800 ವರ್ಷಗಳ ಇತಿಹಾಸವಿರುವ ಕಾನತ್ತೂರಿನಂತೆ ನ್ಯಾಯ ತೀರ್ಮಾನ ನೀಡುತ್ತಿದ್ದ ಕ್ಷೇತ್ರವಿದು
ಡಿ. 21 ರಿಂದ ಡಿ. 25 ರವರೆಗೆ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ – ದೈವಗಳ ನೇಮೋತ್ಸವ
ಕಲಿಯುಗದಲ್ಲಿ ಭಕ್ತಜನರ ಅಭಯಪ್ರದಾಯಕವಾಗಿ ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸಿ ಲೋಕದಲ್ಲಿ ಧರ್ಮೋದ್ಧರಣ ಕಾರ್ಯ ಮಾಡುತ್ತಾ ಬಂದಿರುವ ತುಳುನಾಡಿನ ದೈವಗಳ ಆರಾಧನೆಯ ಕಟ್ಟುಕಟ್ಟಳೆ ಇಂದು ನಿನ್ನೆಯದಲ್ಲ. ಸೂರ್ಯ ಚಂದ್ರ, ಭೂಮಿಯಷ್ಟೇ ಸತ್ಯವೂ, ಮಹಿಮೆಯನ್ನೂ ಹೊಂದಿರುವ ನಾನಾ ದೈವ ಸ್ವರೂಪಗಳು ಸಾಕ್ಷಾತ್ ದೇವರ ಗಣಗಳಂತೆ ಆವಿರ್ಭವಿಸಿ ಒಂದೊಂದು ಪವಾಡ, ಕಾರಣಿಕತೆಯಿಂದ ಭಕ್ತಿ ಭಾವುಕತೆಗೆ ಸದೃಶಗಳಾಗಿವೆ. ದೈವ ಸಾನ್ನಿಧ್ಯಗಳ ಕಾರಣಿಕತೆಯಿಂದ ಅವುಗಳು ನೆಲೆಯೂರಿರುವ ಕ್ಷೇತ್ರಗಳೂ ಪರಮ ಪಾವನವೂ, ಪುರಾಣ ಪ್ರಸಿದ್ಧತೆಯನ್ನೂ ಹೊಂದಿದೆ. ಇಂತಹುದೇ ಕಾರಣಿಕತೆ, ಐತಿಹಾಸಿಕ ಮಹತ್ವವುಳ್ಳ ಕ್ಷೇತ್ರವೊಂದು ನವೀಕರಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸನ್ನದ್ಧವಾಗುತ್ತಿದೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಕಾರಣಿಕ ಕ್ಷೇತ್ರ ’ವೈದ್ಯನಾಥ ಮಲರಾಯ ಸಪರಿವಾರ ದೈವಸ್ಥಾನ ಮಲರಾಯ ಜೇರ. ಶಿವನ ಸಂಭೂತ ವೈದ್ಯನಾಥ ಈ ಕ್ಷೇತ್ರದಲ್ಲಿ ನೆಲೆಯಾಗಿ ತನ್ನ ಜೊತೆ ಮಲರಾಯ ದೈವ ಹಾಗೂ ಕೊರತಿ ದೈವಗಳನ್ನು ಈ ಕ್ಷೇತ್ರದಲ್ಲಿ ನೆಲೆಯಾಗಿಸಿಕೊಂಡು ಕಾರಣಿಕ ಶಕ್ತಿಯಾಗಿ ಈ ಕ್ಷೇತ್ರದಲ್ಲಿ ಭಕ್ತರನ್ನು ಕಾಪಾಡಿಕೊಂಡು ಬರುತ್ತಿವೆ. ಆಕಾಶ ಮಾರ್ಗದಲ್ಲಿ 8 ಕಿ.ಮೀ. ವಾಯುಮಾರ್ಗದ ವ್ಯಾಪ್ತಿಯ ಪ್ರದೇಶಗಳನ್ನೊಳಗೊಂಡ ಈ ಕ್ಷೇತ್ರ ಇಂದು ಕುಳ-ಇಡ್ಕಿದು-ವಿಟ್ಲ ಮುಡ್ನೂರು ಮೂರು ಗ್ರಾಮಗಳು ಸಂಧಿಸುವ ಜಾಗದಲ್ಲಿ ಕಾರಣಿಕದ ಕ್ಷೇತ್ರವಾಗಿ ನೆಲೆನಿಂತಿದೆ.
ಇತಿಹಾಸ ಏನು ಹೇಳುತ್ತದೆ ?
ಈ ಕ್ಷೇತ್ರವು ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಈ ಕ್ಷೇತ್ರವೂ ಜೀರ್ಣೋದ್ಧಾರವಾಗಬೇಕೆಂದು ಕಂಡುಬಂದಿತ್ತು. ಅದಲ್ಲದೆ ಹಿಂದಿನ ಕಾಲದಲ್ಲಿ ಈ ಕ್ಷೇತ್ರದಲ್ಲಿ ಭಂಡಾರ ಬಂದು ನೇಮ ನಡಾವಳಿಗಳು ನಡೆಯುತ್ತಿದ್ದು, ನ್ಯಾಯ ತೀರ್ಮಾನದ ಕಾರಣಿಕ ಕ್ಷೇತ್ರ ಕಾನತ್ತೂರಿನಂತೆ ಈ ಕ್ಷೇತ್ರದಲ್ಲಿಯೂ ಭಕ್ತಾದಿಗಳ ನ್ಯಾಯ ತೀರ್ಮಾನವಾಗುತ್ತಿದ್ದ ಐತಿಹಾಸಿಕ ಕ್ಷೇತ್ರವೂ ಇದಾಗಿತ್ತು. ಕಾಲಾಂತರದಲ್ಲಿ 350-400 ವರ್ಷಗಳ ಹಿಂದೆ ಈ ಕ್ಷೇತ್ರ ಬಿದ್ದುಹೋಗಿದೆ ಎಂಬ ವಿಚಾರಗಳು ಪ್ರಶ್ನಾ ಚಿಂತನೆಯ ವೇಳೆ ತಿಳಿದುಬಂದಿದೆ.
ಕಷ್ಟ-ನಷ್ಟಗಳು ಉಂಟಾದಾಗ:
ಸುಮಾರು 350-400 ವರ್ಷಗಳ ಹಿಂದೆ ಕ್ಷೇತ್ರ ಸಹ ಭಾಗದವರಿಗೂ, ದೈವರ್ನತಕ, ಕರ್ಮಭಾಗದವರಿಗೂ, ಬ್ರಾಹ್ಮಣ ತಂತ್ರ ಸ್ಥಾನದವರಿಗೂ, ಮನಸ್ಥಾಪ ಬಂದು ಆರಾಧನ ಲೋಪ ಬಂದದ್ದಾಗಿಯೂ ತನ್ನಿಮಿತ್ತ ಈ ವ್ಯಾಪ್ತಿಗೆ ಸಂಬಂಧಪಟ್ಟವರಿಗೆಲ್ಲಾ ಕಷ್ಟ-ನಷ್ಟ, ರೋಗ ರುಜಿನಗಳು, ಸಂಭವಿಸಿರುವುದು ಕಂಡುಬಂದಿರುತ್ತದೆ. ಸುಮಾರು 18 ಜಾತಿ ವರ್ಗದವರು ಈ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿದ್ದು, ಹಿಂದಿನಿಂದಲೂ ಅಂಗಣಕ್ಕೆ ಕೊಟ್ಟು ಹಾಕುವ ಸೇವೆಯನ್ನು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದವು ನಡೆಸಿಕೊಂಡು ಬಂದಿರುವುದು ಇಲ್ಲಿನ ವಾಡಿಕೆ.
ಪವಾಡಗಳ ಆಗರವಾಗಿತ್ತು ಕ್ಷೇತ್ರ:
ಧರ್ಮನಗರ ಶ್ರೀ ಜಯದುರ್ಗಾಪರಮೇಶ್ವರಿ ಕ್ಷೇತ್ರಕ್ಕೂ, ’ವೈದ್ಯನಾಥ ಮಲರಾಯ ಸಪರಿವಾರ ದೈವಸ್ಥಾನ ಮಲರಾಯ ಜೇರ ಕ್ಷೇತ್ರಕ್ಕೂ ವಿಶೇಷ ಸಂಬಂಧವಿದ್ದು, ಧರ್ಮನಗರ ಶ್ರೀ ಜಯದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠೆಯ ಮೊದಲು ಈ ಜೇರ ಕ್ಷೇತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಿತ್ತು. ಈ ಪವಾಡಗಳಿಗೆ ಗ್ರಾಮದ ಹಿರಿಯರು ಸಾಕ್ಷಿಯಾಗಿದ್ದಾರೆ. ಧರ್ಮನಗರ ಜೇರ ಕ್ಷೇತ್ರದ ವೈದ್ಯನಾಥ ಕಬಕದ ಅಡ್ಯಾಲು ವೈದ್ಯನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಆ ಕ್ಷೇತ್ರದಲ್ಲಿ ಅಡ್ಯಲಾಯ ದೈವವಾಗಿ ನೆಲೆಯೂರಿ ಇಂದಿಗೂ ಕಬಕದ ಅಡ್ಯಾಲು ಕ್ಷೇತ್ರದಲ್ಲಿ ಕಾರಣಿಕದ ಶಕ್ತಿಯಾಗಿ ಮೆರೆಯುತ್ತಿದ್ದಾನೆ ಎಂದು ದೈವಜ್ಞರ ಮುಖೇನ ತಿಳಿದುಬಂದಿದೆ.
ಜಳಕಕ್ಕೆ ಬರುತ್ತಿದ್ದ ದೈವಗಳು:
ಧರ್ಮನಗರ ಗಣೇಶೋತ್ಸವದ ಗಣೇಶ ವಿಸರ್ಜನೆ ಮಾಡುವ ಕೆರೆಗೆ ಧರ್ಮನಗರ ಜೇರ ಕ್ಷೇತ್ರದ ಕಾರಣಿಕ ದೈವಗಳು ಜಳಕಕ್ಕಾಗಿ ಭೇಟಿ ನೀಡುತ್ತಿದ್ದರು. ಅಲ್ಲದೇ ಅಲ್ಲೇ ಪಕ್ಕದಲ್ಲಿ ಗೋಳಿಮರದಡಿಯಲ್ಲಿದ್ದ ದೈವಗಳು ಕುಳಿತುಕೊಳ್ಳುವ ಕಟ್ಟೆ ಇತ್ತು ಎಂಬ ವಿಚಾರವೂ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ.
ಬೀಡಿನಮಜಲು ಶಕ್ತಿಗೆ ಅವಿನಾಭಾವ:
ಬೀಡಿನಮಜಲು ಆದಿಪರಾಶಕ್ತಿ ಕ್ಷೇತ್ರಕ್ಕೂ ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಬೀಡಿನಮಜಲು ಆದಿಪರಾಶಕ್ತಿ ಕ್ಷೇತ್ರದಲ್ಲಿ ಪ್ರತೀ ತಿಂಗಳು ದುರ್ಗಾಪೂಜೆ ನಡೆಸಬೇಕೆಂಬಂತೆ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿತ್ತು. ಕಾರಣಾಂತರಗಳಿಂದ ಅದು ನಡೆಯುತ್ತಿರಲಿಲ್ಲ. ಹೀಗಾಗಿ ಜೇರ ಕ್ಷೇತ್ರದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಕುಂಠಿತಗೊಂಡಿತ್ತು. ಆ ಬಳಿಕ ನಡೆದ ಪ್ರಶ್ನಾಚಿಂತನೆಯಲ್ಲಿ ಶ್ರೀ ದೇವಿಗೆ ದುರ್ಗಾಪೂಜೆ ನಡೆಸಿದರೆ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಭರದಿಂದ ಸಾಗುವಂತೆ ಕಂಡುಬಂದಿತ್ತು. ಅಂದಿನಿಂದ ಪ್ರತೀ ತಿಂಗಳ ಒಂದು ಶುಕ್ರವಾರ ಬೀಡಿನಮಜಲು ಆದಿಪರಾಶಕ್ತಿ ದೇವಿಗೆ ದುರ್ಗಾಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಂದಿನಿಂದ ಧರ್ಮನಗರ ಜೇರ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳು ಭರದಿಂದ ಸಾಗಿಬಂದಿದ್ದು, ಸಾನಿಧ್ಯದಲ್ಲಿ ಬ್ರಹ್ಮಕಲಶಕ್ಕೆ ಅಣಿಯಾಗುತ್ತಿವೆ.
ತಂಬಿಲ, ಉತ್ಸವ ವಾಡಿಕೆ:
ಕಳೆದ ಮೂರು ವರ್ಷಗಳಿಂದ ಇಲ್ಲಿ ಪ್ರತಿ ಸಂಕ್ರಮಣದಂದು ತಂಬಿಲ ಸೇವೆ ನಡೆಯುತ್ತಿದೆ. ಡೆಚ್ಚಾರುವಿನಿಂದ ಮಲರಾಯ ದೈವದ ಭಂಡಾರ, ಜೈನರಕೋಡಿಯಿಂದ ಮೂವರ್ ದೈವಂಗಳ ಭಂಡಾರ, ಕುಳಗುತ್ತು ಚಾವಡಿಯಿಂದ ವೈದ್ಯನಾಥ ಭಂಢಾರ ಹೊರಟು, ಉರಿಮಜಲು ನಡುಸಾದಿ (ನಡುದಾರಿ)ಯಲ್ಲಿ ವೈದ್ಯನಾಥ, ಮೂವರ್ ದೈವಂಗಳ್ ಮತ್ತು ಸಪರಿವಾರ ದೈವಗಳ ಭಂಡಾರವನ್ನು ಊರಿನ ಮನೆತನದವರು, ಗುತ್ತಿನವರು, ಊರಿನ ಪ್ರಮುಖರು ಹಾಗೂ ಸಮಸ್ತ ಭಕ್ತಾದಿಗಳು ಎದುರುಗೊಳ್ಳುವುದು ಇಲ್ಲಿನ ವಾಡಿಕೆ.
ನಾಗ ಸಂಚಾರದ ಕ್ಷೇತ್ರ:
ಇತ್ತೀಚಿನವೆರಗೂ ಈ ಕ್ಷೇತ್ರದಲ್ಲಿ ದೈವಗಳ ಸೂಟೆ ಸಂಚಾರ ಕಾಣುತ್ತಿದ್ದು, ಕೊಪ್ಪರಿಗೆ ಇರುವ ಬಗ್ಗೆಯೂ ಉಲ್ಲೇಖಿಸಿರುತ್ತಾರೆ. ಇಲ್ಲಿ ಯಾವುದೇ ಅಶೌಚಗಳು ನಡೆದಾಗ ಜನರಿಗೆ ನಾಗನ ಸಂಚಾರ ಈಗಲೂ ಕಂಡುಬರುತ್ತದೆ. ಇಲ್ಲಿ ವಿದ್ಯಾಭ್ಯಾಸ, ಸಂಪತ್ತು, ಸಂತಾನ ಭಾಗ್ಯ ಆರೋಗ್ಯ ಉಳಿಸಿಕೊಳ್ಳುವಲ್ಲಿ ಹರಕೆ ಹೊತ್ತುಕೊಂಡರೆ ವೈದ್ಯನಾಥ ಮಲರಾಯ ಅನೇಕರ ರಕ್ಷಣೆಗೆ ನಿಂತುಕೊಂಡ ಹಲವಾರು ಅನುಭವಗಳು ಕಾಣಸಿಗುತ್ತವೆ.
ಪತ್ರ ಮುಖೇನ ಪ್ರಾರ್ಥನೆ ಕೇಳುವ ದೈವಗಳು:
ಈ ಕ್ಷೇತ್ರದ ವಿಶೇಷತೆ ಎಂದರೆ ನಮ್ಮ ಮನದ ಅಭಿಲಾಷೆಗಳನ್ನು ಪತ್ರದಲ್ಲಿ ಬರೆದು ಸಂಕ್ರಮಣದ ದಿವಸ ತಂಬಿಲ ಸೇವೆ ಮಾಡಿಸಿ ಅದನ್ನು ಹುಂಡಿಯಲ್ಲಿ ಹಾಕಿ ಮನಸಾ ಪ್ರಾರ್ಥಿಸಿದರೆ ಆ ಕಾರ್ಯವನ್ನು ವೈದ್ಯನಾಥ ಮಲರಾಯ ದೈವಗಳು ನೆರವೇರಿಸಿಕೊಡುತ್ತವೆ ಎಂದು ಸ್ಥಳ ಇತಿಹಾಸ ಸಾರುತ್ತದೆ.
350 ವರ್ಷಗಳ ಬಳಿಕ ನೇಮೋತ್ಸವ:
16 ವರ್ಷಗಳ ಹಿಂದೆ ಪ್ರಶ್ನಾಚಿಂತನೆ ನಡೆದು, ಜೀರ್ಣೋದ್ಧಾರ ಕೆಲಸ ಪೂರ್ಣಗೊಳಿಸಲಾಗದೇ, ಜೀರ್ಣಾವಸ್ಥೆಗೆ ಹೋಗಿದ್ದ ಈ ಕ್ಷೇತ್ರ ಮತ್ತೆ ಊರ ಹಿರಿಯರ, ಕಾರ್ಯಕರ್ತರ ಹಾಗೂ ಊರ ಪರವೂರ ಭಕ್ತಾದಿಗಳ ಶ್ರಮ ಸಹಕಾರದೊಂದಿಗೆ ವೈದ್ಯನಾಥನಿಗೆ ಗುಡಿ ಗೋಪುರ, ಪಡಿಪ್ಪಿರೆ, ಗುಳಿಗ ಕೊರತಿ ದೈವಗಳಿಗೆ ಕಟ್ಟೆಗಳು ನಿರ್ಮಾಣಗೊಂಡು ಡಿ. 21ರಿಂದ ಡಿ. 25ರವರೆಗೆ ನಡೆಯುವ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವ ಸುಮಾರು 350 ವರ್ಷಗಳ ಬಳಿಕ ಸಂಪನ್ನಗೊಳ್ಳಲು ಅಣಿಯಾಗುತ್ತಿದೆ.