ಪಕ್ಷ ರಾಜಕೀಯದಿಂದ ಹಳ್ಳಿಗಳ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಗುಂಪುಗಾರಿಕೆ ಕಾರಣ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ.ಗೆದ್ದ ಪಕ್ಷಗಳ ಬೆಂಬಲಿಗರಿಗಷ್ಟೇ ಸೌಲಭ್ಯಗಳು ಸಿಗುವಂತಾಗಿದ್ದು ಸೋತ ಪಕ್ಷಗಳ ಬೆಂಬಲಿಗರ ಕಡೆಗಣನೆ ಮಾಡಲಾಗುತ್ತಿದೆ.ಆದ್ದರಿಂದ ಎಲ್ಲರನ್ನೂ ಒಳಗೊಂಡ ಗ್ರಾಮಸ್ವರಾಜ್ ಪರಿಕಲ್ಪನೆಗಾಗಿ 1987ರ ನಿಯಮ ಬದಲಾಯಿಸಲಾಗಿತ್ತು.
ಪುತ್ತೂರು: ಕೇರಳ ಮಾದರಿಯಲ್ಲಿ ಮುಂದೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿಯೂ ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮಹತ್ವದ ಚಿಂತನೆ ನಡೆಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪ್ರಜಾಪ್ರಭುತ್ವದ ಬುನಾದಿ ಎನಿಸಿಕೊಂಡಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೂರು ದಶಕಗಳ ಹಿಂದೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಕರ್ನಾಟಕದಲ್ಲಿ ಮೊದಲ ಬಾರಿ 1987ರಲ್ಲಿ ನಡೆದಿದ್ದ ಮಂಡಲ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆ ಬಳಿಕ ರೂಪಿಸಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕಾರ ರಾಜಕೀಯ ಪಕ್ಷಗಳ ಚಿಹ್ನೆ ಬಳಸದೆ ಚುನಾವಣೆ ನಡೆಸಲು ನಿಯಮ ರೂಪಿಸಲಾಗಿತ್ತು. 1993ರಿಂದ ಇಲ್ಲಿಯವರೆಗೆ ಮೂರು ದಶಕಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ನಡೆದ ಯಾವುದೇ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿಲ್ಲ. ಆದರೆ, ಎಲ್ಲ ಪಕ್ಷಗಳೂ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ತಮ್ಮ ಬೆಂಬಲಿತರು ಎಂದು ಬಿಂಬಿಸುತ್ತಾ ಚುನಾವಣೆ ನಡೆಸುತ್ತಾ ಬಂದಿವೆ. ಅಭ್ಯರ್ಥಿಗಳೂ ಚುನಾವಣಾ ಆಯೋಗ ತಮಗೆ ಹಂಚಿಕೆ ಮಾಡಿದ ಚಿಹ್ನೆಯ ಜತೆಗೆ ಪಕ್ಷದ ಚಿಹ್ನೆಗಳನ್ನೂ ಬಳಸಿಕೊಂಡು ಪ್ರಚಾರ ನಡೆಸುವುದೂ ಸಾಮಾನ್ಯ ಸಂಗತಿಯಾಗಿದೆ. ಗೆದ್ದ ಅಭ್ಯರ್ಥಿಗಳನ್ನು ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳೆಂದೇ ಬಿಂಬಿಸಿಕೊಳ್ಳುತ್ತವೆ. ಇದು ಗ್ರಾಮ ಗದ್ದುಗೆ ಏರುವಲ್ಲಿ ಹಲವು ಗೊಂದಲಗಳಿಗೆ ದಾರಿ ಮಾಡಿಕೊಡುತ್ತಿದೆ.
ಶಾಸಕರು, ಪರಿಷತ್ ಸದಸ್ಯರಿಂದ ಸರಕಾರಕ್ಕೆ ಮನವಿ: ಪಕ್ಷಾಂತರ ನಿಷೇಧ ಕಾಯ್ದೆಯ ಹಂಗಿಲ್ಲದ ಕಾರಣ ವಿಜೇತರಾದ ಅಭ್ಯರ್ಥಿಗಳು ತಮ್ಮ ಅನುಕೂಲ ನೋಡಿಕೊಂಡು ಬಣಗಳನ್ನು ಬದಲಿಸುತ್ತಾರೆ. ಇಂತಹ ಅನಿಶ್ಚಿತ ಸ್ಥಿತಿಗೆ ತೆರೆ ಎಳೆಯಲು ಪಕ್ಷದ ಚಿಹ್ನೆ ಅಡಿಯಲ್ಲೇ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದರು. ಪ್ರಸ್ತುತ ಕೇರಳದಲ್ಲಿ ಪಕ್ಷಗಳ ಚಿಹ್ನೆ ಅಡಿಯಲ್ಲೇ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯುತ್ತಿದೆ. ಅಲ್ಲಿನ ಪಂಚಾಯಿತಿಗಳು ಕರ್ನಾಟಕದ ಗ್ರಾಮಗಳಿಗಿಂತಲೂ ಹೆಚ್ಚಿನ ಅಭಿವೃದ್ಧಿ ಸಾಧಿಸಿದೆ. ಉತ್ತಮ ಆಡಳಿತಕ್ಕೆ ಮಾದರಿಯಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಬುನಾದಿಯೂ ಗಟ್ಟಿಗೊಂಡಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಹಲವು ಶಾಸಕರು, ರಾಜಕೀಯ ತಜ್ಞರು, ಸಂಘಟನೆಗಳ ಪ್ರಮುಖರು ಈ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು, ಅಭಿಪ್ರಾಯ ಸಂಗ್ರಹದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿದೆ.
ಈಗಿನ ನಿಯಮ: ಪ್ರಸ್ತುತ ರಾಜ್ಯದ ಗ್ರಾಮ ಪಂಚಾಯತ್ಗಳಿಗೆ ರಾಜಕೀಯ ಪಕ್ಷಗಳ ಚಿಹ್ನೆ ರಹಿತ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳಿಗೆ ಆಯೋಗದಿಂದ ಮುಕ್ತ ಚಿಹ್ನೆಗಳ ಹಂಚಿಕೆ ಮಾಡಲಾಗುತ್ತಿದೆ. ಪ್ರಚಾರದಲ್ಲಿ ಪಕ್ಷಗಳ ಬಾವುಟ, ಬ್ಯಾನರ್ ಬಳಕೆಗೆ ಅವಕಾಶವಿಲ್ಲ. ರಾಜಕೀಯ ಪಕ್ಷಗಳ ಸಭೆ, ಸಮಾರಂಭಕ್ಕೂ ನಿಷೇಧವಿದೆ.ಗ್ರಾ.ಪಂ.ಅಭ್ಯರ್ಥಿಗಳನ್ನು ತಮ್ಮ ಪಕ್ಷದ ಬೆಂಬಲಿತರು ಎಂದು ಬಿಂಬಿಸುವಂತಿಲ್ಲ.ರಾಜಕೀಯ ಮುಖಂಡರ ಭಾವಚಿತ್ರದ ಕರಪತ್ರಕ್ಕೂ ನಿಷೇಧವಿದೆ.ಸದ್ಯಕ್ಕೆ ರಾಜ್ಯದಲ್ಲಿ 5,950 ಗ್ರಾಮ ಪಂಚಾಯಿತಿಗಳಿದ್ದು 95 ಸಾವಿರ ಚುನಾಯಿತ ಪಂಚಾಯತ್ ಪ್ರತಿನಿಧಿಗಳಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಸಿಕ 6 ಸಾವಿರ ರೂ, ಉಪಾಧ್ಯಕ್ಷರಿಗೆ 4 ಸಾವಿರ ರೂ ಮತ್ತು ಸದಸ್ಯರಿಗೆ 2 ಸಾವಿರ ರೂ ಗೌರವ ಧನ ನೀಡಲಾಗುತ್ತಿದೆ.
1987ರ ನಿಯಮ ಪಕ್ಷದ ಚಿಹ್ನೆ ಬೇಕು ಎನ್ನುವವರ ವಾದವಿದು: ಪಕ್ಷಗಳ ಚಿಹ್ನೆ ಇಲ್ಲದಿದ್ದರೂ ಪರೋಕ್ಷವಾಗಿ ಪಕ್ಷಗಳ ಪ್ರವೇಶ ಆಗುತ್ತಿದೆ. ಗೆದ್ದ ಅಭ್ಯರ್ಥಿಗಳನ್ನು ತಮ್ಮ ಬೆಂಬಲಿಗರೆಂದೇ ಬಿಂಬಿಸುವ ಪರಿಪಾಟ ಇದೆ. ಗುಂಪುಗಾರಿಕೆಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮಾಡಬಹುದು. ರಾಜಕೀಯ ಪಕ್ಷಗಳ ಬೇರು ಗಟ್ಟಿ ಮಾಡಲು ಪಕ್ಷಗಳ ಪ್ರವೇಶ ಅಗತ್ಯವಿದೆ. ಇತರೆ ಚುನಾವಣೆಗಳ ಮೇಲೂ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ ಎನ್ನುವುದು, ಗ್ರಾ.ಪಂ.ಚುನಾವಣೆಗಳಿಗೆ ಪಕ್ಷದ ಚಿಹ್ನೆ ಬೇಕು ಎನ್ನುವವರ ವಾದವಾಗಿದೆ.
ಮುಂದಿನ ಡಿಸೆಂಬರ್ಗೆ ಗ್ರಾ.ಪಂ. ಚುನಾವಣೆ: ರಾಜ್ಯದ ಗ್ರಾಮ ಪಂಚಾಯಿತಿಗಳ ಹಾಲಿ ಅವಧಿ ಒಂದು ವರ್ಷದ ಒಳಗೆ ಪೂರ್ಣಗೊಳ್ಳಲಿದೆ. 2025ರ ಡಿಸೆಂಬರ್ಗೆ ಚುನಾವಣೆ ನಡೆಯಲಿದೆ. ಮೀಸಲಾತಿ, ಕೋರ್ಟ್ ಪ್ರಕರಣ ಮತ್ತಿತರ ಕಾರಣಕ್ಕೆ ವಿಳಂಬವಾದ ಪಂಚಾಯಿತಿಗಳ ಚುನಾವಣೆ ಆಯಾ ಅವಧಿ ಪೂರ್ಣಗೊಂಡ ನಂತರ ಪ್ರತ್ಯೇಕವಾಗಿ ನಡೆಯಲಿವೆ. 2020ರಲ್ಲಿ ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಡಿ.22 ಮತ್ತು 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಎರಡೂ ಹಂತಗಳಿಂದ 2,14,740 ಅಭ್ಯರ್ಥಿಗಳು ಪಂಚಾಯಿತಿ ಉಮೇದುವಾರಿಕೆ ಬಯಸಿ ಸ್ಪರ್ಧೆಗೆ ಇಳಿದಿದ್ದರು. ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸಲಾಗಿತ್ತು. ಉಳಿದ ಕಡೆಗಳಲ್ಲಿ ಮತ ಪತ್ರಗಳನ್ನು ಬಳಸಿ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.
ಕೇರಳ ಮಾದರಿ ಸದಸ್ಯ ಕ್ಷೇತ್ರಗಳಿಗೆ ಪಟ್ಟು: ಪಂಚಾಯಿತಿವಾರು ಸದಸ್ಯ ಕ್ಷೇತ್ರಗಳನ್ನು ಕೇರಳ ಮಾದರಿಯಲ್ಲಿ ಪುನರ್ ನಿಗದಿ ಮಾಡಲು ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ಹಲವು ವಿಧಾನಪರಿಷತ್ ಸದಸ್ಯರು ಪಟ್ಟು ಹಿಡಿದಿದ್ದಾರೆ. ಕೇರಳದಲ್ಲಿ 1,500ರಿಂದ 1,800 ಜನಸಂಖ್ಯೆಗೆ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ ರೂ.15,000, ಉಪಾಧ್ಯಕ್ಷರಿಗೆ ರೂ.12,000 ಹಾಗೂ ಸದಸ್ಯರಿಗೆ ರೂ.7,000 ಗೌರವಧನ ನೀಡಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಯ ವಾರ್ಷಿಕ ಬಜೆಟ್ ಕನಿಷ್ಠ ರೂ.12 ಕೋಟಿ ಇರುತ್ತದೆ. ಕರ್ನಾಟಕದಲ್ಲಿ ಸದಸ್ಯ ಕ್ಷೇತ್ರಗಳಿಗೆ 400 ಹಾಗೂ ಅದಕ್ಕಿಂತ ಕಡಿಮೆ ಜನಸಂಖ್ಯೆ ನಿಗದಿ ಮಾಡಲಾಗಿದೆ. ಇದರಿಂದ ಸದಸ್ಯರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಗ್ರಾಮಗಳ ಅಭಿವೃದ್ಧಿ, ಸದಸ್ಯರ ಗೌರವಧನ ಹೆಚ್ಚಳಕ್ಕೂ ತೊಡಕಾಗಿದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.
ಗ್ರಾ.ಪಂ.ಚುನಾವಣೆಗಳಲ್ಲಿ ಪಕ್ಷಗಳ ಚಿಹ್ನೆ ಬಳಕೆ ಸಂಬಂಧ ಹಲವು ಶಾಸಕರು, ರಾಜಕೀಯ ತಜ್ಞರು, ಸಂಘಟನೆಗಳ ಪ್ರಮುಖರು ಬೇಡಿಕೆ ಇಟ್ಟಿದ್ದಾರೆ.ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು,ಅಭಿಪ್ರಾಯ ಸಂಗ್ರಹದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು-
ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಸಚಿ
ಬದಲಿಸಿದ್ದು ಇದಕ್ಕಾಗಿ
ಪಕ್ಷ ರಾಜಕೀಯದಿಂದ ಹಳ್ಳಿಗಳ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ.ಗುಂಪುಗಾರಿಕೆ ಕಾರಣ ಗ್ರಾಮಗಳ ಕೇರಳ ಮಾದರಿಯಲ್ಲಿ ಸದಸ್ಯ ಕ್ಷೇತ್ರಗಳನ್ನು ಮರುನಿಗದಿ ಮಾಡಬೇಕು. ಪಕ್ಷದ ಚಿಹ್ನೆ ಆಧಾರದಲ್ಲೇ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ.ಈ ಕುರಿತು ಸದನದಲ್ಲಿ ಚರ್ಚಿಸಲು ಅನುಮತಿ ದೊರೆತಿದೆ-
ಮಂಜುನಾಥ ಭಂಡಾರಿ, ಶಾಸಕರು, ವಿಧಾನಪರಿಷತ್