗ ದೇವರಲ್ಲಿ ವಿಶ್ವಾಸ ಹಾಗೂ ಭರವಸೆಯಿಟ್ಟು ಮುಂದೆ ಸಾಗುತ್ತಾನೆಯೋ ಆವಾಗ ಅಸಾಧ್ಯವಾದದ್ದು ಎಲ್ಲವೂ ಸಾಧ್ಯವೆನಿಸುವುದು ಮಾತ್ರವಲ್ಲ ದೇವರು ಖಂಡಿತಾ ಆಶೀರ್ವದಿಸುತ್ತಾನೆ. ಆದ್ದರಿಂದ ದೇವರಲ್ಲಿ ಯಾರು ವಿಶ್ವಾಸ ಹಾಗೂ ನಂಬಿಕೆಯ ಭರವಸೆಯನ್ನು ಹೊಂದುತ್ತಾರೋ ಅಂತಹ ಕುಟುಂಬಗಳು ಪಾವಿತ್ರ್ಯತೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ರಜತ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ನಿಕಟಪೂರ್ವ ಧರ್ಮಗುರು, ಪ್ರಸ್ತುತ ಮಂಗಳೂರು ಫಾದರ್ ಮುಲ್ಲರ‍್ಸ್ ಆಸ್ಪತ್ರೆಯ ಸಹ ಆಡಳಿತಾಧಿಕಾರಿ ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾರವರು ಹೇಳಿದರು.
ಅವರು ನ.20 ರಂದು ನಗರದ ಹೊರವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಆಫ್ ಜೀಸಸ್ ಚರ್ಚ್ ಧರ್ಮಕ್ಷೇತ್ರದ ವಾರ್ಷಿಕ ಹಬ್ಬ(ಸಾಂತ್‌ಮಾರಿ)ದ ಪ್ರಯುಕ್ತ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಬೈಬಲ್ ವಾಚಿಸಿ ಸಂದೇಶ ನೀಡಿದರು. ಸಮಾಜದಲ್ಲಿ ನಾವು ಜೀವಿಸುವಾಗ ಜೀವನದಲ್ಲಿ ಸಾಕಷ್ಟು ಪಂಥಾಹ್ವಾನವನ್ನು ಎದುರಿಸಬೇಕಾಗುತ್ತದೆ. ಅಂತಹ ಪಂಥಾಹ್ವಾನಗಳನ್ನು ಪರಿಹರಿಸಲು ಹಾಗೂ ನಮ್ಮನ್ನು ಬಲಿಷ್ಟಗೊಳಿಸಲು ಪ್ರಾರ್ಥನೆ ಎಂಬುದು ಪ್ರಮುಖ ಆಯುಧವಾಗಿದೆ. ಆಹಾರ, ನೀರು, ಗಾಳಿಯಿಲ್ಲದಿದ್ದರೂ ಸ್ವಲ್ಪ ಸಮಯ ಬದುಕಬಹುದು ಆದರೆ ಭಕ್ತಿಪೂರ್ವಕ ಪ್ರಾರ್ಥನೆ ಇಲ್ಲದಿದ್ದರೆ ಬದುಕಲು ಕಷ್ಟವೆನಿಸುತ್ತದೆ. ಕ್ರೈಸ್ತ ಪವಿತ್ರ ಸಭೆಯಲ್ಲಿ ಕ್ರೈಸ್ತ ಬಾಂಧವರು ಬಲಿಷ್ಟ ಜೀವನ ಸಾಗಿಸಲು ಪ್ರಾರ್ಥನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು ಕುಟುಂಬದಲ್ಲಿ ಕೆಲವೊಮ್ಮೆ ಸಾವು ನೋವುಗಳು ಬರಸಿಡಿಲಿನಂತೆ ಎದುರಾಗುತ್ತದೆ. ಆವಾಗ ನಾವು ದೇವರಲ್ಲಿ ನಂಬಿಕೆಯಿರಿಸಿ ಶ್ರದ್ಧಾಭಕ್ತಿಯ ಮೂಲಕ ಪ್ರಾರ್ಥನೆಯನ್ನು ಮಾಡಿಕೊಂಡಾಗ ಕಷ್ಟಗಳು ದೂರವಾಗುವುದು ಎಂದ ಅವರು ದೇವರು ಸತ್ಯದ, ನೀತಿಯ ಪಾಠವನ್ನು ನಮಗೆ ಬೋಧಿಸುವುದರ ಜೊತೆಗೆ ನಮ್ಮಲ್ಲಿ ಸೇವಾ ಮನೋಭಾವ, ದಯೆ, ಕ್ಷಮಾಪಣಾಗುಣ, ತ್ಯಾಗ, ನಿಸ್ವಾರ್ಥತೆ ಮನೆ ಮಾಡಿದಾಗ ನಮ್ಮ ಕುಟುಂಬ ಆಶೀರ್ವದಿಸಲ್ಪಡುತ್ತದೆ ಎಂದು ಅವರು ಹೇಳಿದರು.
ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಐದೂವರೆ ವರ್ಷ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಮಂಗಳೂರಿನ ಜೆಪ್ಪು ಸಂತ ಜೋಸೆಫ್ ವಾಜ್ ಇಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ವಂ|ವಲೇರಿಯನ್ ಫ್ರ್ಯಾಂಕ್‌ರವರು ಹಬ್ಬದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಧರ್ಮಗುರುಗಳಾದ ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಲೋಹಿತ್ ಅಜೇಯ್ ಮಸ್ಕರೇನ್ಹಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ವಂ|ಜೆರಾಲ್ಡ್ ಡಿ’ಸೋಜ, ಬನ್ನೂರು ಸಂತ ಅಂತೋನಿ ಚರ್ಚ್‌ನ ವಂ|ಬಾಲ್ತಜಾರ್ ಪಿಂಟೊ, ಸುಳ್ಯ ಚರ್ಚ್‌ನ ವಂ|ವಿಕ್ಟರ್ ಡಿ’ಸೋಜ, ಪಂಜ ಚರ್ಚ್‌ನ ವಂ|ಅಮಿತ್ ಡಿ’ಸೋಜ, ಕೊಕ್ಕಡ ಚರ್ಚ್‌ನ ಅನಿಲ್ ಪ್ರಕಾಶ್ ಡಿ’ಸಿಲ್ವ, ಬಜ್ಪೆ ಚರ್ಚ್‌ನ ಆತ್ಮೀಕ ನಿರ್ದೇಶಕ ಅನಿಲ್ ಲೋಬೊ, ಬೆಂದೂರು ವಾಸ್ತವ್ಯ ನಿವಾಸದ ಧರ್ಮಗುರು ವಂ|ಡೆಂಝಿಲ್ ಲೋಬೊ, ವಾಮಂಜೂರು ಚರ್ಚ್‌ನ ವಂ|ಐವನ್ ಡಿ’ಸೋಜ, ಸಂಪಾಜೆ ಚರ್ಚ್‌ನ ವಂ|ಪಾವ್ಲ್ ಕ್ರಾಸ್ತಾ, ಸೇವಾದರ್ಶಿಗಳಾದ ಮರ್ವಿನ್ ಪ್ರವೀಣ್ ಲೋಬೊ, ಅವಿತ್ ಪಾಯಿಸ್ ಸೇರಿದಂತೆ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ನೂರಾರು ಭಕ್ತಾದಿಗಳೊಂದಿಗೆ ದಿವ್ಯ ಪೂಜೆಯನ್ನು ಅರ್ಪಿಸಲಾಯಿತು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಕಾರ್ಯದರ್ಶಿ ಪ್ರೊ|ಎಡ್ವಿನ್ ಡಿ’ಸೋಜ, 11 ವಾಳೆ ಗುರಿಕಾರರು, ಚರ್ಚ್ ಪಾಲನಾ ಸಮಿತಿ ಸದಸ್ಯರು, ಸಂತ ವಿನ್ಸೆಟ್ ದೇ ಪಾವ್ಲ್ ಸಭಾ, ಐಸಿವೈಎಂ, ವೈಸಿಎಸ್, ಮರಿಯಾಳ್ ಸೊಡ್ಯಾಲಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ವೇದಿ ಸೇವಕರು, ಗಾಯನ ಮಂಡಳಿ ದಿವ್ಯ ಬಲಿಪೂಜೆಯಲ್ಲಿ ಸಹಕರಿಸಿದರು. ಸಾವಿರಾರು ಭಕ್ತಾಧಿಗಳು ದಿವ್ಯ ಬಲಿಪೂಜೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ಪವಿತ್ರ ಮೋಂಬತ್ತಿ ವಿತರಣೆ…
ಪುತ್ತೂರು ವಲಯ ಚರ್ಚ್‌ಗಳ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹಬ್ಬಕ್ಕೆ ವಸ್ತು ರೂಪದಲ್ಲಿ ಹಾಗೂ ಹಣದ ರೂದಲ್ಲಿ ಸಹಕಾರವಿತ್ತ ದಾನಿಗಳಿಗೆ ಪವಿತ್ರೀಕರಿಸಿದ ಮೊಂಬತ್ತಿ ವಿತರಿಸಿದರು. ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಜೆ.ಬಿ ಮೊರಾಸ್‌ರವರು ದಾನಿಗಳ ಹೆಸರನ್ನು ಓದಿದರು ಮತ್ತು ಹಬ್ಬಕ್ಕೆ ಸಹಕಾರವಿತ್ತವರಿಗೆ ಕೃತಜ್ಞತೆ ಸಲ್ಲಿಸಿದರು.