ಕುಟ್ರುಪಾಡಿ: ಶ್ರೀಕ್ಷೇತ್ರ ಕಲ್ಮಲೆಯಲ್ಲಿ ಭರದಿಂದ ಸಾಗುತ್ತಿದೆ ಶ್ರೀ ನಾಗದೇವರು ಮತ್ತು ದೈವಗಳ ಸಾನಿಧ್ಯದ ಜೀರ್ಣೋದ್ದಾರ ಕಾರ್ಯ

0

ಕಡಬ: ಕುಟ್ರುಪಾಡಿ ಗ್ರಾಮದ ಕಲ್ಮಲೆ ಎಂಬಲ್ಲಿ ಎತ್ತರವಾದ ಪ್ರದೇಶದಲ್ಲಿ ಸುಮಾರು 200 ವರ್ಷಗಳ ಹಳೆಯದಾದ ಕಲ್ಲಮಾಡವೊಂದು ಇರುವುದು ಪ್ರಶ್ನಾ ಚಿಂತನೆ ನಡೆಸಿದಾಗ ಶ್ರೀ ನಾಗದೇವರು ಮತ್ತು ವ್ಯಾಘ್ರ ಚಾಮುಂಡಿ, ಅರಸು ಉಳ್ಳಾಕುಲು, ವರ್ಣಾರ ಪಂಜುರ್ಲಿ, ಸತ್ಯದೇವತೆ, ಗುಳಿಗ ದೈವಗಳ ಸಾನಿಧ್ಯಗಳು ಗೋಚರಿಸಿದ್ದು ಬಳಿಕ ಇಲ್ಲಿ ಜೀರ್ಣೋದ್ದಾರ ಕಾರ್ಯ ನಡೆದಿದ್ದು, 2025ರ ಜ.2ರಂದು ಕ್ಷೇತ್ರದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ.

ಶ್ರೀ ಕಲ್ಮಲೆ ಸಾನಿಧ್ಯದಲ್ಲಿ ದೈವಜ್ಞರ ಮುಖೇನ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ನಾಗದೇವರು ಮತ್ತು ವ್ಯಾಘ್ರ ಚಾಮುಂಡಿ, ಅರಸು ಉಳ್ಳಾಕುಲು, ವರ್ಣಾರ ಪಂಜುರ್ಲಿ, ಸತ್ಯದೇವತೆ, ಗುಳಿಗ ದೈವಗಳ ಸಾನಿಧ್ಯಗಳು ಗೋಚರಿಸಿದ್ದು, ಎತ್ತರದ ಬೆಟ್ಟ ಪ್ರದೇಶದಲ್ಲಿರುವ ಈ ಸಾನಿಧ್ಯಗಳು ನಾಶವಾಗಿದ್ದು ಅರಸು-ಉಳ್ಳಾಕುಲು ದೈವಕ್ಕೆ ಸಂಬಂಧಪಟ್ಟ ಕಲ್ಲಮಾಡವೊಂದು ಮಾತ್ರ ಇತ್ತು. 200 ವರ್ಷಗಳ ಹಿಂದೆ ಜೈನ ಅರಸರ ಆಳ್ವಿಕೆಗೆ ಒಳಪಟ್ಟಿದೆಯೆಂದು, ಬ್ರಾಹ್ಮಣರಿಂದ ಸೇವೆಗಳು ನಡೆಯುತ್ತಿತ್ತು ನಂತರದ ದಿನಗಳಲ್ಲಿ ನಿರ್ವಹಣೆ ಕೊರತೆಯಿಂದ ಈ ಸ್ಥಿತಿಗೆ ತಲುಪಿದೆ ಎಂದು ಜ್ಯೋತಿಷಿ ಶ್ರೀ ಸತ್ಯನಾರಾಯಣ ಭಟ್ ಪಂಜ ಇವರ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.


ಯಂ.ಶಶಾಂಕ ಗೋಖಲೆಯವರ ಗೌರವಾಧ್ಯಕ್ಷತೆಯಲ್ಲಿ, ಚಿದಾನಂದ ಕೊಡೆಂಕೀರಿಯವರ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯೊಂದನ್ನು ರಚಿಸಿ ಊರ ಪರವೂರ ದಾನಿಗಳಿಂದ ಧನ ಸಂಗ್ರಹ ಕಾರ್ಯವೂ ನಡೆಯುತ್ತಿದೆ. ಇದೀಗ ದೈವ ದೇವರುಗಳ ಸುಂದರ ಆಲಯ ನಿರ್ಮಾಣವಾಗಿದ್ದು, ಪ್ರತಿಷ್ಠಾ ಕಾರ್ಯಕ್ಕೆ ಈಗಾಗಲೇ ದಿನ ನಿಗದಿಗೊಳಿಸಲಾಗಿದೆ. ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಇವರ ಮಾರ್ಗದರ್ಶನದಲ್ಲಿ ತಂತ್ರಿಗಳಾದ ಸುಬ್ರಹ್ಮಣ್ಯ ಬಳಕ್ಕುರಾಯ ಕೆಮ್ಮಿಂಜೆಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ಸ್ಥಳೀಯ ಗ್ರಾಮಸ್ಥರು ಪ್ರತಿ ದಿನ ದೈವಸ್ಥಾನದ ಅಭಿವೃದ್ದಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಶ್ರಮದಾನದ ಮೂಲಕವೂ ಹಲವಾರು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here