ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಮೋರಿ ಕಾಮಗಾರಿ-ಬನ್ನೂರಿನಲ್ಲಿ ಕಳಪೆ ಕಾಮಗಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ

0

ಪುತ್ತೂರು: ನಗರೋತ್ಥಾನದ ಅನುದಾನದಲ್ಲಿ ರಸ್ತೆಯಲ್ಲಿನ ಹಳೆಯ ಮೋರಿ ತೆರವು ಮಾಡಿ ಹೊಸ ಸ್ಲ್ಯಾಬ್ ಮೋರಿ ಅಳವಡಿಸುವ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್ ಒಡೆದರೂ ಅದನ್ನು ದುರಸ್ತಿಗೊಳಿಸದೆ ಕಾಮಗಾರಿ ನಡೆಸಿದ್ದಲ್ಲದೆ ನಡೆದ ಕಾಮಗಾರಿಯನ್ನು ಪೂರ್ಣಗೊಳಿಸದೆ ಅರ್ಧದಲ್ಲೇ ಬಿಟ್ಟು ಹೋದ ಘಟನೆ ಬನ್ನೂರು ಜನತಾ ಕಾಲೋನಿಯಲ್ಲಿ ನಡೆದಿದ್ದು, ತಿಂಗಳು ಕಳೆದರೂ ಗುತ್ತಿಗೆದಾರರ ಪತ್ತೆಯಿಲ್ಲ. ಅಧಿಕಾರಿಗಳು ಕೂಡಾ ನಿರ್ಲಕ್ಷ್ಯವಹಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಎದುರಿನಿಂದ ಹಾದು ಹೋಗುವ ಜನತಾ ಕಾಲೋನಿ ರಸ್ತೆಯ ನವೋದಯ ಯುವಕ ಮಂಡಲದ 50 ಮೀಟರ್ ದೂರದಲ್ಲಿ ರಸ್ತೆಗೆ ಹೊಸ ಸ್ಲ್ಯಾಬ್ ಮೋರಿಯನ್ನು ಅಳವಡಿಸುವ ಕಾಮಗಾರಿ 2 ತಿಂಗಳ ಹಿಂದೆ ನಡೆದಿದೆ.ಆದರೆ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪ್ ಒಡೆದಿರುವ ಕುರಿತು, ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸ್ಥಳೀಯರು ತಿಳಿಸಿದರೂ, ಅದನ್ನು ಲೆಕ್ಕಿಸದೆ ಸಿಮೆಂಟ್ ಸುರಿದು ಕಾಮಗಾರಿ ನಡೆಸಿದ್ದಾರೆ. ಇದೀಗ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಮತ್ತೊಂದು ಕಡೆ ಅಳವಡಿಸಿದ ಸ್ಲ್ಯಾಬ್ ಮೋರಿಗೆ ಅಕ್ಕಪಕ್ಕದಲ್ಲಿ ಮಣ್ಣು ಹಾಕಿ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಇದು ಕಳಪೆ ಕಾಮಗಾರಿ ಎಂದು ಸ್ಥಳೀಯ ರಸ್ತೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೆಂಟ್ರಿಂಗ್ ಮರಮಟ್ಟು ಚರಂಡಿಯಲ್ಲಿ
ಮಳೆ ನೀರು ಹರಿಯುವ ಚರಂಡಿಗೆ ಸ್ಲ್ಯಾಬ್ ಮೋರಿ ಅಳವಡಿಸುವಾಗ ಸೆಂಟ್ರಿಂಗ್ ಮರಮಟ್ಟು ಅಳವಡಿಸಿದ್ದರು. ಆದರೆ ಮೋರಿ ಕಾಮಗಾರಿ ಆಗಿದೆ ಎಂದು ಗುತ್ತಿಗೆದಾರರು ಮಣ್ಣು ಹಾಕಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಚರಂಡಿಯ ಒಳಗೆ ಸೆಂಟ್ರಿಂಗ್ ಸ್ಲ್ಯಾಬ್‌ಗಳನ್ನು ಹಾಗೆಯೇ ಉಳಿಸಿ ಹೋಗಿದ್ದಾರೆ. ಇದರಿಂದ ಮಳೆ ನೀರು ಬ್ಲಾಕ್ ಆಗಿದೆ. ಇದರ ಜೊತೆಗೆ ಕೊಳಚೆ ನೀರು ಕೂಡಾ ಅಲ್ಲಿ ಶೇಖರಣೆಯಾಗಿ ಒಡೆದ ನಳ್ಳಿ ನೀರಿನ ಪೈಪ್‌ಗೆ ಸಂಪರ್ಕ ಹೊಂದುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಚರಂಡಿ ನೀರು ನಳ್ಳಿ ನೀರಿಗೆ ಸಂಪರ್ಕದಿಂದ ರೋಗ ಭೀತಿ !
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವ ಯೋಜನೆ ಇದ್ದರೂ ನಳ್ಳಿ ನೀರಿನ ಪೈಪ್ ಒಡೆದು ಅದರಿಂದ ಸೋರಿಕೆಯಾದ ನೀರು ಚರಂಡಿಯ ನೀರಿಗೆ ಸಂಪರ್ಕ ಹೊಂದುತ್ತಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದೆ. ಪೈಪ್ ಒಡೆದು ನೀರು ಸೋರಿಕೆಯಾದರೆ 24 ಗಂಟೆಯೊಳಗೆ ದುರಸ್ತಿ ಪಡಿಸುವ ನಿಟ್ಟಿನಲ್ಲಿ ಜಲಸಿರಿಯವರಿಗೆ ಸೂಚನೆ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ನಗರಸಭೆ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದರು.ಆದರೆ ಇಲ್ಲಿ 24 ಗಂಟೆ ಹೋಗಿ 24 ದಿನವಾದರೂ ನಳ್ಳಿ ನೀರಿನ ಪೈಪ್ ದುರಸ್ತಿ ಕಾರ್ಯ ನಡೆದಿಲ್ಲ.

LEAVE A REPLY

Please enter your comment!
Please enter your name here