ಐಆರ್ಸಿಎಂಡಿ ಸಂಸ್ಥೆಯಿಂದ ಸಮಾಜಕ್ಕೆ ದೊಡ್ಡ ಕೊಡುಗೆ-ಡಾ.ಎ.ಪಿ ಭಟ್
ಪುತ್ತೂರು: ಬೆಂಗಳೂರಿನ ಅಬಾಕಸ್ ಸಂಸ್ಥೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಡಿಸೆಂಬರ್ 8, 2024ರಂದು ನಡೆಸಿತ್ತು. ಇದರಲ್ಲಿ ಪುತ್ತೂರಿನ ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯ 106 ವಿದ್ಯಾರ್ಥಿಗಳು ವಿವಿಧ ವಿಭಾಗಳಲ್ಲಿ ಪ್ರಶಸ್ತಿ ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು ಇದರ ಪ್ರಶಸ್ತಿ ಪ್ರದಾನ ಸಮಾರಂಭ ಡಿ.15 ರಂದು ಬೊಳುವಾರಿನ ಮಹಾವೀರ ಹವಾನಿಯಂತ್ರಿತ ಕನ್ವೆನ್ಶನ್ ಹಾಲ್ನಲ್ಲಿ ಜರಗಿತು.
ಐಆರ್ಸಿಎಂಡಿ ಸಂಸ್ಥೆಯಿಂದ ಸಮಾಜಕ್ಕೆ ದೊಡ್ಡ ಕೊಡುಗೆ-ಡಾ.ಎ.ಪಿ ಭಟ್:
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ ನೆರವೇರಿಸಿದ ಪುತ್ತೂರು ಸಿಟಿ ಹಾಸ್ಪಿಟಲ್ನ ವೈದ್ಯ ಡಾ.ಎ.ಪಿ ಭಟ್ ಮಾತನಾಡಿ, ಪ್ರಸ್ತುತ ಯುಗದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಬಳಕೆ ಮಾಡಲಾಗುತ್ತಿದೆ. ಇದು ನಮ್ಮ ಕೆಲಸವನ್ನು ಸರಳಗೊಳಿಸುತ್ತದೆಯಾದರೂ ನಮ್ಮ ಕ್ರಿಯಾಶೀಲತೆ ಹಾಗು ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಆದರೆ ಅದನ್ನೆಲ್ಲಾ ಮೀರಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಅಬಾಕಸ್ ತರಬೇತಿ ಪಡೆಯುತ್ತಿರುವ ಮಕ್ಕಳು ನ್ಯಾಚುರಲ್ ಇಂಟೆಲಿಜೆನ್ಸ್ ಅನ್ನು ಬಳಕೆ ಮಾಡುತ್ತಾ ಗಣಿತವನ್ನು ಕಲಿಸುತ್ತಿರುವುದು ಪ್ರಶಂಸನೀಯ. ಯಾಕೆಂದರೆ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುವ ಒಂದು ತರಬೇತಿ. ಈ ನಿಟ್ಟಿನಲ್ಲಿ ಗಣೇಶ್ ಮತ್ತು ಪ್ರಫುಲ್ಲ ದಂಪತಿಗಳು ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಿಂದ ಸಾವಿರಾರು ಮಕ್ಕಳಿಗೆ ಅಬಾಕಸ್ ತರಬೇತಿ-ಸಾಯಿ ಗಣೇಶ್:
ಮುಖ್ಯ ಅತಿಥಿಯಾಗಿ ಐ.ಐ.ಟಿ ಮದ್ರಾಸ್ನ ಸಾಯಿ ಗಣೇಶ್ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗಣಿತ ಮುಖ್ಯ ವಿಷಯ, ಇಂದಿನ ಯುವಜನಾಂಗ ಸರಿಯಾದ ಉತ್ತರವನ್ನು ನೀಡಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಾರೆ, ಇಂತಹ ಅಬಾಕಸ್ ತರಬೇತಿ ಸಣ್ಣ ವಯಸ್ಸಿನಲ್ಲೇ ಪಡೆದುಕೊಂಡರೆ ಕೇವಲ ಸೆಕುಂಡುಗಳಲ್ಲೇ ಉತ್ತರವನ್ನು ನೀಡಬಹುದು. ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಸಾವಿರಾರು ಮಕ್ಕಳಿಗೆ ಅಬಾಕಸ್ ತರಬೇತಿ ನೀಡುತ್ತಿರುವುದು ಶ್ಲ್ಯಾಘನೀಯ ಎಂದರು.
ಮಕ್ಕಳ ಸರ್ವತೋಮುಖ ಬೆಳವಣಿಗೆ, ಸಾಧನೆಗೆ ಐ.ಆರ್.ಸಿ.ಎಂ.ಡಿಯಿಂದ ದೊಡ್ಡ ಕೊಡುಗೆ-ಪ್ರೊ.ರಾಮಚಂದ್ರ ಭಟ್:
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ.ರಾಮಚಂದ್ರ ಭಟ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ಸಾಧನೆಗೆ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಕೊಡುಗೆಯಾಗಿ ನಿಂತಿದೆ. ಧನುಸಂಕ್ರಮಣದ ಶುಭದಿನಂದು ನಡೆದ ಈ ಕಾರ್ಯಕ್ರಮ ಬಿಲ್ಲುಗಾರನೊಬ್ಬ ಗುರಿಯೆಡೆಗೆ ಬಾಣ ಹೂಡಲು ಅಣಿಯಾಗಿ ನಿಲ್ಲುವವನಂತೆ ಪ್ರಫುಲ್ಲ ಗಣೇಶ್ ದಂಪತಿಗಳು ಉದ್ಯೋಗದ ನಿಟ್ಟಿನಲ್ಲಿ ಪರೀಕ್ಷೆ ಬರೆಯುವ ಯುವ ಮನಸ್ಸುಗಳನ್ನು ಗುರಿಯೆಡೆಗೆ ಸೇರಿಸಲು ಈ ಸಂಸ್ಥೆಯ ಮೂಲಕ ಅಣಿಯಾಗಿ ನಿಂತು ದಾರಿದೀಪವಾಗಿದ್ದಾರೆ ಎಂದು ಶ್ಲಾಘಿಸಿ ಅಬಾಕಸ್ ಪೂರ್ವ, ಪ್ರಸ್ತುತತೆ ಮತ್ತು ಭವಿಷ್ಯದ ಬಗ್ಗೆ ಮಕ್ಕಳಿಗೆ ತಿಳಿಹೇಳಿದರು. ಮುಂದಿನ ದಿನಗಳಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಕಾರ್ಯವೈಖರಿ ಮತ್ತು ಸಾಧನೆ ಇನ್ನೂ ಎತ್ತರಕ್ಕೇರಲಿ ಎಂದು ಹೇಳಿ ಶುಭ ಹಾರೈಸಿದರು.
ಮನಸ್ಸು, ಮೆದುಳಿನ ಕ್ರಿಯಾಶೀಲತೆಗೆ ಪರಿಣಿತಿ ಹೊಂದಲು ಅಬಾಕಸ್ ಅತೀ ಮುಖ್ಯ-ಡಾ.ಅಶೋಕ್ ಕುಮಾರ್:
ಮತ್ತೋರ್ವ ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಜಿ.ಕೆ.ವಿ.ಕೆ ವಿಶ್ವವಿದ್ಯಾನಿಲಯದ ಡಾ.ಅಶೋಕ್ ಕುಮಾರ್ ಮಾತನಾಡಿ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕ ಶಿಕ್ಷಣ ಬಹಳ ಮುಖ್ಯ, ಅದರಂತೆ ಮನಸ್ಸು ಮತ್ತು ಮೆದುಳಿನ ಕ್ರಿಯಾಶೀಲತೆಗೆ ಹಾಗೂ ಗಣಿತದಲ್ಲಿ ಪರಿಣಿತಿ ಹೊಂದಲು ಅಬಾಕಸ್ ಅತೀ ಮುಖ್ಯವಾಗಿದ್ದು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪ್ರಫುಲ್ಲ ಗಣೇಶ್ರವರು ಈ ಸ್ಪರ್ಧೆಯ ಬಗ್ಗೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿ, ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ 106 ಪ್ರಶಸ್ತಿಗಳು ಬಂದಿರುವುದು ವಿದ್ಯಾರ್ಥಿಗಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆಯಲ್ಲ ಎನ್ನುವುದನ್ನು ನಿರೂಪಿಸುವಲ್ಲಿ ಸಾಕ್ಷಿಯಾಗುವುದರ ಮೂಲಕ ಸಂಸ್ಥೆಗೆ ಹೆಮ್ಮೆಯನ್ನು ತಂದಿದ್ದಾರೆ ಎಂದು ತಿಳಿಸಿದರು. 26ಕ್ಕೂ ಅಧಿಕ ವಿವಿಧ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗು ಪೋಷಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಸಂಸ್ಥೆಯ ಅಬಾಕಸ್ ವಿದ್ಯಾರ್ಥಿನಿಯರಾದ ಕು.ತನಯ, ಕು.ಶಾರ್ವರಿ, ಕು.ಅಶ್ವಿ ಕೃಷ್ಣ ಪ್ರಾರ್ಥಿಸಿದರು. ಶಿಕ್ಷಕಿ ಕು.ರಶ್ಮಿತಾ ಸ್ವಾಗತಿಸಿ, ಶಿಕ್ಷಕಿ ಕು.ಹರ್ಷಿತಾ ವಂದಿಸಿದರು.
106 ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿ..
ಪುತ್ತೂರಿಗೆ ಮೊದಲ ಬಾರಿಗೆ ಅಬಾಕಸ್ ಶಿಕ್ಷಣವನ್ನು ಬಹಳ ಸೃಜನಶೀಲ ಮತ್ತು ವಿಶಿಷ್ಟ ಕೌಶಲ್ಯಗಳೊಂದಿಗೆ ಕೇವಲ ಆಫ್ಲೈನ್ ಮೂಲಕ ಮಾತ್ರವೇ ಪರಿಚಯಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ 20ಕ್ಕೂ ಅಧಿಕ ಕೂಡುವಿಕೆ ಮತ್ತು ಕಳೆಯುವಿಕೆ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ತ್ವರಿತ ಉತ್ತರವನ್ನು ಹೇಳಿಸುವ ವಿಡಿಯೋಗಳನ್ನು ಮೊದಲ ಬಾರಿಗೆ ಪುತ್ತೂರಿಗೆ ಪರಿಚಯಿಸಿದ್ದು ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ. 2021ರಲ್ಲಿ ಇಂಟರ್ನ್ಯಾಷನಲ್ ಅವಾರ್ಡ್, 2022ರಲ್ಲಿ 2 ಸಲ ನ್ಯಾಷನಲ್ ಅವಾರ್ಡ್, 2023ರಲ್ಲಿ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಪ್ರಶಸ್ತಿಯನ್ನು ಗಳಿಸಿದ ಗೌರವ ಈ ಸಂಸ್ಥೆಗೆ ಸಲ್ಲುತ್ತದೆ. ಇದೀಗ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ 106 ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿ ಗಳಿಸಿದೆ.
ಐಆರ್ಸಿಎಂಡಿ ಶಿಕ್ಷಣ ಸಂಸ್ಥೆ ಬಗ್ಗೆ..
ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯು ಅಬಾಕಸ್ನ ಜೊತೆಗೆ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ, ವೇದ ಗಣಿತ, ಬ್ಯಾಂಕಿಂಗ್ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ತರಬೇತುದಾರರಿಂದ ಸಮಗ್ರ ತರಬೇತಿಯನ್ನು ಪುತ್ತೂರು ಮತ್ತು ಸುಳ್ಯದಲ್ಲಿ ನೀಡುತ್ತಿದೆ. ಈ ಸಂಸ್ಥೆಯಲ್ಲಿ ದಾಖಲಾತಿಯನ್ನು ಬಯಸುವವರು 9945988118 ನಂಬರಿಗೆ ನೇರವಾಗಿ ಸಂಪರ್ಕಿಸಬಹುದು ಎಂದು ಐಆರ್ಸಿಎಂಡಿ ಶಿಕ್ಷಣ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.