ʼಮಸೀದಿ ಆವರಣದಲ್ಲಿ ಜೈ ಶ್ರೀರಾಮ್‌ ಘೋಷಣೆ ಹೇಗೆ ಅಪರಾಧʼ?-ಕರ್ನಾಟಕ ಪೊಲೀಸರ ಅಭಿಪ್ರಾಯ ಕೋರಿದ ಸುಪ್ರೀಂ ಕೋರ್ಟ್

0

ಕಡಬ:‘ಮಸೀದಿ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವುದು ಹೇಗೆ ಅಪರಾಧವಾಗುತ್ತದೆ?’ ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಪೊಲೀಸರನ್ನು ಪ್ರಶ್ನಿಸಿದೆ.


ಐತ್ತೂರಿನ ಮಸೀದಿ ಆವರಣಕ್ಕೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಬ್ಬರ ಮೇಲಿನ ಪ್ರಕರಣದ ವಿಚಾರಣೆಯನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಈ ಪ್ರಶ್ನೆ ಮಾಡಿದೆ.ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠವು ಸೋಮವಾರ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಂಡಿದ್ದು,ಕರ್ನಾಟಕ ಪೊಲೀಸರ ಅಭಿಪ್ರಾಯ ಕೋರಿದೆ.ಮಸೀದಿ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಹೇಗೆ ಅಪರಾಧ?ಈ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ಕರ್ನಾಟಕ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿ ಮುಂದಿನ ವಿಚಾರಣೆಯನ್ನು 2025ರ ಜನವರಿ ತಿಂಗಳಿನಲ್ಲಿ ನಡೆಸುವುದಾಗಿ ತಿಳಿಸಿದೆ.


ಏನಿದು ಪ್ರಕರಣ?:
ಕಡಬ ತಾಲೂಕಿನ ಐತ್ತೂರು ಗ್ರಾಮದ ಕಡಬ-ಮರ್ದಾಳ ರಸ್ತೆಯಲ್ಲಿರುವ ಮಸೀದಿ ಆವರಣಕ್ಕೆ ನುಗ್ಗಿದ್ದ ಕೆಲವು ಅಪರಿಚಿತ ವ್ಯಕ್ತಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗಿದ್ದರು.ಬ್ಯಾರಿ ಸಮುದಾಯಕ್ಕೆ ಸೇರಿದವರನ್ನು ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು, ಕಡಬ ಠಾಣೆಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಸೀದಿ ಆಡಳಿತ ಆರೋಪಿಸಿತ್ತು.2023ರ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿತ್ತು.ಕೆಲವು ಯುವಕರು ಬೈಕ್‌ಗಳಲ್ಲಿ ಮಸೀದಿ ಸುತ್ತಿದ್ದಲ್ಲದೆ,ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿರುವ ಸಿಸಿಟಿವಿ ದೃಶ್ಯವನ್ನೂ ಅವರು ಪೊಲೀಸರಿಗೆ ಒದಗಿಸಿದ್ದರು.


ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ.ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವ ಈ ವ್ಯಕ್ತಿಗಳು ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.ನಂತರ, ಬಿಳಿನೆಲೆ ಗ್ರಾಮದ ನಿವಾಸಿ ಕೀರ್ತನ್ ಕುಮಾರ್ ಮತ್ತು ಎನ್.ಎಂ.ಸಚಿನ್ ಕುಮಾರ್ ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 447, 295 ಎ 505 ಮತ್ತು 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.


ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳು:
ಪ್ರಕರಣ ಸಂಬಂಧ ಪುತ್ತೂರಿನ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಕೋರಿ ಆರೋಪಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಐಪಿಸಿ ಸೆಕ್ಷನ್ 447(ಕ್ರಿಮಿನಲ್ ಅತಿಕ್ರಮಣ)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆದರೆ ಮಸೀದಿಯು ಸಾರ್ವಜನಿಕ ಸ್ಥಳವಾಗಿರುವುದರಿಂದ ಅದರ ಆವರಣಕ್ಕೆ ಪ್ರವೇಶವನ್ನು ಕ್ರಿಮಿನಲ್ ಅತಿಕ್ರಮಣ ಎಂದು ಅರ್ಥೈಸಲಾಗುವುದಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು.ಮತ್ತೊಂದೆಡೆ, ಮಸೀದಿಯ ಆವರಣದಲ್ಲಿ ‘ಜೈ ಶ್ರೀರಾಮ್’ ಎಂದು ಕೂಗುವಂತಿಲ್ಲ ಮತ್ತು ಬೆದರಿಕೆ ಹಾಕುವಂತಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.


ಹೈಕೋರ್ಟ್ ಏನು ಹೇಳಿತ್ತು?
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ‘ಯಾರಾದರೂ ಜೈ ಶ್ರೀರಾಮ್ ಎಂದು ಕೂಗಿದರೆ ಅದು ಯಾವುದೇ ವರ್ಗದ ಧಾರ್ಮಿಕ ಭಾವನೆಯನ್ನು ಹೇಗೆ ಕೆರಳಿಸುತ್ತದೆ ಎಂಬುದು ಅರ್ಥವಾಗುವುದಿಲ್ಲ.ಘೋಷಣೆ ಕೂಗಿದ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ದೂರುದಾರರೇ ಹೇಳಿರುವಾಗ, ಘೋಷಣೆಯು ಘರ್ಷಣೆಗೆ ಕಾರಣವಾಗಬಹುದು ಎನ್ನಲಾಗದು ಎಂದು ಅಭಿಪ್ರಾಯಪಟ್ಟಿತ್ತಲ್ಲದೆ, ಪುತ್ತೂರಿನ ಎರಡನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು.ವಿಚಾರಣೆಗೆ ಅನುಮತಿ ನೀಡಿದರೆ ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.


ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ
ಹೈಕೋರ್ಟ್ ನೀಡಿದ್ದ ಈ ತೀರ್ಪನ್ನು ಪ್ರಶ್ನಿಸಿ ಹೈದರ್‌ಆಲಿ ಸಿ.ಎಂ.ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೀದಿ ಆವರಣದಲ್ಲಿ ಜೈಶ್ರೀ ರಾಂ ಘೋಷಣೆ ಹೇಗೆ ಅಪರಾಧವಾಗುತ್ತದೆ ಎಂದು ಕರ್ನಾಟಕ ಪೊಲೀಸರನ್ನು ಪ್ರಶ್ನಿಸಿದೆ.ಮಸೀದಿಯೊಳಗೆ ಬಂದು ಘೋಷಣೆ ಕೂಗಿದ ವ್ಯಕ್ತಿಗಳನ್ನು ಹೇಗೆ ಗುರುತಿಸಲಾಯಿತು? ಆರೋಪಿಗಳ ಗುರುತು ಖಾತ್ರಿಪಡಿಸಿಕೊಳ್ಳುವ ಮುನ್ನ ಸಿಸಿಟಿವಿ ಇಲ್ಲವೇ ಇನ್ನಾವುದೇ ಪುರಾವೆಗಳನ್ನು ಪರಿಶೀಲಿಸಲಾಗಿದೆಯೇ ಎಂದು ಪ್ರಶ್ನಿಸಿತು.ಅಂತಿಮವಾಗಿ, ದೂರುದಾರರು ಸಲ್ಲಿಸಿದ ಮೇಲ್ಮನವಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ನೀಡುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು 2025ರ ಜನವರಿ ತಿಂಗಳಿನಲ್ಲಿ ನಡೆಸುವುದಾಗಿ ತಿಳಿಸಿದೆ.

LEAVE A REPLY

Please enter your comment!
Please enter your name here