ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಸಮರ್ಪಣೆಯಾಗಲಿರುವ ಬ್ರಹ್ಮರಥಕ್ಕೆ ಪುತ್ತೂರಲ್ಲಿ ಸ್ವಾಗತ

0

ಪುತ್ತೂರು: ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದರವರು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಸಮರ್ಪಿಸಲಿರುವ ಬ್ರಹ್ಮರಥಕ್ಕೆ ಪುತ್ತೂರಿನಲ್ಲಿ ಅದ್ದೂರಿ ಸ್ವಾಗತಿಸಿ, ಬೀಳ್ಕೊಡುಗೆ ನಡೆಯಿತು.


ಕುಂದಾಪುರದ ಕೋಟೇಶ್ವರದಲ್ಲಿ ನಿರ್ಮಾಣಗೊಂಡು ಬ್ರಹ್ಮರಥವು ಡಿ.23ರಂದು ಬೆಳಿಗ್ಗೆ ಕೋಟೇಶ್ವರದಿಂದ ಲಾರಿಯ ಮೂಲಕ ಹೊರಟ ರಥವು ಡಿ.24ರಂದು ಪುತ್ತೂರಿಗೆ ಆಗಮಿಸಿದೆ. ಸಂಜೆ ತೆಂಕಿಲದಲ್ಲಿ ರಥವನ್ನು ಸ್ವಾಗತಿಸಲಾಯಿತು. ರಾತ್ರಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ತಂಗಿತ್ತು. ಡಿ.25ರಂದು ಬೆಳಿಗ್ಗೆ ತೆಂಕಿಲ ವಿವೇಕಾನಂದ ಶಾಲಾ ಆವರಣದಿಂದ ಸುಳ್ಯದತ್ತ ಹೊರಟ ಬ್ರಹ್ಮರಥದವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್,  ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ತೆಂಗಿನ ಕಾಯಿ ಒಡೆದು, ಪುಷ್ಪಾರ್ಚಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.


ತೆಂಗಿನ ಕಾಯಿ ಒಡೆದು ಚಾಲನೆ ನೀಡಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ದೇವರ ಬ್ರಹ್ಮರಥ ನೋಡುವುದೇ ಭಾಗ್ಯ. ಅದರಲ್ಲೂ ದೇವರಿಗೆ ಬ್ರಹ್ಮರಥ ಸಮರ್ಪಣೆ ಮಾಡುವುದು ದೊಡ್ಡ ಸೌಭಾಗ್ಯವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಚಿದಾನಂದ ಕೆ.ವಿಯವರ ಮುಖಾಂತರ ದೇವರಿಗೆ ಬ್ರಹ್ಮರಥವು ಸಮರ್ಪಣೆಯಾಗುತ್ತಿದೆ. ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ಶುಭಹಾರೈಸಿದರು.


ಸುಳ್ಯ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಬ್ರಹ್ಮರಥದ ದಾನಿಗಳಾಗಿರುವ ಡಾ.ಚಿದಾನಂದ ಕೆ.ವಿ ಮಾತನಾಡಿ, ಸುಳ್ಯದ ಚೆನ್ನಕೇಶವ ದೇವರಿಗೆ ಸಮರ್ಪಣೆಯಾಗಲಿರುವ ಬ್ರಹ್ಮರಥವು ಕೋಟೇಶ್ವರದಲ್ಲಿ ನಿರ್ಮಾಣಗೊಂಡು ಸುಳ್ಯಕ್ಕೆ ಆಗಮನವಾಗಲಿದೆ. ಪುತ್ತೂರಿಗೆ ಆಗಮಿಸಿದ ಬ್ರಹ್ಮರಥಕ್ಕೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದವರಿಗೆ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ದೇವರ ಜಾತ್ರೋತ್ಸವದಲ್ಲಿ ಡಿ.31ರಂದು ಬ್ರಹ್ಮರಥವು ದೇವರಿಗೆ ಸಮರ್ಪಣೆಯಾಗಲಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.


ಉದ್ಯಮಿ ಸಚಿನ್ ಟ್ರೇಡರ‍್ಸ್‌ನ ಮ್ಹಾಲಕ ಮಂಜುನಾಥ ನಾಯಕ್, ವಿಶ್ವಹಿಂದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ರವಿ ನಾರಾಯಣ, ಮುಖ್ಯಗುರು ಸತೀಶ್ ರೈ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ತಾ.ಪಂ ಮಾಜಿ ಸದಸ್ಯರಾದ ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ದಿವ್ಯಪುರುಷೋತ್ತಮ, ಸಂತೋಷ್ ರೈ ಕೈಕಾರ, ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಪದಾಧಿಕಾರಿಗಳಾದ ರಾಧಾಕೃಷ್ಣ ನಂದಿಲ, ಮನೋಹರ್ ಕೆ.ವಿ., ಲಿಂಗಪ್ಪ ಗೌಡ, ದಯಾನಂದ, ಗೋವರ್ಧನ, ರಾಮದಾಸ ಗೌಡ, ಅಮರನಾಥ ಗೌಡ, ಶ್ರೀಧರ ಗೌಡ ಕಣಜಾಲು, ದಿವ್ಯ ಪುರುಷೋತ್ತಮ, ಅನಂದ, ಮಧು ನರಿಯೂರು, ಸುಂದರ ಗೌಡ ನಡುಬೈಲು, ತೀಥಾನಂದ ದುಗ್ಗಳ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.


ಪೋಸ್ಟರ್ ಬಿಡುಗಡೆ:
ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಶ್ರೀಕುರುಂಜಿ ಇನ್‌ಫ್ರಾಸ್ಟ್ರಕ್ಚರ್‌ನ ವತಿಯಿಂದ ನಡೆಯಲಿರುವ ‘ಸುಳ್ಯೋತ್ಸವ’ ಕಾರ್ಯಕ್ರಮದ ಪೋಷ್ಟರ್‌ನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.


ಒಕ್ಕಲಿಗ ಗೌಡ ಸಂಘದಿಂದ ಸ್ವಾಗತ:
ವಿವೇಕಾನಂದ ಶಾಲಾ ಬಳಿಯಿಂದ ಹೊರಟ ಬ್ರಹ್ಮರಥಕ್ಕೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಬಳಿ ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪುಷ್ಪಾರ್ಚಣೆ ಮಾಡಿ ಸ್ವಾಗತಿಸಿದರು.


ತೆಂಕಿಲದಿಂದ ಹೊರಟ ಬ್ರಹ್ಮರಥದ ಮೆರವಣಿಗೆಯು ಬೈಪಾಸ್ ರಸ್ತೆಯ ಮೂಲಕ ದರ್ಬೆ, ಕುಂಬ್ರಕ್ಕೆ ಸಾಗಿ ಅಲ್ಲಿ ಸ್ವಾಗತ ಕಾರ್ಯಕ್ರಮ ನಡೆದು ಅನ್ನಸಂತರ್ಪಣೆ ನೆರವೇರಿದ ಬಳಿಕ ಕೌಡಿಚ್ಚಾರು, ಕಾವು, ಜಾಲ್ಸೂರು ರಸ್ತೆಯಾಗಿ ಸುಳ್ಯ ಪುರಪ್ರವೇಶ ಮಾಡಲಿದೆ.

LEAVE A REPLY

Please enter your comment!
Please enter your name here