ಪುತ್ತೂರು: ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ತ್ಯಾಜ್ಯದಿಂದ ಸಿಎನ್‌ಜಿ ತಯಾರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ಪಡೆದ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಅಭಿನಂದನೀಯ ಪತ್ರ ಕಳುಹಿಸಿದ್ದಾರೆ.
ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಪ್ರಮುಖ ಉದ್ದೇಶವು ನಗರಗಳಲ್ಲಿ ದಿನನಿತ್ಯ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ನಗರವನ್ನು ಸ್ವಚ್ಛ ಮತ್ತು ಸುಂದವಾಗಿರಿಸಿರುವುದಾಗಿರುತ್ತದೆ. ಈ ನಿಟ್ಟಿನಲ್ಲಿ ತಮ್ಮ ನಗರಸಭೆ ವ್ಯಾಪ್ತಿಯಲ್ಲಿ ಪಬ್ಲಿಕ್ ಪ್ರೈವೆಟ್ ಪಾಟ್ನರ್‌ಶಿಪ್ ಮಾದರಿಯಲ್ಲಿ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಪ್ರತಿನಿತ್ಯ ಉತ್ಪಾದನೆಯಾಗುವ 10 ಟನ್ ತ್ಯಾಜ್ಯದಿಂದ ಸಿಎನ್‌ಜಿ ತಯಾರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿಯಾಗಿರುತ್ತದೆ. ಇದು ಶ್ಲಾಘನೀಯವಾಗಿದೆ. ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ರಾಜ್ಯ ಅಭಿಯಾನ ನಿರ್ದೇಶನಾಲಯದ ಪರವಾಗಿ ನಾವು ಎಸ್.ಬಿ.ಎಮ್ ಯೋಜನೆಯ ಅನುಷ್ಠಾನದ ಕಡೆಗೆ ನಿಮ್ಮ ಸಮರ್ಪಣೆ ಮತ್ತು ಬದ್ದತೆಯನ್ನು ಗೌರವಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಶುಭವನ್ನು ಹಾರೈಸುತ್ತೇವೆ ಮತ್ತು ನೀವು ಉತ್ತಮ ಕೆಲಸವನ್ನು ಹೀಗೆಯೇ ಮುಂದುವರಿಸುತ್ತಿರಿ ಎಂದು ಆಶೀಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.