ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಕಲ್ಯ ತರವಾಡು ಮನೆಯ ಕುಟುಂಬದ ಮೂಲ ಶ್ರೀ ನಾಗದೇವರು, ಶ್ರೀ ರಕ್ತೇಶ್ವರಿ, ಶ್ರೀ ಗುಳಿಗ ದೈವ, ಶ್ರೀ ಪಂಜುರ್ಲಿ ದೈವ ಮತ್ತು ಬ್ರಹ್ಮರಾಕ್ಷಸ ಇದರ ಪ್ರತಿಷ್ಠಾ ಕಾರ್ಯಕ್ರಮ ನಡುಮನೆ(ಕೊಪ್ಪಳ)ಯಲ್ಲಿ ಜ.8ರಂದು ನಡೆಯಿತು.
ವೇದಮೂರ್ತಿ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ವೈದಿಕ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಜ.7ರಂದು ರಾತ್ರಿ ಪ್ರಾರ್ಥನೆ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಅಘೋರ ಹೋಮ, ಪವಮಾನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಾಧಿವಾಸ ರಕ್ಷೆ ನಡೆಯಿತು. ಜ.8ರಂದು ಬೆಳಿಗ್ಗೆ ಗಣಹೋಮ, ಕಲಶಪೂಜೆ ನಡೆದು 9.16ರ ಕುಂಭ ಲಗ್ನದಲ್ಲಿ ಶ್ರೀ ನಾಗದೇವರ ಮತ್ತು ದೈವಗಳ ಪ್ರತಿಷ್ಠಾ ಮಹೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕುಟುಂಬದ ಮುಖ್ಯಸ್ಥರಾದ ಮೋನಪ್ಪ ಗೌಡ ಕಲ್ಯ ಹಾಗೂ ಕುಟುಂಬಸ್ಥರು, ಗ್ರಾಮಸ್ಥರು ಪಾಲ್ಗೊಂಡಿದ್ದರು.