ಸಾಮಾನ್ಯವಾಗಿ ನಾವು ಆರೋಗ್ಯ ಅಂದ ತಕ್ಷಣ ದೈಹಿಕ ಆರೋಗ್ಯವನ್ನು ಮಾತ್ರವೇ ಪರಿಗಣಿಸಿ ಮಾತನಾಡುತ್ತೇವೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯ ಕೂಡಾ ಮುಖ್ಯ ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿಯೇ ಮರೆತುಬಿಡುತ್ತೇವೆ. ನಿಜವೆಂದರೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಯೋಗಕ್ಷೇಮವು ಒಂದು ಇನ್ನೊಂದರ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ತೊಳಲಾಟಗಳು ತಲೆನೋವು, ಆಯಾಸ, ಸ್ನಾಯುವಿನ ಒತ್ತಡ ಅಥವಾ ಜೀರ್ಣಕಾರಿ ಸಮಸ್ಯೆಗಳಂತಹ ದೈಹಿಕ ಲಕ್ಷಣಗಳಾಗಿ ಪ್ರಕಟವಾಗಬಹುದು. ಇದೇ ತರಹ ಮಧುಮೇಹ ಅಥವಾ ಹೃದ್ರೋಗದಂತಹ ದೀರ್ಘಕಾಲದ ದೈಹಿಕ ಕಾಯಿಲೆಗಳು ಆತಂಕ ಮತ್ತು ಖಿನ್ನತೆ ಸೇರಿದಂತೆ ಮಾನಸಿಕ ಆರೋಗ್ಯದ ಸವಾಲುಗಳಿಗೆ ಕಾರಣವಾಗಬಹುದು. ಸಂಶೋಧನೆಗಳೂ ಇದನ್ನೇ ಹೇಳುತ್ತವೆ. ಆದ್ದರಿಂದ ಉತ್ತಮ ಮಾನಸಿಕ ಆರೋಗ್ಯವು ಉತ್ತಮ ದೈಹಿಕ ಆರೋಗ್ಯಕ್ಕೆ ಕಾರಣವಾಗುತ್ತದೆ.
ಸಾವಧಾನತೆ, ನಿಯಮಿತ ವ್ಯಾಯಾಮದಂತಹ ಅಭ್ಯಾಸಗಳು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಮನಶ್ಶಾಸ್ತ್ರಜ್ಞ ಅಥವಾ ಮನೋವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಹೊಂದಲು ಸಹಾಯ ಮಾಡುತ್ತದೆ. ಅಸ್ವಸ್ಥವಾದ ದೇಹಕ್ಕೆ ಹೇಗೆ ವೈದ್ಯರಿಂದ ಶುಶ್ರೂಷೆ ಪಡೆಯುತ್ತೇವೆಯೋ ಹಾಗೆಯೇ, ಅಷ್ಟೇ ಸರಳವಾಗಿ ಮನಸಿನ ಅನುಚಿತ ಒತ್ತಡ ಅಥವಾ ಕಂಗಾಲುಗಳಿಗೂ ಕೂಡಾ ಮನೋವೈದ್ಯರಿಂದ ಅಗತ್ಯವಾದ ಉಪಚಾರ ಪಡೆಯುವುದು ಸಮಾಧಾನಕರ ಜೀವನ ವಿಧಾನಕ್ಕೆ ಸೂಕ್ತ ದಾರಿಯನ್ನು ಕಂಡುಕೊಳ್ಳಲು ಸಹಾಯಮಾಡುತ್ತದೆ.
ಈ ವಿಷಯದ ಬಗ್ಗೆ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಮತ್ತು ಒತ್ತಡಗಳಿಗೆ ಕೈಸೋತು ಬದುಕಿನಿಂದಲೇ ವಿಮುಖರಾಗುತ್ತಿರುವ ಯುವ ಪೀಳಿಗೆಯ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಈ ಕಾಲಮಾನದ ತುರ್ತು ಅಗತ್ಯವಾಗಿದೆ ಕೂಡಾ. ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾನಸಿಕ ಮತ್ತು ದೈಹಿಕ ಅಂಶಗಳೆರಡನ್ನೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ಹೆಚ್ಚು ಸಮತೋಲಿತ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ನೆನಪಿಡಿ, ನಿಮ್ಮ ದೇಹವನ್ನು ನೋಡಿಕೊಳ್ಳುವಷ್ಟೇ ಮುತುವರ್ಜಿಯಿಂದ ನಿಮ್ಮ ಮನಸ್ಸನ್ನೂ ನೋಡಿಕೊಳ್ಳುವುದು ಮುಖ್ಯ.