ಕಸ್ತೂರಿರಂಗನ್ ವಿರೋಧಿಸಿ ಪಂಜದಲ್ಲಿ ಪ್ರತಿಭಟನೆ

0

ಕಾಣಿಯೂರು: ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಹಾಗೂ ಬಾಧಿತ ಅರಣ್ಯದ ಕಾನೂನಿನಡಿಯಲ್ಲಿ ರೈತರ ಕೃಷಿ ಭೂಮಿಯನ್ನು ಅಕ್ರಮವಾಗಿ ಅರಣ್ಯವೆಂದು ಪರಿಗಣಿಸುವುದನ್ನು ವಿರೋಧಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ವತಿಯಿಂದ ಪಂಜ ವಲಯ ಅರಣ್ಯಾಧಿಕಾರಿ ಕಛೇರಿ ಎದುರು ರೈತರ ಬೃಹತ್ ಪ್ರತಿಭಟನೆ ಜ.15 ರಂದು ನಡೆಯಿತು.


ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಪಂಜ ವಲಯ ಅರಣ್ಯ ಕಚೇರಿಯ ಎದುರುಗಡೆ ಕಸ್ತೂರಿರಂಗನ್ ವರದಿ ಬಾಽತ ಗ್ರಾಮಗಳ ರೈತರು ಬೃಹತ್ ಪ್ರತಿಭಟನೆ ನಡೆಸಿದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು ಪ್ರತಿಬಾಧಿತ ಅರಣ್ಯದಡಿಯಲ್ಲಿ ಸೇರಿಸಿರುವ ಸರ್ವೆ ನಂಬರಿನಲ್ಲಿರುವ ಸಾರ್ವಜನಿಕ ಕಟ್ಟಡಗಳು ಹಾಗೂ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯವರು ಹಾಗೂ ಕಂದಾಯ ಇಲಾಖೆಯವರು ಬಿಟ್ಟುಕೊಡಬೇಕು .ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶದಲ್ಲಿ ಇರುವ ಅರಣ್ಯದಂಚಿನಲ್ಲಿ ಕೂಡಲೇ ಗಡಿ ಗುರುತು ಮಾಡಬೇಕು ,ಅಲ್ಲದೆ ಆನೆ ದಾಳಿ ಆಗದಂತೆ ಸೋಲಾರ್ ಬೇಲಿಯನ್ನು ಅಳವಡಿಸಬೇಕು ಎಂದರು. ಕಸ್ತೂರಿ ರಂಗನ್ ವರದಿ ಆಸ್ವಾಭಾವಿಕವಾಗಿದ್ದು ಗ್ರಾಮೀಣ ಪ್ರದೇಶಕ್ಕೆ ಬಾರದೆ ಸರ್ವೆ ಮಾಡಿರುವುದನ್ನು ನಾವುಗಳು ವಿರೋಧಿಸುತ್ತೇವೆ. ಈಗಾಗಲೇ ಅಕ್ರಮ ಸಕ್ರಮದಡಿಯಲ್ಲಿ ಅರಣ್ಯದಂಚಿ ನಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು ಅದನ್ನು ಅನೂರ್ಜಿತಗೊಳಿಸುವ ಬಗ್ಗೆ ಕೂಡ ಅರಣ್ಯ ಇಲಾಖೆ ಹೊರಟಿರುವುದು ಖಂಡನೀಯ. ಈ ಎಲ್ಲ ಸಮಸ್ಯೆಗಳಿಗೆ ಅರಣ್ಯ ಇಲಾಖೆ, ಸರ್ವೆ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಕೂಡಲೇ ಜಂಟಿ ಸರ್ವೆಯನ್ನು ಮಾಡಿ ರೈತರಿಗೆ ನ್ಯಾಯವನ್ನು ಒದಗಿಸಬೇಕಾಗಿ ಒತ್ತಾಯಿಸುತಿದ್ದೇವೆ ಎಂದ ಅವರು, ಎಲ್ಲಾ ರೈತರಿಗೂ ಕಾನೂನು ಅರಿವಿದೆ. ಇಡೀ ವಿಶ್ವದಲ್ಲಿ ಇಲ್ಲದ ಕಾನೂನನ್ನು ಭಾರತದಲ್ಲಿ ಸೃಷ್ಟಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗುವ ವರೆಗೂ ಹೋರಾಟ ನಡೆಯಲಿದೆ ಎಂದು ತಿಳಿಸಿದರು.


ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಕಸ್ತೂರಿರಂಗನ್ ವರದಿಯನ್ನು ನಾವೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು. ಈಗ ಅನೇಕರಿಗೆ ಇಲಾಖೆಯಿಂದ ನೊಟೀಸ್ ಕೂಡ ಜಾರಿಯಾಗಿದ್ದು . ಅದನ್ನು ಕೋರ್ಟ್ ಗೆ ಹಾಕಿದ್ದೇವೆ. ಆದರೆ ಇನ್ನೂ ನ್ಯಾಯ ಸಿಕ್ಕಿಲ್ಲ. ಇಲಾಖೆಯವರು, ಜನಪ್ರತಿನಿಧಿಗಳು ಇದನ್ನು ತಡೆಯಲು ಸಾಧ್ಯವಿದೆ ಎಂದು ಹೇಳಿದರು.


ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಚಂದ್ರಶೇಖರ ಬಾಳುಗೋಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿರಂಗನ್ ವರದಿ ಅವೈಜ್ಞಾನಿಕ ವಾಗಿದೆ. ರೈತರ ಅಭಿಪ್ರಾಯ ಪಡೆಯದೆ ವಿರುದ್ಧವಾದ ವರದಿ. ಜಾರಿ ನಮ್ಮ ಕೃಷಿ ಭೂಮಿಗೆ ಮಾರಕವಾಗುತ್ತದೆ.ನಾವು ರಕ್ಷಿತಾರಣ್ಯದಲ್ಲಿ ಮನೆ ಕಟ್ಟಿಲ್ಲ.ನಾವು ಜೀವ ಬೇಕಾದರೂ ಬಿಟ್ಟೇವು ಆದರೆ ಕೃಷಿ ಭೂಮಿಯನ್ನು ಬಿಡೆವು ಎಂದು ಹೇಳಿ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾಮಗಳ ರೈತರಿಗೆ ನ್ಯಾಯವನ್ನು ಒದಗಿಸಲು ಕೂಡಲೇ ಜಂಟಿ ಸರ್ವೆ ಮಾಡಬೇಕು ಎಂದು ಒತ್ತಾಯಿಸಿದರು. ರಮಾನಂದ ಎಣ್ಣೆಮಜಲು ಮಾತನಾಡಿ, ಜನಪ್ರತಿನಿಽಗಳು ಕಸ್ತೂರಿ ರಂಗನ್ ವರದಿ ಜಾರಿಯಾಗುವುದಿಲ್ಲ ಎಂದು ಪತ್ರಿಕೆಯಲ್ಲಿ ಹೇಳುತ್ತಾರೆ. ಆದರೆ ಅಧಿಕಾರ ವರ್ಗದಲ್ಲಿ ವರದಿ ಜಾರಿಗೆ ಅಗುವ ಕೆಲಸಗಳು ನಡೆಯುತ್ತಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.


ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಗೌರವ ಸಲಹೆಗಾರ ಅಶೋಕ್ ಕುಮಾರ್ ಮೂಲೆ ಮಜಲು ಸಲಹೆ ಗೀತೆ ಹಾಡಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯ ಜಯಪ್ರಕಾಶ್ ಕೂಜುಗೋಡು ನಿರೂಪಿಸಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯ ಅಚ್ಚುತ ಗೌಡ ವಂದಿಸಿದರು. ಪ್ರತಿಭಟನೆ ಬಳಿಕ ಪಂಜ ವಲಯಾರಣ್ಯಾಧಿಕಾರಿ ಸಂಧ್ಯಾ ಅವರಿಗೆ ಮನವಿ ಅರ್ಪಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಮೆಲೆನಾಡ ಜನ ಹಿತರಕ್ಷಣಾ ಸಂಘದ ಬಳ್ಪ,ಕೇನ್ಯ ಗ್ರಾಮದ ರೈತರು ಸೇರಿದಂತೆ ಮಲೆನಾಡ ಜನ ಹಿತರಕ್ಷಣಾ ವೇದಿಕೆಯ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here