ಪ್ರತೀಕ್ ಓರ್ವನೆ ಕೊಲೆ ಆರೋಪಿಯಲ್ಲ- ತನಿಖೆ ನಡೆಸಿ ಇತರ ಆರೋಪಿಗಳನ್ನು ಪತ್ತೆ ಹಚ್ಚಿ
ಕಡಬ: ಬಿಳಿನೆಲೆಯ ಸಂದೀಪ್ ನನ್ನು ಪ್ರತೀಕ್ ಓರ್ವನೇ ಕೊಲೆ ಮಾಡಿ ದುರ್ಗಮ ಕಾಡಿನಲ್ಲಿ ಹಾಕಲು ಸಾಧ್ಯವೇ ಇಲ್ಲ. ಕೊಲೆ ಪ್ರಕರಣದಲ್ಲಿ ಬೇರೆ ವ್ಯಕ್ತಿಗಳು ಇದ್ದಾರೆ, ಅವರನ್ನು ತನಿಖೆ ನಡೆಸಿ ಬಂಧಿಸಬೇಕು, ಈ ಪ್ರಕರಣದಲ್ಲಿ ಕಡಬ ಪೊಲೀಸರ ನಡೆ ಸಂಶಯಾಸ್ಪದವಾಗಿದ್ದು ಅವರು ಒತ್ತಡಕ್ಕೆ ಮಣಿದು ಪ್ರಕರಣದಲ್ಲಿ ಪ್ರತೀಕ್ ಓರ್ವನೇ ಆರೋಪಿ ಎಂದು ಬಿಂಬಿಸುತ್ತಿದ್ದಾರೆ. ಕೂಡಲೇ ಸಮಗ್ರ ತನಿಖೆ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಪತ್ತೆ ದೂರು ಸ್ವೀಕರಿಸಲು ಹಿಂದೇಟು ಹಾಕಿದ ಪೊಲೀಸರು ಬಳಿಕ ಆರೋಪಿ ವಶಕ್ಕೆ ತೆಗೆದುಕೊಂಡರೂ ಶವ ಪತ್ತೆಹಚ್ಚಲು ಮುಂದಾಗಲಿಲ್ಲ. ಗ್ರಾಮಸ್ಥರ, ಕುಟುಂಬಸ್ಥರ ಪ್ರತಿಭಟನೆಯ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕೊಲೆ ಆರೋಪಿಗಳಿಗೆ ರಕ್ಷಣೆ ನೀಡುವವರಾರು ಈ ರೀತಿಯ ವಿಳಂಬ ಧೋರಣೆಯಿಂದ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ ಏಳು ದಿವಸವಾದರೂ ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರು ಆಗಲಿ, ಸದಸ್ಯರಾಗಲಿ ಮುಂದೆ ಬರಲಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕೊಲೆ ನಡೆಸಲು ಪಾಲ್ಗೊಂಡ ಇತರ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ವರಿಸಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಶಾರದಾ, ಸದಸ್ಯರು ಉಪಸ್ಥಿತರಿದ್ದು ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.