ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಮೃತಪಟ್ಟ ಬಾಲಕಿಯ ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ ಕಿಡಿಗೇಡಿಗಳು: ಪೊಲೀಸ್ ಠಾಣೆಗೆ ದೂರು

0

ಪುತ್ತೂರು: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಮೃತಪಟ್ಟ ಬಾಲಕಿಯ ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ವಾಹನದ ಸಂಚಾರಕ್ಕೆ ಅಡ್ಡಿ ಪಡಿಸಿದ ಕಿಡಿಗೇಡಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ.

ಘಟನೆಯ ವಿವರ

ಅ.10ರಂದು ಸಂಜೆ ಪಡ್ನೂರು ಗ್ರಾಮದ ಸೇಡಿಯಾಪು ಬಳಿಯ ಕೂಟೇಲು ಸಮೀಪ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಪಡ್ನೂರು ಗ್ರಾಮದ ಕೂಟೇಲು ನಿವಾಸಿಗಳಾದ ಕಿರಣ್ ಮತ್ತು ಚೈತ್ರಾ ದಂಪತಿಯ ಏಕೈಕ ಪುತ್ರಿ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಶಾ(7ವ.), ಕೂಟೇಲು ಕಿಶೋರ್ ಎಂಬವರ ಪುತ್ರ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಪ್ರತ್ಯೂಶ್(10ವ.) ಮತ್ತು ಮಕ್ಕಳ ರಕ್ಷಣೆಗೆ ಧಾವಿಸಿ ಬಂದು ಹೆಜ್ಜೇನು ಕಡಿತಕ್ಕೊಳಗಾಗಿದ್ದ ಸ್ಥಳೀಯ ನಿವಾಸಿ ನಾರಾಯಣ(40ವ.)ಎಂಬವರು ಗಾಯಗೊಂಡಿದ್ದರು.


ಅ.10ರಂದು ಸಂಜೆ ಇಶಾ ಮತ್ತು ಪ್ರತ್ಯೂಶ್‌ರವರು ಎಂದಿನಂತೆ ಶಾಲೆಯಿಂದ ರಿಕ್ಷಾದಲ್ಲಿ ಬಂದು ಮನೆಯ ಕಡೆಗೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೂಟೇಲು ಸಮೀಪ ಹೆಜ್ಜೇನುಗಳು ಏಕಾಏಕಿ ಇವರ ಮೇಲೆ ದಾಳಿ ಮಾಡಿತ್ತು. ಹೆಜ್ಜೇನು ದಾಳಿಯಿಂದಾದ ನೋವು ತಡೆದುಕೊಳ್ಳಲಾಗದೆ ಇಶಾ ಮತ್ತು ಪ್ರತ್ಯೂಶ್ ರಸ್ತೆಗೆ ಬಿದ್ದು ಹೊರಳಾಡುತ್ತಾ ಕಿರುಚಾಡುವುದನ್ನು ಕೇಳಿ ಸ್ಥಳೀಯರಾದ ನಾರಾಯಣ್ ಎಂಬವರು ಮಕ್ಕಳ ರಕ್ಷಣೆಗೆ ಧಾವಿಸಿ ಬಂದಿದ್ದರು. ಈ ವೇಳೆ ಅವರ ಮೇಲೂ ಹೆಜ್ಜೇನುಗಳು ದಾಳಿ ಮಾಡಿದ್ದವು. ಗಂಭೀರ ಗಾಯಗೊಂಡಿದ್ದ ಇಶಾ ಮತ್ತು ಪ್ರತ್ಯೂಶ್ ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾರಾಯಣ ಅವರನ್ನು ಮಹಾವೀರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ತೀವ್ರ ಅಸ್ವಸ್ಥಗೊಂಡ ಇಶಾ ಅವರನ್ನು ಅ.11ರಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಅಲ್ಲಿ ಮೃತಪಟ್ಟಿದ್ದರು. ಇಶಾ ಅವರ ಮೃತದೇಹವನ್ನು ಮಂಗಳೂರು ಆಸ್ಪತ್ರೆಯಿಂದ ಅವರ ಮನೆಗೆ ಕರೆ ತರಲಾಗುತ್ತಿದ್ದ ವೇಳೆ ಪೆರ್ನೆ-ಕಡಂಬು ರಸ್ತೆಯ ಮಧ್ಯೆ ನಿಂತಿದ್ದ ಕಿಡಿಗೇಡಿಗಳು ಆಂಬ್ಯುಲೆನ್ಸ್ ತಡೆದು ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ. ಮಗುವಿನ ಮೃತದೇಹವನ್ನು ಸಾಗಿಸುತ್ತಿರುವುದಾಗಿ ತಿಳಿಸಿ, ಅಡ್ಡಿ ಪಡಿಸದಂತೆ ಪರಿಪರಿಯಾಗಿ ವಿನಂತಿಸಿದರೂ ಕಿಡಿಗೇಡಿಗಳ ತಂಡ ಅನುಚಿತವಾಗಿ ವರ್ತಿಸಿದೆ. ಮದ್ಯಪಾನ ಮಾಡಿದ್ದ ಯುವಕರ ತಂಡ ಈ ಕೃತ್ಯ ಎಸಗಿದೆ. ಬಳಿಕ ಘಟನೆಯ ಕುರಿತು ಆಂಬ್ಯುಲೆನ್ಸ್ ಚಾಲಕ ಅವಿನಾಶ್ ಹಾರಾಡಿ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿ ಪಡಿಸಿದ ನಂತರ ಕಿಡಿಗೇಡಿಗಳು ತೆರಳಿದ್ದ ಕಾರಿನ ನಂಬರ್ ಆಧಾರದಲ್ಲಿ ಯುವಕರು ಯಾರು ಎಂಬುದನ್ನು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ಈ ಪೈಕಿ ಗಜೇಂದ್ರ ಎಂಬಾತನ ಮನೆಗೆ ತೆರಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಜೇಂದ್ರ ಮನೆಯಲ್ಲಿ ಇಲ್ಲದ ಕಾರಣ ಪೊಲೀಸ್ ಠಾಣೆಗೆ ಬರುವಂತೆ ಆತನ ಮನೆಯವರಿಗೆ ಪೊಲೀಸರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here