ನ.26ಕ್ಕೆ ಗದ್ದೆಕೋರಿ ಉತ್ಸವ, 30ಕ್ಕೆ ಲಕ್ಷದೀಪೋತ್ಸವ
ಪುತ್ತೂರು: ತುಳುನಾಡಿನಲ್ಲಿ ಭತ್ತವನ್ನು ಬೇಸಾಯ ಮಾಡುವ ರೈತಾಪಿಜನರು ಆರಾಧಿಸುತ್ತಾ ಬಂದಿರುವ ಆಚರಣೆಯಲ್ಲಿ ಪೂಕರೆ ಹಾಕುವ ಪದ್ಧತಿಯೂ ಒಂದು.
ಫಲವಂತಿಕೆಯ ಹಿನ್ನೆಲೆಯಲ್ಲಿ ಸುಗ್ಗಿ ಪೂಕರೆಯ ವೇಳೆ ಬೇಸಾಯದ ದೈವವಾಗಿ ಬಸವ ದೈವ (ಎರುಕೋಲ) ದೈವದ ಆರಾಧನೆ ನಡೆಯುತ್ತದೆ. ಪೂಕರೆಗೆ ಗದ್ದೆಕೋರಿ ಕಂಡದಕೋರಿ ಎಂದೂ ಕರೆಯಲಾಗುತ್ತದೆ.
ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪೂರ್ತಿಯಾಗಿ ಕೆಲದಶಕಗಳ ಹಿಂದೆ ಭತ್ತದ ಬೇಸಾಯ ಮಾಡಲಾಗುತ್ತಿತ್ತು ಬಂಗರಸನ ಕಾಲದಲ್ಲೇ ಇಲ್ಲಿ ಕಂಬಳ ನಡೆಯುತ್ತಿತ್ತು ಎಂದು ಇಲ್ಲಿನ ಇತಿಹಾಸ ಸಾರುತ್ತವೆ.ದೇವರಮಾರು ಗದ್ದೆಯಲ್ಲಿ ಪೂಕರೆ ಉತ್ಸವದ ಆಚರಣೆಯೂ ಇಲ್ಲಿನ ಸಂಪ್ರದಾಯಕ್ಕೆ ಸೇರಿದೆ.
ದೇವಾಲಯದ ಒಳಾಂಗಣದಲ್ಲಿರುವ ಶಿಲಾಶಾಸನದಲ್ಲೂ ದೇವಳದ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದ ಮತ್ತು ಭತ್ತದ ಮುಡಿಗಳ ಹಂಚಿಕೆಯ ಬಗ್ಗೆ ಮಾಹಿತಿ ಇದೆ. ದೀಪಾವಳಿಯಂದು ಬಲಿ ಹೊರಟು ಮುಂದಿನ ನಿಗದಿತ ದಿನಗಳಲ್ಲಿ ಪೂಕರೆ ಉತ್ಸವ, ಲಕ್ಷ ದೀಪೋತ್ಸವವೂ ಇಲ್ಲಿ ನಡೆಯುತ್ತದೆ.
ನಿತ್ಯ ಬಲಿಮೂರ್ತಿಯೊಂದಿಗೆ ದೇವರ ಸವಾರಿ:
ಪೂಕರೆಯ ಅಂಗವಾಗಿ, ಹಿಂದಿನ ಕಾಲದಿಂದ ಅನೂಚಾನವಾಗಿ ನಡೆದು ಬಂದ ಈ ಕ್ಷೇತ್ರದ ಪೂರ್ವಶಿಷ್ಟ ಸಂಪ್ರದಾಯದಂತೆ ಪುಷ್ಪಕನ್ನಡಿ ರಹಿತವಾಗಿ ನಿತ್ಯದ ಬಲಿಮೂರ್ತಿಗೆ ಆಭರಣ ಮತ್ತು ವಿವಿಧ ಹೂವು ಗಳಿಂದ ಓರಣವಾಗಿ ಅಲಂಕರಿಸಿ ಮುಸ್ಸಂಜೆಯಲ್ಲಿ ಶ್ರೀ ದೇವರ ಬಲಿಹೊರಟು ಹಸ್ರಕೊಡೆ, ಛತ್ರ ಚಾಮರ, ಬಸವ ದೈವ (ಎರುಕೋಲ) ದೈವದೊಂದಿಗೆ ಸರ್ವ ವಾದ್ಯಘೋಷ, ದಂಡುಸಿಲಾಲ್, ದೇವಳದ ಬಸವ, ಬೇತಾಳ, ಸಕಲ ಬಿರುದಾವಳಿ ನಿಶಾನಿಯೂ ಸೇರಿ ದೇವಳದ ಪಶ್ಚಿಮ ಭಾಗದಿಂದ ಸವಾರಿಯು ರಾಜಬೀದಿಯಲ್ಲಿ ಪೂಕರೆಕಟ್ಟೆಯವರೆಗೆ ಸಾಗಿ ಪೂಕರೆಯ ಕ್ರಮಗಳು ಜರಗಿ ಕಟ್ಟೆಪೂಜೆ ನೆರವೇರಿದ ಬಳಿಕ ದಾರಿಯಲ್ಲಿ ಆರತಿ, ಹಣ್ಣುಕಾಯಿ ಸ್ವೀಕರಿಸುತ್ತಾ ದೇಗುಲಕ್ಕೆ ಹಿಂತಿರುಗುವುದು ಈ ಸವಾರಿಯ ಪದ್ಧತಿ.
ನ.26ಕ್ಕೆ ಗದ್ದೆಕೋರಿ ಉತ್ಸವ, 30ಕ್ಕೆ ಲಕ್ಷದೀಪೋತ್ಸವ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.26ಕ್ಕೆ ಸಂಜೆ ಗಂಟೆ 6ಕ್ಕೆ ಗದ್ದೆಕೋರಿ ಉತ್ಸವ(ಪೂಕರೆ) ಉತ್ಸವ ನಡೆಯಲಿದೆ. ನ.30ಕ್ಕೆ ಲಕ್ಷದೀಪೋತ್ಸವ ನಡೆಯಲಿದೆ. ಸಂಜೆ ಗಂಟೆ 7.30ಕ್ಕೆ ಪೂಜೆ ಬಳಿಕ ದೇವರ ಬಲಿ ಹೊರಟು ಒಳಾಂಗಣ ಹಾಗು ಹೊರಾಂಗಣದಲ್ಲಿ ಉತ್ಸವ ನಡೆದು, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ ಮತ್ತು ಕೆರೆ ಉತ್ಸವ ಜರುಗಲಿದೆ.