ಸ್ವಾಮಿ ವಿವೇಕಾನಂದ ಜಯಂತಿ, ತಾ| ಯುವ ಪ್ರಶಸ್ತಿ ಪ್ರದಾನ :5 ವೈಯಕ್ತಿಕ, 8 ಯುವಕ ಮಂಡಲಗಳಿಗೆ ಪ್ರಶಸ್ತಿ ಪ್ರದಾನ

0

ಸ್ವಾಮಿ ವಿವೇಕಾನಂದರ ಮಾತು ಎಲ್ಲರಿಗೂ ಮಾರ್ಗದರ್ಶನ-ಲೀಲಾವತಿ ಅಣ್ಣು ನಾಯ್ಕ


ಪುತ್ತೂರು:ಸ್ವಾಮಿ ವಿವೇಕಾನಂದರು ಆಡಿದ ಮಾತುಗಳು ಜಗತ್ತಿನ ಎಲ್ಲಾ ಜನರಿಗೆ ಮಾರ್ಗದರ್ಶನವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಬೈಪಾಸ್ ಅಸ್ಮಿ ಕಂಫರ್ಟ್ ಸಭಾಭವನದಲ್ಲಿ ಜ.15ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ತಾಲೂಕು ಯುವ ಪ್ರಶಸ್ತಿ ಪ್ರದಾನ-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು.ನಿರ್ಭಯತೆ,ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿಸಲ್ಪಟ್ಟಿದ್ದಾರೆ.ಅವರ ಆದರ್ಶದೊಂದಿಗೆ ಯುವ ಜನತೆ ಉತ್ತಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂದರು.


ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಯುವಕರು ಮುಂದೆ ಬರಬೇಕು: ಮಹತೋಭಾರ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಧಾರ್ಮಿಕದಲ್ಲಾಗಲಿ ಸಾಮಾಜಿಕವಾಗಲಿ ಯುವಕರು ಮುಂದೆ ಬರಬೇಕು.ಕುರ್ಚಿ ಉಳಿಸಲು ಕೆಲವು ಸ್ವಾರ್ಥಿಗಳು ತಮ್ಮನ್ನು ಬಳಸುವ ಸಂದರ್ಭ ಯುವ ಜನತೆ ಎಚ್ಚರಿಕೆಯಿಂದ ಇರಬೇಕು ಮತ್ತು ಕನಸು ಹೊತ್ತ ಮಹಾ ತಾಯಿಯ ಕನಸನ್ನು ನನಸು ಮಾಡುವುದೇ ಮಹಾ ಕರ್ತವ್ಯ ಎಂದರು.ನಾನು ಕೂಡಾ ಯುವಕ ಮಂಡಲದಿಂದಲೇ ಮೇಲೆ ಬಂದವ.ಹಾಗಾಗಿ ಯುವಕರು ಕ್ರೀಡೆ, ಗಣೇಶೋತ್ಸವ, ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಿ.ಅಗತ್ಯದ ಕೆಲಸಕ್ಕೆ ಭಾಗವಹಿಸಿ ದೇಶವನ್ನು ಬಲಿಷ್ಠ ಮಾಡಿ.ಒಳ್ಳೆಯವರ ಸಹವಾಸ ಮಾಡಿ, ಪ್ರತಿ ಧರ್ಮವನ್ನು ಗೌರವಿಸಿ, ಎಲ್ಲರೊಂದಿಗೆ ಪ್ರಿತಿ ವಿಶ್ವಾಸದಿಂದಿರಿ. ಮೊದಲು ನಾವು ಭಾರತೀಯರಾಗೋಣ ಎಂದರು.


ಸಾಧನೆ ಸ್ವಂತಕ್ಕೆ ಆಗಿರದೆ ಸಮಾಜಕ್ಕಾಗಿ ಮಾಡಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್.ಅವರು ಮಾತನಾಡಿ, ಯುವ ಪ್ರಶಸ್ತಿಗೆ ಉತ್ತಮರನ್ನು ಆಯ್ಕೆ ಮಾಡಿ ಪ್ರಶಸ್ತಿ ವಿತರಣೆ ಮಾಡಿದ್ದು ಸಂತೋಷ ಆಗಿದೆ.ದೇಶ ಇವತ್ತು ಬಹಳಷ್ಟು ಮುಂದೆ ಬಂದರೂ ಸ್ವಾಮಿ ವಿವೇಕಾನಂದರ ಅದರ್ಶ ನಮಗೆ ಇನ್ನೂ ಅಗತ್ಯವಿದೆ.ಇವತ್ತು ನಾನು ಈ ಸ್ಥಾನ ಪಡೆಯಲು ನನಗೆ ವಿವೇಕಾನಂದರ ಸಂದೇಶದ ಅಕ್ಷರಕ್ಷರವೂ ದಿನಾಲು ನೆನಪಾಗುತ್ತಿತ್ತು.ಇವತ್ತು ನಿರುದ್ಯೋಗದ ಸಮಸ್ಯೆಯಿಲ್ಲ.ಅರ್ಹತೆಯ ಕೊರತೆ ಇದೆ.ವಿದ್ಯಾಭ್ಯಾಸಕ್ಕೆ ಕೊರತೆ ಇಲ್ಲ.ಅತ್ಯುತ್ತಮವಾಗಿ ಸಾಧನೆ ಮಾಡಬೇಕೆಂಬ ಛಲ ಬೇಕು.ಸಾಧನೆ ಸ್ವಂತಕ್ಕೆ ಆಗಿರದೆ ಸಮಾಜಕ್ಕಾಗಿ ಮಾಡಬೇಕು ಎಂದರು.


ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಯಬೇಕು:
ಸಂಪನ್ನೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಅವರು ಮಾತನಾಡಿ ತನಗಾಗಿ ದುಡಿದರೆ ಉಸಿರು ಉಳಿಯುವ ತನಕ,ಆದರೆ ಸಮಾಜಕ್ಕಾಗಿ ದುಡಿಯುವವರ ಹೆಸರು ಜಗತ್ತಿನಾದ್ಯಂತ ಶಾಶ್ವತವಾಗಿ ಉಳಿಯುತ್ತದೆ.ಸ್ವಾಮಿ ವಿವೇಕಾನಂದರ ಸ್ಥಾನವನ್ನು ತುಂಬುವ ಒಬ್ಬನೇ ಒಬ್ಬ ಸಂತ ಈ ತನಕ ಬಂದಿಲ್ಲ.ಸ್ವಾಮಿ ವಿವೇಕಾನಂದರಂತೆ ನಮ್ಮಲ್ಲಿ ಇವತ್ತು ಪ್ರಶ್ನಿಸುವ ಮನೋಭಾವ ಬೆಳೆಯಬೇಕು.ಯಾರೋ ಒಬ್ಬ ಬರುತ್ತಾನೆ ನಮ್ಮನ್ನು ಉದ್ಧಾರ ಮಾಡುತ್ತಾನೆಂಬ ಮನೋಭಾವ ಬೆಳೆಸದೆ ನಮ್ಮಲ್ಲಿ ಸ್ವಂತ ಗುರಿಯಿರಬೇಕು.ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿದರು ಎಂದರು.


ರೋಟರಿ ವಲಯ ಸಹಾಯಕ ಗವರ್ನರ್ ಸೂರ್ಯನಾಥ ಅಳ್ವ ಮಾತನಾಡಿ, ಸ್ವಾಮಿ ವಿವೇಕಾನಂದರಂತೆ ಸ್ವಹಿತ ಮೀರಿದ ಸೇವೆ ರೋಟರಿಯ ತತ್ವ ಆಗಿದೆ ಎಂದರು.ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಅವರು ಮಾತನಾಡಿ, ಪ್ರತಿಭೆಗಳ ಜನನಿ ಯುವಕ ಮಂಡಲಗಳು.ಈ ನಿಟ್ಟಿನಲ್ಲಿ ಅರ್ಹರಿಗೆ ಪ್ರಶಸ್ತಿ ಲಭಿಸಿದೆ ಎಂದರು.ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ಅವರು ಮಾತನಾಡಿ ಕಳೆದ ವರ್ಷ ಅನಿವಾರ್ಯ ಕಾರಣದಿಂದ ಪ್ರಶಸ್ತಿ ನೀಡಲು ಸಾಧ್ಯವಾಗಿಲ್ಲ ಎಂದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಪಿ.ಎಂ.ಅಶ್ರಫ್ ಉಪಸ್ಥಿತರಿದ್ದರು.ಯುವಜನ ಒಕ್ಕೂಟದ ಕೋಶಾಧಿಕಾರಿ ಹಮೀದ್ ಸಾಜ, ರೋಟರಿ ಸೆಂಟ್ರಲ್‌ನ ಭಾರತಿ ರೈ, ಪದ್ಮನಾಭ ಶೆಟ್ಟಿ, ದಿವಾಕರ ರೈ, ಚಂದ್ರಹಾಸ ರೈ, ರೋಟರಿ ಪುತ್ತೂರು ಸೆಂಟ್ರಲ್‌ನ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ರಮೇಶ್ ರೈ ಬೋಳೋಡಿ, ದೀಪಕ್ ಆಚಾರ್ಯ, ವಸಂತ ನಾಯ್ಕ್, ಪ್ರದೀಪ್ ಪೂಜಾರಿ ಅತಿಥಿಗಳನ್ನು ಗೌರವಿಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಯುವ ಪ್ರಶಸ್ತಿ ನೀಡಲಾಗುತ್ತಿದೆ.ಆದರೆ ಕಾರ್ಯಕ್ರಮಕ್ಕೆ ಅನುದಾನ ಇಲ್ಲದಾಗ ರೋಟರಿ ಕ್ಲಬ್ ಸೆಂಟ್ರಲ್ ಪೂರ್ಣ ಸಹಕಾರ ನೀಡಿದೆ ಎಂದರು.ಶಿವಮಣಿ ಬಾಲ ಸಮಿತಿಯ ಲಿಖಿತಾ ರೋಹನ್,ಲೇಖಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ರೋಟರಿ ಸೆಂಟ್ರಲ್ ನ ಕಾರ್ಯದರ್ಶಿ ವಸಂತಶಂಕರ್ ವಂದಿಸಿದರು.ಡಾ|ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

ತಪ್ಪು ಮಾಡಿದರೆ
ಸಲಹೆ ಕೊಡಿ ನಾನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾದ ಬಳಿಕ ನಮ್ಮ ಸಮಿತಿ ಮೂಲಕ ಪಕ್ಷಾತೀತವಾಗಿ ಹಲವು ಯೋಜನೆ ಮುಂದಿಟ್ಟಿದ್ದೇವೆ.ಹಾಗಾಗಿ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡಿ.ತಪ್ಪು ಮಾಡಿದರೆ ಸಲಹೆ ಕೊಡಿ.ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಸಲಹಾ ಪೆಟ್ಡಿಗೆಯನ್ನೂ ಇಟ್ಟಿದ್ದೇನೆ-
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

5 ವೈಯಕ್ತಿಕ, 8 ಯುವಕ ಮಂಡಲಗಳಿಗೆ ಪ್ರಶಸ್ತಿ ಪ್ರದಾನ
ವೈಯಕ್ತಿಕ ಪ್ರಶಸ್ತಿ ವಿಭಾಗಕ್ಕೆ ಸಂಬಂಧಿಸಿ ಉತ್ತಮ ನಿರೂಪಣೆಯಲ್ಲಿ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ಸಾಮಾಜಿಕ ಸೇವೆ ವಿಭಾಗದಲ್ಲಿ ಪ್ರಣವ್ ಭಟ್, ಕಾಮಿಡಿ ಕಿಲಾಡಿ ನಟಿ ಭವ್ಯಾ ಪುತ್ತೂರು, ನಾಟಕ ಸಂಗೀತ, ಕಲೆ ವಿಭಾಗದಲ್ಲಿ ಕಲಾವಿದ ಕೃಷ್ಣಪ್ಪ,ಸಮಾಜ ಸೇವೆ ವಿಭಾಗದಲ್ಲಿ ನವೀನ್ ರೈ ಬನ್ನೂರು ಅವರಿಗೆ ಮತ್ತು ಯುವಕ, ಯುವತಿ ಮಂಡಲ ವಿಭಾಗದಲ್ಲಿ ಆನಡ್ಕದ ವಿಷ್ಣು ಯುವಕ ಮಂಡಲ, ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ, ವಿನಾಯಕ ಸ್ಪೋರ್ಟ್ಸ್ ಕ್ಲಬ್ ಬಲ್ನಾಡು, ವಾಸುಕಿ ಸ್ಪೋರ್ಟ್ಸ್ ಕ್ಲಬ್ ಓಜಾಲ ಕೊಡಿಪ್ಪಾಡಿ, ಮೊಸರುಕುಡಿಕೆ ಸಮಿತಿ ಅಡ್ಯಾಲು ಕಬಕ, ಗೌರಿ ಮಹಿಳಾ ಮಂಡಲ ಸರ್ವೆ, ಸ್ಪೂರ್ತಿ ಬಾಲಸಭಾ ಬನ್ನೂರು, ಶಿವಮಣಿ ಬಾಲ ಸಮಿತಿ ಶಿವನಗರ ಮತ್ತು ಅತ್ಯುತ್ತಮ ಎನ್‌ಎಸ್‌ಎಸ್ ಘಟಕಕ್ಕೆ ಸಂಬಂಧಿಸಿ ಸಂತ ಫಿಲೋಮಿನಾ ಪದವಿ ಕಾಲೇಜು ಪುತ್ತೂರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾಲೇಜಿನ ಉಪಪ್ರಾಂಶುಪಾಲ ವಿಜಯ ಕುಮಾರ್ ಮೊಳೆಯಾರ್, ಪುಷ್ಪಾ ಎನ್, ಡಾ|ಚಂದ್ರಶೇಖರ್, ವಾಸುದೇವ ಸಹಿತ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here