ಭಾರತೀಯ ವಿಜ್ಞಾನಿಗಳು ಶ್ರೇಷ್ಠ ಸಾಧಕರು: ಡಾ.ಪ್ರಭಾಕರ ಭಟ್
ನೆಲ್ಯಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧೀನದಲ್ಲಿರುವ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ನೂತನವಾಗಿ ಜೋಡಣೆಗೊಂಡ ಸಿ.ವಿ.ರಾಮನ್ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಡಿ.21ರಂದು ಬೆಳಿಗ್ಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಮಾತನಾಡಿ, ಭಾರತೀಯ ವಿಜ್ಞಾನಿಗಳು ಶ್ರೇಷ್ಠ ಸಾಧಕರು. ವಿಶ್ವಕ್ಕೆ ಶ್ರೇಷ್ಠತೆಯ ಸಾಧನೆಗೈದ ವಿಜ್ಞಾನಿಗಳು ನಮ್ಮ ದೇಶದವರು. ನಮ್ಮ ದೇಶ ಹೆಮ್ಮೆಯ ದೇಶ, ವಿಶ್ವಕ್ಕೆ ಜ್ಞಾನ ಮತ್ತು ವಿಜ್ಞಾನ ಕೊಟ್ಟ ಮಹಾ ಪುರುಷರು, ಸಾಧಕರು ಹುಟ್ಟಿದ ನಾಡಿದು. ಇವತ್ತಿನ ಕೆಲವೊಂದು ಸಂಶೋಧನೆಗಳಿಗೆ ಮೂಲ ಭಾರತೀಯ ವಿಜ್ಞಾನದ ಕೊಡುಗೆ ಇದೆ. ಇತಿಹಾಸದ ಸತ್ಯವನ್ನು ವಿದ್ಯಾರ್ಥಿಗಳಿಗೆ ನೀಡಿದಾಗ ನಮ್ಮ ಮುಂದಿನ ಪೀಳಿಗೆ ಇನ್ನುಷ್ಟು ಸಾಧನೆಗಳನ್ನು ತಂದುಕೊಳ್ಳಬಹುದು ಎಂದು ಹೇಳಿದರು.
ಅತಿಥಿಗಳಾಗಿದ್ದ ಕೆನರಾ ಬ್ಯಾಂಕ್ನ ನೆಲ್ಯಾಡಿ ಶಾಖೆಯ ಅಧಿಕ್ಷಕ ವಿಪಿನ್, ಕೆನರಾ ಬ್ಯಾಂಕ್ನ ನಿವೃತ್ತ ಅಧಿಕ್ಷಕ ರಾಘವೇಂದ್ರ ವೈ.ಕೆ.ಶುಭಹಾರೈಸಿದರು. ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಮುರಳೀಧರರವರು ಸ್ವಾಗತಿಸಿ, ಕಾರ್ಯದರ್ಶಿ ಮೂಲಚಂದ್ರ ವಂದಿಸಿದರು. ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.