ಉಪ್ಪಿನಂಗಡಿ: ಮದುವೆ ಆಮಂತ್ರಣ ಪತ್ರದಲ್ಲಿ ಮೋದಿಯವರ ಪರ ಮತಯಾಚನೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ ‘ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧುವರರಿಗೆ ನೀಡುವ ಉಡುಗೊರೆ. ಯಾಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು’ ಎಂದು ದಾಖಲಿಸಿರುವುದಕ್ಕೆ ವರನ ವಿರುದ್ಧ ಚುನಾವಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರಿಂದ ದಾಖಲಿಸಲ್ಪಟ್ಟ ಪ್ರಕರಣವನ್ನು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ರದ್ದುಗೊಳಿಸಿ ತೀರ್ಪು ನೀಡಿದೆ. ಚುನಾವಣೆ ಘೋಷಣೆಗೂ ಮುನ್ನ ಮುದ್ರಣಗೊಂಡ ಆಮಂತ್ರಣ ಪತ್ರದಲ್ಲಿ ಮತಯಾಚನೆ ಮಾಡುವುದು ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
ಕಡಬ ತಾಲೂಕು ಆಲಂತಾಯ ಗ್ರಾಮದ ಶಿವಾರು ದಿವಂಗತ ಶಿವಪ್ಪ ಗೌಡರ ಮಗ ಶಿವಪ್ರಸಾದ್ ಯಾನೆ ರವಿಯವರ ವಿವಾಹವು ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಕೊಳಂಬೆ ಬಾಬು ಗೌಡರ ಮಗಳು ಪ್ರಮೀಳಾ ಕೆ. ಅವರೊಂದಿಗೆ ಎಪ್ರಿಲ್ 18 ರಂದು ಗೋಳಿತೊಟ್ಟು ಸಿದ್ಧಿವಿನಾಯಕ ಕಲಾ ಮಂದಿರದಲ್ಲಿ ಜರಗಿತ್ತು. ವಿವಾಹದ ಅಂಗವಾಗಿ ಸಿದ್ದಪಡಿಸಲಾದ ಆಮಂತ್ರಣ ಪತ್ರವನ್ನು ಮಾರ್ಚ್ 1 ರಂದು ಮುದ್ರಿಸಲಾಗಿದ್ದು, ಸದ್ರಿ ಆಮಂತ್ರಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದೇ ನೀವು ನಮಗೆ ನೀಡುವ ಉಡುಗೊರೆ ಎಂದು ಶಿವಪ್ರಸಾದ್ ರವರು ಉಲ್ಲೇಖಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಚುನಾವಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ಎಪ್ರಿಲ್ 14 ರಂದು ವರನ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ, ತಾನು ಮಾರ್ಚ್ 1 ರಂದೇ 800 ಆಮಂತ್ರಣ ಪತ್ರವನ್ನು ಮುದ್ರಿಸಿದ್ದು, ಅದರಲ್ಲಿ ಹತ್ತು ಆಮಂತ್ರಣ ಪತ್ರ ಹೊರತುಪಡಿಸಿ ಎಲ್ಲವನ್ನೂ ಹಂಚಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನಾ ಆಮಂತ್ರಣ ಪತ್ರವನ್ನು ಮುದ್ರಿಸಿ , ವಿತರಿಸಲಾಗಿದ್ದು ತನ್ನ ಕೃತ್ಯ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದಿಲ್ಲ. ಪ್ರಧಾನಿ ಮೋದಿಯ ಮೇಲಿನ ಪ್ರೀತಿ ಹಾಗೂ ರಾಷ್ಟ್ರದ ಮೇಲಿನ ಕಾಳಜಿಯಿಂದ ಇದನ್ನು ಉಲೇಖಿಸಲಾಗಿದೆಯೇ ವಿನಃ ಕಾನೂನನ್ನು ಉಲ್ಲಂಘಿಸುವ ಬೇರಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ. ಈ ಕಾರಣಕ್ಕೆ ಇದನ್ನು ಅಪರಾಧವೆಂದು ಪರಿಗಣಿಸಬಾರದು ಹಾಗೂ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳಬಾರದೆಂದು ಲಿಖಿತ ಹೇಳಿಕೆಯನ್ನು ನೀಡಿದ್ದರು.
ಬಳಿಕ ಎಪ್ರಿಲ್ 18 ರಂದು ವಿವಾಹ ಸಾಂಗವಾಗಿ ನೆರವೇರಿದ್ದು, ಎಪ್ರಿಲ್ 26 ರ ಚುನಾವಣೆಯೂ ಮುಗಿದ ಬಳಿಕ ಅಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಪರ ನ್ಯಾಯವಾದಿ ವಿನೋದ್ ಕುಮಾರ್ ಎಂ. ರವರ ವಾದವನ್ನು ಪುರಸ್ಕರಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ತನ್ನ ವಿವಾಹ ಆಮಂತ್ರಣ ಪತ್ರವನ್ನು ಮುದ್ರಿಸಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಉಲಂಘಿಸಿದಂತಾಗದು ಹಾಗೂ ಇದು ಚುನಾವಣೆಗೋಸ್ಕರ ಮುದ್ರಿಸಿದ ಪತ್ರವಾಗದೆ ತನ್ನ ವಿವಾಹಕ್ಕಾಗಿ ಮುದ್ರಿಸಿದ ಪತ್ರವಾಗಿರುವುದರಿಂದ ಇದರಲ್ಲಿ ಆಪೇಕ್ಷಿಸಿದ ಭಾವನೆಯು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಒಳಗಾಗುವುದಿಲ್ಲ ಎನ್ನುವುದನ್ನು ಪರಿಗಣಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಪ್ರಕರಣದಲ್ಲಿ ಅಪರಾಧ ಕೃತ್ಯವು ಗೋಚರಿಸದ ಕಾರಣ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದ್ದಾರೆ.