ಪದಾಳ: ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ:ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ

0

ಭರದಿಂದ ನಡೆಯುತ್ತಿದೆ ಸಕಲ ಸಿದ್ಧತೆ

ಉಪ್ಪಿನಂಗಡಿ: ಹಚ್ಚ ಹಸುರಿನ ಸಸ್ಯರಾಶಿಗಳ ಮಧ್ಯೆ ಸಾವಿರಾರು ವರ್ಷಗಳ ಹಿಂದೆ ಲೋಕ ಸಂಚಾರಿಗಳಾಗಿದ್ದ ಋಷಿ ಮುನಿಗಳು ಸ್ಥಾಪಿಸಿದ ಸಾನಿಧ್ಯದಲ್ಲಿ ನೆಲೆಗೊಂಡು ಭಕ್ತಾದಿಗಳಿಂದ ಪೂಜಿಸಲ್ಪಡುತ್ತಿರುವ ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೇವರಿಗೆ ಬೆಳ್ಳಿ ಕವಚ, ಸ್ವರ್ಣ ನೇತ್ರ ಹಾಗೂ ದೈವಗಳಿಗೆ ಪಲ್ಲಕ್ಕಿ, ಮೊಗಗಳ ಸಮರ್ಪಣಾ ಸೇವೆಗಳು ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ ತಿಳಿಸಿದರು.


ಶ್ರೀ ದೇವಾಲಯದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿದೆ. ಡಿ.18ರಂದು ಬೆಳಗ್ಗೆ 10 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತವಾಗಿ ಭಕ್ತಾದಿಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆಯಾಗುವುದರೊಂದಿಗೆ ಶ್ರೀ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಬಳಿಕ ವೈದಿಕ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಭಜನಾ ಸೇವೆಗಳು ನಡೆಯಲಿವೆ. ಇದರೊಂದಿಗೆ ಯಕ್ಷಗಾನ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ, ಭಕ್ತಿ ರಸಮಂಜರಿ, ಹರಿಕಥಾ ಸತ್ಸಂಗ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳು ನಡೆಯಲಿವೆ. ಬ್ರಹ್ಮಕಲಶೋತ್ಸವದ ಆರು ದಿನಗಳಲ್ಲಿಯೂ ಬೆಳಗ್ಗೆ ಮುತ್ತು ಸಂಜೆ ಉಪಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದ ವಿತರಣೆಯಾಗಲಿದೆ.

ಡಿ.23ರಂದು ಬೆಳಗ್ಗೆ 9.18ರಿಂದ 10.18ರವರೆಗೆ ನಡೆಯುವ ಮಕರ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕವು ನಡೆದು, ಮಧ್ಯಾಹ್ನ 12ಕ್ಕೆ ಮಹಾಪೂಜೆಯಾಗಿ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 6.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು ಪ್ರಸಾದ ಭೋಜನ ನಡೆಯಲಿದೆ ಎಂದು ತಿಳಿಸಿದರು.


ಶೇ.90ರಷ್ಟು ಆಮಂತ್ರಣ ಪತ್ರ ವಿತರಣಾ ಕಾರ್ಯ ನಡೆದಿದೆ. ದೇವಾಲಯದಲ್ಲಿ ವಿವಿಧ ಕೆಲಸ ಕಾರ್ಯಗಳನ್ನು ಭಕ್ತಾದಿಗಳು ಶ್ರಮದಾನದ ಮೂಲಕ ನಡೆಸುತ್ತಿದ್ದಾರೆ. ಪ್ರತಿ ಆದಿತ್ಯವಾರ 250ರಿಂದ 300 ಜನರಿಂದ ಕರಸೇವೆ ನಡೆಯುತ್ತಿದ್ದು, ಪ್ರತಿ ದಿನ ರಾತ್ರಿ 75ರಿಂದ 100 ಮಂದಿ ಭಾಗವಹಿಸುತ್ತಿದ್ದಾರೆ. ಹೊಸದಾಗಿ ನಾಗನಕಟ್ಟೆ ನಿರ್ಮಾಣವೂ ಆಗಿದ್ದು, ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅದರ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಜಗದೀಶ ರಾವ್ ಮಣಿಕ್ಕಳ ತಿಳಿಸಿದರು.


ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ನಡುಸಾರು ಉದಯಶಂಕರ ಭಟ್ಟ ಮಾತನಾಡಿ, ಸಹಸ್ರಾರು ವರ್ಷಗಳ ಹಿಂದೆ ಲೋಕ ಸಂಚಾರಿಗಳಾಗಿದ್ದ ಶ್ರೇಷ್ಟ ಋಷಿಮುನಿಗಳು ನೇತ್ರಾವತಿ ನದಿ ತೀರದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಲೌಕಿಕ ಶಕ್ತಿ ಹಾಗೂ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವನ್ನು ಗುರುತಿಸಿದ ಮಹಾತ್ಮರು ಶ್ರೀ ಸ್ವಾಮಿಯನ್ನು ಇಂದಿನ ಪದಾಳದಲ್ಲಿ ಸ್ಥಾಪಿಸಿದರೆಂಬುದು ಐಹಿತ್ಯ. ಕಾಲಾಂತರದಲ್ಲಿ ಸ್ಥಳೀಯ ಕದಿಕ್ಕಾರು ಬೀಡಿನ ರಾಣಿಯೊಬ್ಬಳು ಪುತ್ರ ಸಂತಾನದ ಅಪೇಕ್ಷೆಯುಳ್ಳವಳಾಗಿ ಶ್ರೀ ದೇವರಿಗೆ ದೇವಸ್ಥಾನ ಕಟ್ಟಿಸುವ ಹರಕೆಯನ್ನು ಹೊತ್ತು, ಸಂಕಲ್ಪ ಪೂರೈಸಿದ ಮೇಲೆ ವೇದ ವಿದ್ವಾಂಸರಾದ ಬ್ರಾಹ್ಮಣ ಅರ್ಚಕರೊಬ್ಬರನ್ನು ದೇವಸ್ಥಾನದ ಉಸ್ತುವಾರಿ ಹಾಗೂ ದೇವರ ನಿತ್ಯಪೂಜೆಗಾಗಿ ನೇಮಿಸಿದಳಂತೆ. ಶ್ರೀ ದೇವರ ಅರ್ಚಕನಾದ ಆ ಬ್ರಾಹ್ಮಣನು ದೇವಸ್ಥಾನದ ನಿತ್ಯ ನೈಮಿತ್ತಿಕಗಳೊಂದಿಗೆ ಅಲ್ಲೇ ಸಮೀಪದಲ್ಲಿ ‘ಮಠ’ ವೊಂದನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದುದ್ದರಿಂದ ಆ ಪ್ರದೇಶವು ‘ಮಠ’ವೆಂದೇ ಖ್ಯಾತವಾಯಿತು. ದೇವಸ್ಥಾನ ಹಾಗೂ ಮಠದ ಖರ್ಚು ವೆಚ್ಚಗಳು ಅಧಿಕವಾದಾಗ ತನ್ನನ್ನು ನೇಮಿಸಿದ ರಾಣಿಯಲ್ಲಿ ನೆರವನ್ನು ಯಾಚಿಸಿದಾಗ ಬ್ರಾಹ್ಮಣನಿಗೆ ಅವಮಾನ ಮಾಡಿದ್ದರಿಂದ ಮನನೊಂದು ಅಪಮೃತ್ಯುವಿಗೆ ಈಡಾಗಿ ಮೋಕ್ಷ ಸಿಗದೇ ಬ್ರಹ್ಮರಾಕ್ಷಸನಾಗಿ, ಪರಿಸರದಲ್ಲಿ ಉಪಟಳ ನೀಡುತ್ತಿರುವ ವಿಚಾರವು ಇತ್ತೀಚೆಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ ಎಂದು ತಿಳಿಸಿದರು.

ಕದಿಕ್ಕಾರು ಬೀಡಿನ ಅರಸೊತ್ತಿಗೆಯು ಸಮಾಪ್ತಿಯಾದ ಮೇಲೆ ದೇವಾಲಯವು ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನಕ್ಕೆ ಬಂದು ನಿತ್ಯ ಪೂಜಾದಿ ಕಾರ್ಯಗಳು ನಡೆಯುತ್ತಿದ್ದವು. ಕ್ರಿ.ಶ. 1923ರಲ್ಲಿ ಈ ದೇವಾಲಯವು ಅಗ್ನಿಗೆ ಆಹುತಿಯಾಗಿ ನಾಶವಾಗುವುದರೊಂದಿಗೆ ಪೂಜಾದಿ ಕಾರ್ಯಗಳು ನಿಂತು ಹೋದವು. ಬದಲಾದ ಕಾಲಘಟ್ಟದಲ್ಲಿ ಸುತ್ತಮುತ್ತಲಿನ ಜಮೀನುಗಳ ಒಡೆತನವು ಯಾರ್ಯಾರಿಗೋ ಸೇರಿ ದೇವಸ್ಥಾನವು ಕಾಡು ಪಾಲಾಯಿತು. ಮುಂದೆ ಈ ದೇವಸ್ಥಾನದ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಡುಸಾರು ಕುಟುಂಬದವರು ಖರೀದಿಸಿದಾಗ, ದೇವಾಲಯದ ಪಳೆಯುಳಿಕೆಗಳ ಮಾಹಿತಿ ಪಡೆದು ಊರ ಹತ್ತು ಸಮಸ್ತರ ಸಹಕಾರದಿಂದ ಕ್ರಿ.ಶ. 1993ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ, ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ಪದಾಳಕ್ಕಿರುವ ಸಂಬಂಧವು ತಿಳಿದುಬಂದಂತೆ ಧರ್ಮಾಧಿಕಾರಿಗಳ ಸಲಹೆ-ಸೂಚನೆ ಪಡೆದು ಜೀರ್ಣೋದ್ಧಾರಕ್ಕೆ ಪ್ರಾರಂಭಿಸಲಾಯಿತು. ದೇವಸ್ಥಾನದ ಪರಂಬೋಕು ಎಂದು ದಾಖಲಿಸ್ಪಟ್ಟ 0.96 ಎಕ್ರೆ ಜಮೀನಿನಲ್ಲಿ ಊರ- ಪರವೂರಿನ ದಾನಿಗಳ ಸಹಕಾರದಿಂದ ಮತ್ತೆ ದೇವಸ್ಥಾನವು ಪುನನಿರ್ಮಾಣಗೊಂಡು ಕ್ರಿ.ಶ. 2009ರಲ್ಲಿ ಶ್ರೀ ದೇವರ ಪುನರ್‌ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನೆರವೇರಿತು. ಶ್ರೀ ದೇವರಿಗೆ ಬ್ರಹ್ಮಕಲಶ ನಡೆದು ಈಗಾಗಲೇ 15 ವರ್ಷಗಳಾಗಿವೆ. ಸಾನಿಧ್ಯ ವೃದ್ಧಿಗಾಗಿ ಅಷ್ಟಬಂಧ ಬ್ರಹ್ಮಕಲಶ ನಡೆಸುವ ಉದ್ದೇಶದಿಂದ ಪ್ರಶ್ನಾ ಚಿಂತನೆ ನಡೆಸಿದಾಗ ಅಲ್ಲಿ ಕಂಡು ಬಂದಂತೆ ಮೊದಲಾಗಿ ಬ್ರಹ್ಮರಾಕ್ಷಸನನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಕೊಡುವಂತೆ ತಿಳಿದುಬಂದಿದ್ದು, ಈ ಕಾರ್ಯವನ್ನು ಈಗಾಗಲೇ ಮುಗಿಸಿ, ಶ್ರೀ ದೇವಾಲಯವು ಬ್ರಹ್ಮಕಲಶೋತ್ಸಕ್ಕೆ ಅಣಿಯಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ದೈವಗಳಿಗೆ ಗುಡಿ ಕಟ್ಟಿ ಕಾಲ ಕಾಲಕ್ಕೆ ನೇಮಗಳನ್ನು ಕೊಡಲಾಗುತ್ತಿದ್ದು, ಬ್ರಹ್ಮಕಲಶೋತ್ಸವದ ಈ ಅವಧಿಯಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಶ್ರೀ ದೇವರಿಗೆ ಬೆಳ್ಳಿಯ ಕವಚ, ಸ್ವರ್ಣ ನೇತ್ರ ಹಾಗೂ ದೈವಗಳಿಗೆ ಪಲ್ಲಕ್ಕಿಯನ್ನು ಸಮರ್ಪಿಸಲು ನಿರ್ಧರಿಸಲಾಗಿದೆ. ಬ್ರಹ್ಮಕಲಶೋತ್ಸವಕ್ಕೆ 60 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದ್ದು, ಭಕ್ತಾದಿಗಳಿಂದಲೇ ಇದೆಲ್ಲಾ ಸಂಗ್ರಹವಾಗಬೇಕಿದೆ ಎಂದು ನಡುಸಾರು ಉದಯಶಂಕರ ಭಟ್ಟ ತಿಳಿಸಿದರು.


ಹೊರೆ ಕಾಣಿಕೆ ಸಮಿತಿಯ ಸಂಚಾಲಕ ಜಯಂತ ಪೊರೋಳಿ ಮಾತನಾಡಿ, ಎಲ್ಲಾ ಭಕ್ತಾದಿಗಳು ನೀಡುವ ಹೊರೆಕಾಣಿಕೆಗಳನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಕ್ರೂಢೀಕರಿಸಿಕೊಂಡು ಡಿ.18ರಂದು ಬೆಳಗ್ಗೆ 8ಗಂಟೆಗೆ ಶ್ರೀ ದೇವರ ಬೆಳ್ಳಿಕವಚ ಹಾಗೂ ಶ್ರೀ ದೈವಗಳ ಪಲ್ಲಕಿಯ ಮೆರವಣಿಗೆಯೊಂದಿಗೆ ಹಸಿರು ಹೊರೆ ಕಾಣಿಕೆಯ ಭವ್ಯ ಮೆರವಣಿಗೆಯೂ ಶ್ರೀ ದೇವಾಲಯಕ್ಕೆ ಆಗಮಿಸಲಿದೆ ಎಂದರು.


ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ್ ಅತ್ರೆಮಜಲು ಮಾತನಾಡಿ, ಬ್ರಹ್ಮಕಲಶೋತ್ಸವವು ಆರಂಭಗೊಂಡು ಮುಗಿಯುವಲ್ಲಿವರೆಗೆ ದಿ. ನಡುಸಾರು ಜಯರಾಮ ಭಟ್ ವೇದಿಕೆಯಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಿರಂತರ ಭಜನಾ ಸೇವೆಗಳು ನಡೆಯಲಿವೆ. ಶ್ರೀ ಮಯೂರ ಕಲಾ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ರಾತ್ರಿಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆಗೂ ಸಿದ್ಧತೆ ಮಾಡಲಾಗಿದ್ದು, ಸುತ್ತಮುತ್ತಲಿನವರು ಇದಕ್ಕೆ ಬೇಕಾದ ಜಾಗ ನೀಡಿದ್ದಾರೆ ಎಂದರು.


ಆಡಳಿತ ಸಮಿತಿಯ ಖಜಾಂಚಿ ರಾಮಚಂದ್ರ ಮಣಿಯಾಣಿ ಮಾತನಾಡಿ, ಬ್ರಹ್ಮಕಲಶೋತ್ಸವದ ತಯಾರಿ ಕೆಲಸಗಳಿಗಾಗಿ ಕರಸೇವೆಯ ಮೂಲಕ ಭಕ್ತಾದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರೊಂದಿಗೆ ದಾರಿಗಳನ್ನು ಅಲಂಕಾರ ಮಾಡುವಾಗ, ಫ್ಲೆಕ್ಸ್‌ಗಳನ್ನು ಅಳವಡಿಸುವ ಸಂದರ್ಭ ಸರ್ವಧರ್ಮೀಯರ ಸಹಕಾರವೂ ನಮಗೆ ಸಿಕ್ಕಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಸದಾನಂದ ಶೆಟ್ಟಿ ಕಿಂಡೋವು, ನವೀನ್ ಕುಮಾರ್ ಕಲ್ಯಾಟೆ, ಕಾರ್ಯಕಾರಿ ಸಮಿತಿಯ ಸದಸ್ಯ ಗಿರೀಶ ಆರ್ತಿಲ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿ ಲಕ್ಷ್ಮಣ ಗೌಡ ನೆಡ್ಚಿಲು, ಆರ್ಥಿಕ ಸಮಿತಿ ಸಂಚಾಲಕ ಧರ್ನಪ್ಪ ನಾಯ್ಕ ಬೊಳ್ಳಾವು, ಅಲಂಕಾರ ಸಮಿತಿಯ ಸಂಚಾಲಕ ಪ್ರಸನ್ನ ಪೆರಿಯಡ್ಕ, ಚಪ್ಪರ ಸಮಿತಿಯ ವಸಂತ ನಾಯ್ಕ ಬೊಳ್ಳಾವು ಉಪಸ್ಥಿತರಿದ್ದರು.

ಸಂತಾನ ಭಾಗ್ಯ ಪ್ರದಾಯಕ ಶ್ರೀ ಸುಬ್ರಹ್ಮಣ್ಯ
ಪುತ್ರ ಸಂತಾನದ ಸಂಕಲ್ಪ ಪೂರೈಸಿದ್ದಕ್ಕೆ ರಾಣಿಯೊಬ್ಬಳು ಈ ದೇವಾಲಯವನ್ನು ಕಟ್ಟಿಸಿದ್ದು, ಇಂದಿಗೂ ಮಕ್ಕಳ ಸಂತಾನ ಭಾಗ್ಯವಿಲ್ಲದವರು ಶ್ರೀ ಕ್ಷೇತ್ರಕ್ಕೆ ಬಂದು ಸಂಕಲ್ಪ ಮಾಡಿದರೆ ಅವರ ಸಂಕಲ್ಪವು ಈಡೇರುತ್ತದೆ ಹಾಗೂ ಮಕ್ಕಳಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ದೂರದೂರಿನಿಂದಲೂ ಇಲ್ಲಿಗೆ ಬಂದು ಮಕ್ಕಳ ಸಂತಾನದ ಸಂಕಲ್ಪ ಮಾಡಿದವರು ಬಳಿಕ ಶ್ರೀ ಕ್ಷೇತ್ರಕ್ಕೆ ಬಂದು ಹರಕೆ ತೀರಿಸಿಕೊಂಡು ಹೋದವರು ಇದ್ದಾರೆ. ಇಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವರ ಬಿಂಬವು ನವಿಲಿನ ಮೇಲೆ ಕುಳಿತಿರುವ ಭಂಗಿಯಲ್ಲಿದ್ದು, ಒಂದು ತಲೆ ಹಾಗೂ 12 ಕೈಗಳನ್ನು ಹೊಂದಿದೆ. ಈ ದೇವಾಲಯವು ಜೀರ್ಣಾವಸ್ಥೆಯಲ್ಲಿ ಇದ್ದ ಸಂದರ್ಭ ಇದ್ದ ಶ್ರೀ ಸುಬ್ರಹ್ಮಣ್ಯ ದೇವರ ಬಿಂಬದ 12 ಕೈಗಳಲ್ಲೂ ಆಯುಧಗಳಿದ್ದು, ಯುದ್ಧಕ್ಕೆ ಹೊರಟ ಉಗ್ರತೆಯನ್ನು ಇದು ಪ್ರತಿಬಿಂಬಿಸುತ್ತಿತ್ತು. ಆದರೆ ಬಳಿಕ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕೆತ್ತನೆ ಮಾಡಿದ ದೇವರ ಬಿಂಬದಲ್ಲಿ 10 ಕೈಗಳಲ್ಲಿ ಆಯುಧಗಳನ್ನು ನೀಡಿ, ಒಂದು ಕೈಯಲ್ಲಿ ಅಭಯ ಹಾಗೂ ಇನ್ನೊಂದು ಕೈಯಲ್ಲಿ ವರದ ಸ್ವರೂಪ ನೀಡಲಾಗಿದೆ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ನಡುಸಾರು ಉದಯಶಂಕರ ಭಟ್ಟ ತಿಳಿಸಿದರು.

LEAVE A REPLY

Please enter your comment!
Please enter your name here