ಪುತ್ತೂರು: ವೀರಮಂಗಲದ ಆನಾಜೆ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ವತಿಯಿಂದ ಆನಾಜೆ ವೀರಮಂಗಲ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿಯ ಸಹಕಾರದೊಂದಿಗೆ 24ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಡಿ.14ರಂದು ಸಂಜೆ ಆನಾಜೆ ವೀರಮಂಗಲ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ನಡೆಯಿತು.
ಸಂಜೆ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿತು. ವೇ.ಮೂ ಶ್ರೀವತ್ಸ ಕೆದಿಲಾಯ ಶನಿಪೂಜೆಯ ಕಥಾ ಪ್ರವಚನ ನಡೆಸಿಕೊಟ್ಟರು. ರಾತ್ರಿ ಮಹಾಪೂಜೆ ನೆರವೇರಿತು.
ಮಕ್ಕಳಿಗೆ ನೈತಿಕ, ಮೌಲ್ಯಯುತ ಶಿಕ್ಷಣ ಆವಶ್ಯಕ-ಎಸ್.ಎಂ ಉಡುಪ ಕುಂಟಾರು:
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಸಂಸ್ಕೃತ ಭಾರತಿ ಕಾಸರಗೋಡು ಇದರ ಜಿಲ್ಲಾ ಸಂಯೋಜಕ ಎಸ್.ಎಂ ಉಡುಪ ಕುಂಟಾರು ಮಾತನಾಡಿ, ಯುವಜನತೆ ದೇಶದ ಶಕ್ತಿ. ಯುವಜನತೆ ಸಮಾಜ, ದೇಶಕ್ಕಾಗಿ ದುಡಿಯಬೇಕು. ಸಮಾಜವನ್ನು ಸಂಘಟಿಸುವ ಕೆಲಸ ಯುವಜನತೆಯಿಂದ ಆಗಬೇಕು. ಜಾತೀಯತೆ ಮನೆ, ಕುಟುಂಬದ ಸಂಪ್ರದಾಯಗಳಿಗೆ ಸೀಮಿತವಾಗಿರಬೇಕು. ರಾಷ್ಟ್ರೀಯತೆಯ ವಿಚಾರದಲ್ಲಿ ನಾವೆಲ್ಲಾ ಒಂದಾಗಬೇಕು. ಜಾತಿ, ಭಾಷೆ, ಧರ್ಮ, ರಾಜಕೀಯದ ಕಲ್ಪನೆಯಲ್ಲಿ ಒಡೆಯುವ ಕೆಲಸವಾಗುತ್ತಿದೆ. ಇಂತಹ ದುಷ್ಟ ಮನಸ್ಸುಗಳ ವಿರುದ್ಧ, ಸಂಪ್ರದಾಯ, ಆಚರಣೆಗಳ ಮೇಲೆ ಆಕ್ರಮಣ ಮಾಡುವವರ ವಿರುದ್ಧ ಯುವ ಜನತೆ ಹೋರಾಡಬೇಕು. ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಮೊದಲು ನೈತಿಕ, ಮೌಲ್ಯಯುತ ಶಿಕ್ಷಣ ನೀಡಬೇಕು. ಪ್ರಶ್ನಿಸುವ ಗುಣ ಇಂದಿನ ಮಕ್ಕಳಲ್ಲಿದ್ದು ಅವರಿಗೆ ಮನಮುಟ್ಟುವ ರೀತಿಯಲ್ಲಿ ಉತ್ತರಿಸಬೇಕು. ಮಕ್ಕಳ ಮನಸ್ಸು ಅರಳಿಸುವ ಗುಣಗಳನ್ನು ನೀಡಬೇಕು. ರಾಷ್ಟ್ರ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಭವಿಷ್ಯದ ಸವಾಲುಗಳನ್ನು ಎದುರಿಸಲು ಯುವಜನತೆ ಒಂದಾಗಬೇಕು-ಜಯಮಾಲ ವಿ.ಎನ್:
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಮುಖ್ಯಗುರು ಜಯಮಾಲ ವಿ.ಎನ್ ಮಾತನಾಡಿ, ಯುವಕರಲ್ಲಿ ಶಕ್ತಿ, ಪ್ರತಿಭೆಗಳಿದ್ದು ಯುವ ಮನಸ್ಸು ಒಟ್ಟು ಸೇರಿಸಿ ಒಗ್ಗಟ್ಟು ತೋರಿಸಬೇಕು. ಭವಿಷ್ಯದ ಸವಾಲುಗಳನ್ನು ಎದುರಿಸಲು ಯುವ ಜನತೆಯನ್ನು ಬಳಸಿಕೊಳ್ಳಬೇಕು. ಧರ್ಮದ ಬಗ್ಗೆ ತಿಳಿದುಕೊಂಡು ರಕ್ಷಣೆ ಮಾಡಬೇಕು. ಆಚರಣೆ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಬೇಕು ಸತ್ಕಾರ್ಯಗಳನ್ನು ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣವಾಗಲಿ. ಅದಕ್ಕೆ ಇಂತಹ ಸಂಘಟನೆಗಳು, ಇಂತಹ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಒಬ್ಬರಿಂದ ಆಗುವ ವ್ಯತ್ಯಾಸಗಳಿಗೆ ಇಡೀ ವ್ಯವಸ್ಥೆಯನ್ನೇ ಟೀಕಿಸುವುದು ಸರಿಯಲ್ಲ-ಶಿವನಾಥ ರೈ
ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಶಿವನಾಥ ರೈ ಮೇಗಿನಗುತ್ತು ಮಾತನಾಡಿ, ಭಜನೆ ಮೊದಲಾದ ಕಾರ್ಯಕ್ರಮಗಳ ಆಯೋಜನೆ ಸುಲಭವಲ್ಲ. ಬಹಳಷ್ಟು ಕಷ್ಟವಿದೆ. ಯಾವುದೋ ಒಂದು ಸಣ್ಣ ಪುಟ್ಟ ವ್ಯತ್ಯಾಸಗಳಾದ ಇಡೀ ವ್ಯವಸ್ಥೆಯನ್ನೇ ಟೀಕೆ ಮಾಡುವುದು ಸರಿಯಲ್ಲ. ಭಜನೆಯನ್ನು ಯಾರೂ ಮಜಕ್ಕಾಗಿ ಮಾಡುವುದಲ್ಲ. ಯಾರೂ ಮೂರ್ಖರೂ ಅಲ್ಲ. ಅಂತಹ ಸಂಘಟನೆ ಬಹಳಷ್ಟು ಕಷ್ಟವಿದ್ದು ಟೀಕಿಸುವವರು ಬಂದು ನೋಡಬೇಕು. ಅವರು ಸಾಧ್ಯವಾದರೆ ಸಹಕಾರ ನೀಡಬೇಕೇ ಹೊರತು ಟೀಕಿಸುವುದಲ್ಲ ಎಂದ ಸವಾಲುಗಳನ್ನು ಸ್ವೀಕರಿಸಿ ಸಂಘಟನೆ ಬೆಳೆಯಬೇಕು. ಧಾರ್ಮಿಕ, ಸಂಘಟನೆ ಕಾರ್ಯಗಳಲ್ಲಿ ಯುವಜನತೆ ತೊಡಗಿಸಿಕೊಳ್ಳಬೇಕು. ಧಾರ್ಮಿಕವಾಗಿ ಜಾಗೃತರಾಗಲು ಶನೈಶ್ಚರ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.
ಶನಿದೇರವ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ-ಲಕ್ಷ್ಮೀಶ ತಂತ್ರಿಗಳು:
ಅಧ್ಯಕ್ಷತೆ ವಹಿಸಿದ್ದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇದವಸ್ಥಾನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಮಾತನಾಡಿ, ಶನಿಯ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಶನಿಯಲ್ಲಿ ಒಳ್ಳೆಯದ್ದು, ಕೆಟ್ಟದ್ದೂ ಇದೆ. ಶನಿದೇವ ಸದ ಒಳಿತನ್ನೇ ನೀಡುತ್ತಾರೆ. ಶನೈಶ್ಚರ ಪೂಜಾ ಕಾರ್ಯಕ್ರಮವು ಪುಣ್ಯದ ಕೆಲಸ. ಇದರಿಂದ ಸಮಾಜಕ್ಕೆ ಒಳಿತಾಗಲಿದೆ. ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ದೇವರ ನಮಗೆ ಒಳ್ಳೆಯದನ್ನೇ ಅನುಗ್ರಹಿಸುತ್ತಾರೆ ಎಂದರು.
ಮುಂದಿನ ವರ್ಷ ರಜತ ಸಂಭ್ರಮ-ಉಮೇಶ್ ಕೋಡಿಬೈಲು:
ಮಹಾವಿಷ್ಟು ಸೇವ ಪ್ರತಿಷ್ಠಾನದ ಉಪಾಧ್ಯಕ್ಷ ಉಮೇಶ್ ಕೋಡಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾವಿಷ್ಣು ಸೇವಾ ಪ್ರತಿಷ್ಠಾನವು ಕಳೆದ ೨೩ ವರ್ಷಗಳಿಂದ ಧಾರ್ಮಿಕವಾಗಿ ಸಂಘಟಿಸುವಲ್ಲಿ ತನ್ನದೇ ಛಾಪು ಮೂಡಿಸುವ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ರೀಡಾ ಕ್ಷೇತ್ರದಲ್ಲಿ ಕೊಡುಗೆ ನೀಡುವ ಮೂಲಕ ಕೃತಾರ್ಥತೆ ಕಾಣುತ್ತಿದೆ. ಪ್ರತಿಷ್ಠಾನದಿಂದ ಈ ವರ್ಷ ೨೪ನೇ ವರ್ಷದ ಶನೈಶ್ಚರ ಪೂಜೆ ನಡೆಯುತ್ತಿದೆ. ಮುಂದಿನ ವರ್ಷ ರಜತ ಸಂಭ್ರಮ ನಡೆಯಲಿದೆ. ಪೂಜಾ ಕಾರ್ಯಕ್ರಮದ ದಶಮಾನೋತ್ಸವದಿಂದ ಈ ತನಕ ಪ್ರತಿಷ್ಠಾನಕ್ಕೆ ಕಟ್ಟಡದ ಕನಸು ಕಾಣುತ್ತಿದ್ದೇವೆ. ಮುಂದಿನ ವರ್ಷದ ರಜತ ಸಂಭ್ರಮದಲ್ಲಿ ಅದನ್ನು ಪೂರೈಸುವ ಯೋಜನೆ ಇದೆ. ಇದಕ್ಕೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
‘ವರಾಪ ರೂಪಕ’ ನೃತ್ಯರೂಪಕ ಬಿಡುಗಡೆ:
ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ರಚಿಸಿರುವ ಪಂಜುರ್ಲಿ ದೈವ ತುಳು ಪಾಡ್ದನ ಆಧಾರಿತ ಭಕ್ತ ಪ್ರಧಾನ ತುಳು ನೃತ್ಯರೂಪಕ ‘ವರಾಹ ರೂಪ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳು ಪುಷ್ಪಾರ್ಚನೆ ಮೂಲಕ ಬಿಡುಗಡೆಗೊಳಿಸಿದರು.
ಸ್ನೇಹ ವಿಘ್ನೇಶ್ ಮತ್ತು ಸಿಂಚನಾ ಆನಾಜೆ ಪ್ರಾರ್ಥಿಸಿದರು. ಮಹಾವಿಷ್ಣು ಪ್ರತಿಷ್ಠಾನದ ಉಪಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಹರೀಶ್ ಆಚಾರ್ಯ ವರದಿ ವಾಚಿಸಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಸಂತ ಗೌಡ ಸೇರಾಜೆ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಭವಿತ್ ಆನಾಜೆ, ನಿರಂಜನ್ ಕುಲಾಲ್, ಭವಾನಿ ಕುಲಾಲ್, ಪ್ರಸಾದ್ ಆನಾಜೆ, ವಿಜೇತ್ ಆನಾಜೆ ಅತಿಥಿಗಳನ್ನು ತಾಂಬೂಲ ನೀಡಿ, ಶಾಲು ಹಾಕಿ ಸ್ವಾಗತಿಸಿದರು. ಅಕ್ಷತಾ ಆನಾಜೆ ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಕಲಾಕೇಂದ್ರ ವೀರಮಂಗಲ ಮತ್ತು ಭಕ್ತಕೋಡಿ ಇದರ ವಿದ್ಯಾರ್ಥಿಗಳಿಂದ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ನಿರ್ದೇಶನದಲ್ಲಿ ತುಳು ಪಾಡ್ದನ ಆಧಾರಿತ ಭಕ್ತ ಪ್ರಧಾನ ತುಳು ನೃತ್ಯರೂಪಕ ‘ವರಾಹ ರೂಪ’ ಹಾಗೂ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ‘ಅಮ್ಮೆರ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.