ಸೈಯದ್ ಮಲೆ ಜುಮ್ಮಾ ಮಸ್ಜೀದ್ ಸಮಿತಿಯಿಂದ ನಗರಸಭಾ ಆಯುಕ್ತರು ಮತ್ತು ಪುತ್ತೂರು ನಗರ ಪೊಲೀಸ್ ನಿರೀಕ್ಷಕರಿಗೆ ಮನವಿ
ಪುತ್ತೂರು: ಮಾದಕತೆಯನ್ನು ಉಂಟು ಮಾಡುವ,ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಕರಿಗೆ ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ, ಪುತ್ತೂರು ಸಾಲ್ಮರ ಸಯ್ಯದ್ ಮಲೆ ಜುಮ್ಮಾ ಮಸ್ಜಿದ್ ಸಮಿತಿಯ ವತಿಯಿಂದ ಪುತ್ತೂರು ನಗರಸಭಾ ಆಯುಕ್ತರು ಮತ್ತು ಪುತ್ತೂರು ನಗರ ಪೊಲೀಸ್ ಠಾಣಾ ನಿರೀಕ್ಷಕರಿಗೆ ಮನವಿಯನ್ನು ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ, ಮಾದಕ ದ್ರವ್ಯದ ಪಿಡುಗು ಜಾಸ್ತಿಯಾಗಿದ್ದು, ಇದು ಮಕ್ಕಳು ಸೇವಿಸುವ ಚಾಕ್ಲೇಟ್ ನ ಮೇಲು ಪ್ರಭಾವ ಬೀರಿದೆ. ಮಾದಕತೆಯನ್ನು ಉಂಟು ಮಾಡುವ, ತಂಬಾಕು ಉತ್ಪನ್ನಗಳಾದ, ಮಾರುತಿ ಗುಟ್ಕಾ, ಚೈನಿ, ಕೂಲ್ ಕ್ಯಾಂಡಿ ಮುಂತಾದ ಉತ್ಪನ್ನಗಳು ಅಂಗಡಿಗಳಲ್ಲಿ ಧಾರಾಳವಾಗಿ ದೊರೆಯುತ್ತಿದ್ದು, ಇದನ್ನು ಸಣ್ಣಪುಟ್ಟ ಮಕ್ಕಳಿಗೂ ಸಹ ಮಾರಾಟ ಮಾಡಲಾಗುತ್ತಿದೆ. 18 ವರ್ಷದ ಕೆಳಗಿನ ಮಕ್ಕಳಿಗೆ ಮಾರಾಟ ಮಾಡುವ ಮತ್ತು ಶಾಲಾ, ಮದ್ರಸ ವಠಾರದಿಂದ, 200 ಮೀಟರ್ ಅಂತರದಲ್ಲಿ, ಇದರ ಮಾರಾಟಕ್ಕೆ ನಿರ್ಬಂಧವಿದ್ದರೂ, ಯಾವುದೇ ಹೆದರಿಕೆ ಇಲ್ಲದೆ ನಿರ್ಭಯವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಣ್ಣಪ್ರಾಯದ ಮಕ್ಕಳಿಗೆ ಸುಲಭವಾಗಿ ಸಿಕ್ಕಿ, ಅದರ ಚಟಕ್ಕೆ ಬಲಿಯಾಗುತ್ತಿರುವುದು ಬಹಳ ಖೇದಕರ ಸಂಗತಿ ಆಗಿರುತ್ತದೆ. ಕೆಲವು ಸಣ್ಣಪುಟ್ಟ ಕ್ಯಾಂಟೀನ್ ಗಳು, ಅಂಗಡಿಗಳು ಇಂಥ ಮಾದಕ ದ್ರವ್ಯ ಪದಾರ್ಥಗಳನ್ನು ಮಾರುವ ಹಾಗೂ ಸಿಗರೇಟ್ ಸೇದುವ ಅಡ್ಡೆಗಳಾಗಿ ಮಾರ್ಪಟ್ಟಿವೆ. ಇಂತಹ ಸಣ್ಣಪುಟ್ಟ ಅಂಗಡಿ ಹಾಗೂ ಕ್ಯಾಂಟೀನ್ಗಳಿಗೆ ಯಾವುದೇ ರೀತಿಯ ಪರವಾನಿಗೆ ಇರುವುದಿಲ್ಲ. ಈ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಮಕ್ಕಳ ಹಿತವನ್ನು ಕಾಪಾಡಬೇಕೆಂದು ಒತ್ತಾಯಿಸಿ, ಸೈಯದ್ ಮಲೆ ಜುಮ್ಮಾ ಮಸ್ಜಿದ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಾಲ್ಮರ ಮೊಹಮ್ಮದ್ ಶರೀಫ್, ಯೂಸುಫ್ ತಾರಿಗುಡ್ಡೆ, ಬಾತಿಶ ಸಾಲ್ಮರ ರವರನ್ನು ಒಳಗೊಂಡ ನಿಯೋಗವು ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.