ಪುತ್ತೂರು: ಸಾಲ್ಮರ ಕೆರೆಮೂಲೆಯಲ್ಲಿ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತ ದೇಹವನ್ನು ಅಮಾನವೀಯ ರೀತಿಯಲ್ಲಿ ರಸ್ತೆ ಬದಿಯಲ್ಲೇ ಇಟ್ಟು ಹೋಗಿದ್ದಾರೆನ್ನುವ ದೂರಿನನ್ವಯ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸಹಾಯಕ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಮನೆಯ ಮುಂದಿನ ರಸ್ತೆ ಸಮೀಪ ಮಲಗಿಸಿ ಹೋಗಿದ್ದರೆನ್ನಲಾದ ಘಟನೆ ನ.16ರಂದು ಸಾಲ್ಮರ ಕೆರೆಮೂಲೆಯಲ್ಲಿ ನಡೆದಿತ್ತು.ಈ ವಿಚಾರವಾಗಿ, ಕಾರ್ಮಿಕ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವ್ರೋ, ಸ್ಟ್ಯಾನಿ ಡಯಾಸ್, ಪ್ರಕಾಶ್ ಎಂಬವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹೆನ್ರಿ ತಾವ್ರೋ ಅವರ ಪುತ್ರ ಕಿರಣ್ ಅವರು, ಆರೋಪಿಗಳಿಗೆ ಸಹಾಯ ಮಾಡಿದ್ದ ಆರೋಪದಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಕಿರಣ್ ಅವರಿಗೆ ಆರಂಭದಲ್ಲೇ ಜಾಮೀನು ಮಂಜೂರಾಗಿತ್ತು. ಪೊಲೀಸರಿಂದ ಬಂಽತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಹೆನ್ರಿ ತಾವ್ರೋ, ಸ್ಟ್ಯಾನಿ ಡಯಾಸ್ ಮತ್ತು ಪ್ರಕಾಶ್ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಹೆನ್ರಿ ತಾವ್ರೋ ಮತ್ತು ಪ್ರಕಾಶ್ ಅವರ ಪರ ನ್ಯಾಯವಾದಿ ಮಹೇಶ್ ಕಜೆ ಮತ್ತು ಸ್ಟ್ಯಾನಿ ಡಯಾಸ್ ಅವರ ಪರ ಎಸ್.ಪ್ರವೀಣ್, ಅಬ್ದುಲ್ ರಹಿಮಾನ್ ಹಿರೇಬಂಡಾಡಿ ಅವರು ವಾದಿಸಿದ್ದರು.