ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ತಾಲೂಕು ಯುವ ಪ್ರಶಸ್ತಿ ಪ್ರದಾನ -2025 ಕಾರ್ಯಕ್ರಮ ಜ.15ರಂದು ಬೆಳಿಗ್ಗೆ ಗಂಟೆ 11ಕ್ಕೆ ಪುತ್ತೂರು ಬೈಪಾಸ್ ಆಸ್ಮಿ ಕಂಪರ್ಟ್ ಸಭಾಭವನದಲ್ಲಿ ಜರುಗಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ, ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
5 ವೈಯುಕ್ತಿಕ, 8 ಯುವಕ ಮಂಡಲಗಳಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ತಾಲೂಕು ಯುವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಉತ್ತಮ ನಿರೂಪಣೆಯಲ್ಲಿ ಬಾಲಕೃಷ್ಣ ರೈ ಪೊರ್ದಾಲ್, ನಾಟಕ ಸಂಗೀತ, ಕಲೆ ವಿಭಾಗದಲ್ಲಿ ಕಲಾವಿದ ಕೃಷ್ಣಪ್ಪ, ಸಮಾಜಿಕ ಸೇವೆ ವಿಭಾಗದಲ್ಲಿ ಪ್ರಣವ ಭಟ್, ಕಾಮಿಡಿ ಕಿಲಾಡಿ ನಟಿ ಭವ್ಯಾ ಪುತ್ತೂರು, ಸಮಾಜ ಸೇವೆ ವಿಭಾಗದಲ್ಲಿ ನವೀನ್ ರೈ ಬನ್ನೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಯುವಕ, ಯುವತಿ ಮಂಡಲ ಮತ್ತು ಬಾಲಸಭಾ ವಿಭಾಗದಲ್ಲಿ ವಿಷ್ಣು ಯುವಕ ಮಂಡಲ ಆನಡ್ಕ, ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ, ವಿನಾಯಕ ಸ್ಪೋರ್ಟ್ಸ್ ಕ್ಲಬ್ ಬಲ್ನಾಡು, ವಾಸುಕಿ ಸ್ಪೋರ್ಟ್ಸ್ ಕ್ಲಬ್ ಓಜಾಲ ಕೊಡಿಪ್ಪಾಡಿ, ಮೊಸರುಕುಡಿಕೆ ಸಮಿತಿ ಅಡ್ಯಾಲು ಕಬಕ, ಗೌರಿ ಮಹಿಳಾ ಮಂಡಲ ಸರ್ವೆ, ಸ್ಪೂರ್ತಿ ಬಾಲಸಭಾ ಬನ್ನೂರು, ಶಿವಮಣಿ ಬಾಲ ಸಮಿತಿ ಶಿವನಗರ ಮತ್ತು ಅತ್ಯುತ್ತಮ ಎನ್ಎಸ್ಎಸ್ ಘಟಕವಾಗಿ ಸಂತ ಫಿಲೋಮಿನಾ ಪದವಿ ಕಾಲೇಜು ಪುತ್ತೂರು ಪ್ರಶಸ್ತಿಗೆ ಆಯ್ಕೆಗೊಂಡಿದೆ ಎಂದು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಪಿ. ಎಂ ಅಶ್ರಫ್, ಕಾರ್ಯದರ್ಶಿ ವಸಂತ ಶಂಕರ್ ಉಪಸ್ಥಿತರಿದ್ದರು.