ಮುಷ್ಕರ, ಗುತ್ತಿಗೆ ಏಜೆನ್ಸಿಯ ಅವಧಿ ಮುಕ್ತಾಯ- ಪುತ್ತೂರು ಕೆ.ಎಸ್‌.ಆರ್‌.ಟಿ.ಸಿಯಲ್ಲಿ ಚಾಲಕರ ಕೊರತೆ- ಬಸ್ ಸಂಚಾರದಲ್ಲಿ ವ್ಯತ್ಯಯ

0

ಪುತ್ತೂರು: ಒಂದೆಡೆ ಹೊರಗುತ್ತಿಗೆ ಚಾಲಕರ ಮುಷ್ಕರ, ಇನ್ನೊಂದೆಡೆ ಇನ್ನೊಂದು ಹೊರಗುತ್ತಿಗೆ ಸಂಸ್ಥೆಯ ಗುತ್ತಿಗೆ ಅವಧಿ ಮುಕ್ತಾಯ, ಒಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಲ್ಲಿ ಚಾಲಕರ ಕೊರತೆಯಿಂದಾಗಿ ಕೆಲವು ರೂಟ್‌ಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಆಶ್ರಯಿಸಿರುವ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಎಸ್‌ಆರ್‌ಟಿಸಿಯ ಪುತ್ತೂರು ಘಟಕದಲ್ಲಿ ಪನ್ನಗ ಸೆಕ್ಯೂರಿಟೀಸ್ ಏಜೆನ್ಸಿಯಲ್ಲಿ 31 ಮಂದಿ ಹಾಗೂ ಪೂಜಾಯ ಸೆಕ್ಯೂರಿಟೀಸ್ ಏಜೆನ್ಸಿಯಲ್ಲಿ 11 ಮಂದಿ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಪನ್ನಗ ಏಜೆನ್ಸಿಯವರ ಗುತ್ತಿಗೆ ಅವಧಿಯು ಡಿ.15ಕ್ಕೆ ಅಂತ್ಯಗೊಂಡಿದೆ. ಅವರ ಏಜೆನ್ಸಿ ನವೀಕರಣವಾಗಲು ಬಾಕಿಯಿದೆ. ಹೀಗಾಗಿ ಆ 31 ಮಂದಿ ಚಾಲಕರು ಅನಿವಾರ್ಯವಾಗಿ ಕರ್ತವ್ಯಕ್ಕೆ ಬರುತ್ತಿಲ್ಲ, ಪೂಜಾಯ ಸೆಕ್ಯೂರಿಟಿಸ್ ಏಜೆನ್ಸಿಯಲ್ಲಿ 11 ಮಂದಿ ಚಾಲಕರಿದ್ದು ಅವರಲ್ಲಿ 8 ಮಂದಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ತೊಡಗಿಸಿಕೊಂಡಿದ್ದು ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ವೇತನದಲ್ಲಿ ಕಡಿತ ಹಾಗೂ ವೇತನ ಪಾವತಿ ವಿಳಂಬ ಮಾಡುತ್ತಿರುವ ಗುತ್ತಿಗೆ ಸಂಸ್ಥೆಗಳ ಕ್ರಮವನ್ನು ವಿರೋಧಿಸಿ ಪುತ್ತೂರು ಕೆಎಸ್‌ಆರ್‌ಟಿಸಿಯ ಹೊರಗುತ್ತಿಗೆ ಚಾಲಕರು ಡಿ.15ರಿಂದ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸುತ್ತಿದ್ದಾರೆ. ಒಟ್ಟು 11 ಮಂದಿ ಪೂಜಾಯ ಸೆಕ್ಯೂರಿಟೀಸ್ ಏಜೆನ್ಸಿ ಮೂಲಕ ಪುತ್ತೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮಗೆ ನೀಡುವ ಅಲ್ಪ ವೇತನದಲ್ಲಿ ಪ್ರತಿ ತಿಂಗಳು ಪ್ರತಿ ಚಾಲಕರಿಂದ ತಲಾ ರೂ.3000ರಿಂದ 5000 ತನಕ ಕಡಿತ ಮಾಡುತ್ತಿದ್ದಾರೆ. ಕಡಿತ ಮಾಡದಂತೆ ಹಲವು ಬಾರಿ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ. ಕಡಿತ ಮಾಡಿದ ಮೊತ್ತವನ್ನು ಹಿಂತಿರುಗಿಸುವಂತೆ ತಿಳಿಸಲಾಗಿದೆ. ಆದರೆ,ಮನವಿ ಮಾಡಿ ಹಲವು ತಿಂಗಳು ಕಳೆದರೂ ಹಿಂತಿರುಗಿಸಿರುವುದಿಲ್ಲ. ಹೀಗಾಗಿ ಡಿ.15ರಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಪ್ರಾರಂಭಿಸಿದ್ದು ಪೂಜಾಯ ಸೆಕ್ಯೂರಿಟೀಸ್ ಏಜೆನ್ಸಿಯಲ್ಲಿರುವ 11 ಮಂದಿ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸುತ್ತಿದ್ದೇವೆ. ಕಡಿತಗೊಳಿಸುವ ಮೊತ್ತವನ್ನು ಹಿಂತಿರುಗಿಸುವುದಾಗಿ ಹೇಳುತ್ತಿದ್ದಾರೆ ಹೊರತು ಈ ತನಕ ಹಣ ಪಾವತಿಸಿಲ್ಲ. ಹಣ ಮರುಪಾವತಿಸುವ ತನಕ ಮುಷ್ಕರ ಮುಂದುವರಿಯಲಿದೆ ಎಂದು ಪೂಜಾಯ ಸೆಕ್ಯೂರಿಟಿಸ್ ಏಜೆನ್ಸಿಯ ಚಾಲಕರು ತಿಳಿಸಿದ್ದಾರೆ.

39 ಚಾಲಕರ ಕೊರತೆ:

ಪುತ್ತೂರು ಘಟಕದಲ್ಲಿ ಪನ್ನಗ ಸೆಕ್ಯೂರಿಟೀಸ್ ಏಜೆನ್ಸಿಯಲ್ಲಿ 31 ಮಂದಿ ಹಾಗೂ ಪೂಜಾಯ ಸೆಕ್ಯೂರಿಟಿಸ್ ಏಜೆನ್ಸಿಯಲ್ಲಿ 11 ಮಂದಿ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಪೂಜಾಯ ಏಜೆನ್ಸಿಯ 11 ಚಾಲಕರ ಪೈಕಿ 8 ಮಂದಿ ಗೈರಾಗಿದ್ದಾರೆ. ಪನ್ನಗ ಸೆಕ್ಯುರಿಟೀಸ್ ಏಜೆನ್ಸಿಯವರ ಗುತ್ತಿಗೆ ಅವಧಿ ಮುಗಿದಿರುವುದರಿಂದ ಈ ಏಜೆನ್ಸಿ ಮೂಲಕ ಕಾರ್ಯನಿರತರಾಗಿದ್ದ 31 ಮಂದಿ ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ ಪುತ್ತೂರು ಘಟಕದಲ್ಲಿ ಒಟ್ಟು 39 ಚಾಲಕರ ಕೊರತೆ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಾಲಕರ ಕೊರೆತೆಯಿಂದ ಕೆಲವು ಪ್ರದೇಶಗಳಿಗೆ ಬಸ್ ಸೌಲಭ್ಯವಿಲ್ಲದಂತಾಗಿದೆ. ಪ್ರಯಾಣಿಕರು ಇದನ್ನು ಗಮನಿಸುವಂತೆ ಬಸ್ ನಿಲ್ದಾಣದಲ್ಲಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗುತ್ತಿತ್ತು.

ಖಾಯಂ ಸಿಬ್ಬಂದಿಗಳಿಗೆ ಹೆಚ್ಚಿದ ಒತ್ತಡ:

ಏಜೆನ್ಸಿ ಮೂಲಕ ಕಾರ್ಯನಿರ್ವಹಿಸುತ್ತಿರುವ ಚಾಲಕರ ಕೊರತೆ ಉಂಟಾಗಿರುವುದರಿಂದ, ಬಸ್ ಸಂಚಾರ ವ್ಯವಸ್ಥೆಯಲ್ಲಿ ಹೆಚ್ಚಿನ ತೊಂದರೆಗಳಾಗದಂತೆ ನಿಭಾಯಿಸುವ ನಿಟ್ಟಿನಲ್ಲಿ ಇರುವ ಖಾಯಂ ಚಾಲಕರ ಮೇಲೆ ಒತ್ತಡ ಹೇರಲಾಗುತ್ತಿದೆ.ನಾವು ರಜೆಯಿಲ್ಲದೆ ದುಡಿಯಬೇಕಾದ ಪರಿಸ್ಥಿತಿಯಿದೆ.ವಾರದ ರಜೆಯನ್ನೂ ಪಡೆಯುವಂತಿಲ್ಲ.ದಿನಕ್ಕೆ ಚಾಲಕರು ಕನಿಷ್ಠ 180ರಿಂದ 220 ಕಿ.ಮೀ ದುಡಿಯಬೇಕಿದ್ದರೂ ಇದೀಗ ಚಾಲಕರ ಕೊರತೆಯಿಂದಾಗಿ ಒಬ್ಬ ಚಾಲಕ ದಿನಕ್ಕೆ 350 ಕಿ.ಮೀ ದೂರ ಚಾಲನೆಯ ಕೆಲಸ ಮಾಡಬೇಕಾಗಿದೆ. ಹೆಚ್ಚುವರಿ ಕೆಲಸ ಮಾಡಬೇಕಾಗಿದ್ದರೂ ಅದಕ್ಕೆ ಹೆಚ್ಚುವರಿ ವೇತನವಿಲ್ಲದೇ ದುಡಿಯಬೇಕಾಗಿದೆ ಎಂದು ಖಾಯಂ ಚಾಲಕರುಗಳು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಪನ್ನಗ ಸೆಕ್ಯೂರಿಟೀಸ್ ಏಜೆನ್ಸಿಯ ಗುತ್ತಿಗೆ ಅವಧಿ ಡಿ.15ಕ್ಕೆ ಮುಕ್ತಾಯಗೊಂಡಿದ್ದು ಅದು ಮತ್ತೆ ನವೀಕರಣಗೊಂಡು ಆದೇಶವಾಗಿದೆ. ಹೀಗಾಗಿ ಆ ಏಜೆನ್ಸಿಯ ಚಾಲಕರು ಡಿ.17ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಹೊರಗುತ್ತಿಗೆ ಚಾಲಕರಿಲ್ಲದೆ ಸಮಸ್ಯೆ ಉಂಟಾಗಿರುವ ರೂಟ್‌ಗಳಿಗೆ ಖಾಯಂ ಚಾಲಕರನ್ನು ಬಳಸಿಕೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಪೂಜಾಯ ಏಜೆನ್ಸಿಯ ಚಾಲಕರಿಗೆ ಕಡಿತ ಮಾಡಿರುವ ಮೊತ್ತವನ್ನು ಅವರ ಖಾತೆಗೆ ಜಮೆ ಮಾಡಿರುವ ಬಗ್ಗೆ ಮಾಹಿತಿಯಿದ್ದು ಅವರೂ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
-ಅಮಲಿಂಗಯ್ಯ ಬಿ ಹೊಸಪೂಜಾರಿ,
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ

LEAVE A REPLY

Please enter your comment!
Please enter your name here