ನೇರೆಂಕಿಗುತ್ತು: ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ

0

’ತುಳುನಾಡಿನಲ್ಲಿ 2360 ದೈವಗಳಿವೆ ’ – ಡಾ| ಲಕ್ಷ್ಮಿ ಜಿ.ಪ್ರಸಾದ್

ರಾಮಕುಂಜ: ತುಳುನಾಡಿನ 2360 ದೈವಗಳ ಹೆಸರು ಸಿಕ್ಕಿದೆ. 1253 ದೈವಗಳ ಮಾಹಿತಿಯನ್ನು ಸಚಿತ್ರವಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೇವೆ ಎಂದು ತುಳು ಸಂಶೋಧಕಿ, ಉಪನ್ಯಾಸಕಿ ಡಾ| ಲಕ್ಷ್ಮೀ ಜಿ.ಪ್ರಸಾದ್ ಹೇಳಿದರು.


ಅವರು ಜ.13ರಂದು ರಾತ್ರಿ ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತುನಲ್ಲಿ ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವದ ಸಂದರ್ಭದಲ್ಲಿ ನಡೆದ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡಿದರು. ಭೂತ ಪದ ಬಳಕೆ ತಪ್ಪಲ್ಲ, ಅದರ ಅರ್ಥ ಪರಿವರ್ತನೆಯನ್ನು ಹೊರ ಜಗತ್ತಿಗೆ ಸಾರಬೇಕಾಗಿದೆ ಎಂದು ಹೇಳಿದ ಅವರು ತುಳುನಾಡಿನಲ್ಲಿ ಕನ್ನಡಿಗರು, ಮುಸ್ಲಿಮರು, ವಿದೇಶಿಗರೂ ದೈವತ್ವ ಪಡೆದುಕೊಂಡಿದ್ದಾರೆ. 26 ಮುಸ್ಲಿಮ್ ಹೆಸರಿನ ಭೂತಗಳು ಇವೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ, ಆಡಳಿತ ಸಮಿತಿ ಅಧ್ಯಕ್ಷರೂ ಆದ ಟಿ.ನಾರಾಯಣ ಭಟ್ ಅವರು ಮಾತನಾಡಿ, 41 ವರ್ಷ ನಿಂತುಹೋಗಿದ್ದ ನೇಮೋತ್ಸವ ಆರಂಭಗೊಂಡು 15 ವರ್ಷ ಆಗಿದೆ. ನಿಂತು ಹೋಗಿದ್ದ ನೇಮೋತ್ಸವ ಮತ್ತೆ ಆರಂಭವಾಗಲು ಮೂಲ ಕಾರಣ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ ಅವರು. ಎಸ್.ಕೆ.ಆನಂದ ಅವರ ಕುಟುಂಬ, ಮಾಸ್ಟರ್ ಪ್ಲಾನರಿಯ ತಂಡ ಅತೀ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ. ಊರಿನವರ ಸಹಕಾರವೂ ದೊರೆತಿರುವುದರಿಂದ ಅದ್ದೂರಿಯಾಗಿ ನೇಮೋತ್ಸವ ನಡೆಯುತ್ತಿದೆ. ಈ ಮೂಲಕ ಊರಿಗೆ ಸುಖ,ಶಾಂತಿ,ಸಮೃದ್ಧಿ ಲಭಿಸಲಿ ಎಂದರು.

ಆಡಳಿತ ಮೊಕ್ತೇಸರರಾದ ಎಸ್.ಕೆ.ಆನಂದ ಅವರು ಮಾತನಾಡಿ, ಎಲ್ಲರ ಸಹಕಾರದಿಂದ ಪ್ರತಿ ವರ್ಷವೂ ನೇಮೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಬಡತನ ಯಾವ ಸುಖವನ್ನೂ ಅನುಭವಿಸಲು ಬಿಡುವುದಿಲ್ಲ. ಆದ್ದರಿಂದ ಜನ ಬಡತನದಿಂದ ಹೊರಗೆ ಬರಬೇಕು. ಇದಕ್ಕಾಗಿ ದುಡಿದು ಹಣಗಳಿಸಬೇಕು. ಈ ಹಣವನ್ನು ಉಳಿಸಿ, ಬಳಸಿ, ಬೆಳೆಸಿ ಬದುಕನ್ನು ಅನುಭವಿಸಬೇಕು. ಈ ಉದ್ದೇಶದಿಂದಲೇ ಮಾಸ್ಟರ್ ಪ್ಲಾನರಿ ರೂರಲ್ ಸೆಂಟರ್ ಆರಂಭಿಸಿದೆ ಎಂದು ಹೇಳಿದರು. ರೇಖಾ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗೌರವಾರ್ಪಣೆ:
ಧಾರ್ಮಿಕ ಉಪನ್ಯಾಸ ನೀಡಿದ ಡಾ.ಲಕ್ಷ್ಮೀ ಜಿ.ಪ್ರಸಾದ್, 15 ವರ್ಷದಿಂದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜೀವ ಪೂಜಾರಿ ಬಟ್ಲಡ್ಕ, ಪಾಕ ಶಾಸ್ತ್ರಜ್ಞ ನಾರಾಯಣ ಭಟ್, ಸಮಿತಿ ಕಾರ್ಯದರ್ಶಿ ಕಿರಣ್ ಪಾದೆ, ದೈವದ ಮಧ್ಯಸ್ಥ ಶಶಾಂಕ್ ನೆಲ್ಲಿತ್ತಾಯ ಅವರನ್ನು ಗೌರವಿಸಲಾಯಿತು. ಆಡಳಿತ ಸಮಿತಿ ಕಾರ್ಯದರ್ಶಿ ಕಿರಣ್ ಪಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಸ್ಟರ್ ಪ್ಲಾನರಿಯ ಅರ್ಜುನ್ ಎಸ್.ಕೆ.,ಸ್ವಾಗತಿಸಿ, ಆಕಾಶ್ ಎಸ್.ಕೆ.,ವಂದಿಸಿದರು. ಜೊತೆ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕಾಯಾರ ನಿರೂಪಿಸಿದರು. ಆರತಿ ಪ್ರಾರ್ಥಿಸಿದರು.


ಯಕ್ಷ-ಗಾನ-ವೈಭವ:

ಧರ್ಮಜಾಗೃತಿ ಸಭೆಗೆ ಮೊದಲು ಡಿ.ಕೆ.ಆಚಾರ್ಯ ಮತ್ತು ಬಳಗದವರಿಂದ ಯಕ್ಷ-ಗಾನ-ವೈಭವ(ಯಕ್ಷಗಾನದ ಹಾಡುಗಳು) ನಡೆಯಿತು.

LEAVE A REPLY

Please enter your comment!
Please enter your name here