ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭ ಆಡಿಟೋರಿಯಂನಲ್ಲಿ ಡಿ.18ರಂದು ಬಹುಮಾನ ವಿತರಣಾ ಕಾರ್ಯಕ್ರಮವು ನಡೆಯಿತು.
ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಎಲ್.ಕೆ.ಜಿ ಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಗಣರಾಜ್ ಕುಂಬ್ಳೆ ಇವರು ಮಾತನಾಡಿ ಗೆಲುವು ಸಾಧಿಸುವುದು ಎಷ್ಟು ಮುಖ್ಯವೋ, ಭಾಗವಹಿಸುವಿಕೆ ಕೂಡ ಅಷ್ಟೇ ಮುಖ್ಯ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ಶಿಕ್ಷಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸಿ, ಬರೆಯುವ ಕೌಶಲ ಬೆಳೆಸುವ ಸದುದ್ದೇಶದಿಂದ ರಚಿತಗೊಂಡ ಇಂದ್ರಧನುಶ್ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕರುಣಾಕರ ಸುವರ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ಭಟ್, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ- ಶಿಕ್ಷಕೇತರ ವೃಂದದವರು, ಪಾಲಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಸ್ವಾಗತಿಸಿ, ವಿಜ್ಞಾನ ಶಿಕ್ಷಕಿ ನಿಶಿತಾ ಕೆ ಕೆ ವಂದಿಸಿದರು, ಸಹಶಿಕ್ಷಕಿಯರಾದ ರಚನಾ ಎಂ ಹಾಗೂ ರಮ್ಯ ಕಾರ್ಯಕ್ರಮ ನಿರೂಪಿಸಿದರು.