*ಯುವಕ ಮಂಡಲಕ್ಕೆ ಮಕ್ಕಳನ್ನು ಸೇರಿಸಿ – ಗಿರಿಶಂಕರ ಸುಲಾಯ
*ಯುವಕ ಮಂಡಲದಿಂದ ಮಾದರಿ ಕಾರ್ಯಕ್ರಮ – ಮಧು ಎಸ್ ಮನೋಹರ್
*ಈ ಸ್ಥಳದ ಶಕ್ತಿಯ ಮಹಿಮೆಯಿಂದ ಜನರ ಸಹಕಾರ – ಸುಂದರ ಪೂಜಾರಿ
ಪುತ್ತೂರು: ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ವತಿಯಿಂದ ಜ.15ರಂದು 28 ನೇ ವರ್ಷದ ಅಶ್ವತ್ಥ ಮಹೋತ್ಸವ ಮತ್ತು ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆಯ ಬಳಿಕ ರಾತ್ರಿ ಶ್ರೀ ವಿಷ್ಣು ಯುವಕ ಮಂಡಲದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಯುವಕ ಮಂಡಲಕ್ಕೆ ಮಕ್ಕಳನ್ನು ಸೇರಿಸಿ:
ಜನಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಇದರ ಅಧ್ಯಕ್ಷ ಗಿರಿಶಂಕರ ಸುಲಾಯ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿ ಸ್ವಾರ್ಥ ಇಲ್ಲದೆ, ಪ್ರೀತಿಯಿಂದ, ನನ್ನದು ಅನ್ನುವುದಕ್ಕಿಂತ ನಮ್ಮದು ಎಂಬ ಭಾವನೆಯಿಂದ ಕೆಲಸ ಕಾರ್ಯ ನಡೆಯುತ್ತಿರುವುದರಿಂದ ಯುವಕ ಮಂಡಲ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸರಕಾರ ಮಾಡಲು ಆಗದನ್ನು ಅನುಷ್ಠಾನ ಮಾಡುವುದೇ ಯುವಕ ಮಂಡಲ. ಮಕ್ಕಳಿಗೆ ತಾಯಿ ಮತ್ತು ಶಾಲೆಯಲ್ಲಿ ಶಿಕ್ಷಕರು ಹೇಗೆ ಮುಖ್ಯವೋ ಸಮಾಜಕ್ಕೆ ಬೆಳಕಾಗುವ ಮಕ್ಕಳನ್ನು ಬೆಳೆಸುವುದು ಕೂಡ ಯುವಕ ಮಂಡಲ. ಈ ನಿಟ್ಟಿನಲ್ಲಿ ಮಕ್ಕಳನ್ನು ಯುವಕ ಮಂಡಲಕ್ಕೆ ಸೇರಿಸಿ ಎಂದರು.
ಯುವಕ ಮಂಡಲದಿಂದ ಮಾದರಿ ಕಾರ್ಯಕ್ರಮ ನಿರಂತರ ನಡೆಯಲಿ:
ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಅಶ್ವತ್ಥ ಮರ ಹೇಗೆ ನಾವು ಪೂಜ್ಯನಿಯವಾಗಿ ನೋಡುತ್ತೆವೆಯೋ ಅದು ನಮ್ಮ ಆರೋಗ್ಯದ ಮೇಲೆಯೂ ಉತ್ತಮ ಪ್ರಭಾವ ಬೀರುತ್ತದೆ. ಪುರಾಣ ಕಥೆಗಳಲ್ಲಿ ಆಶ್ವತ್ಥ ಮರದ ವಿಶೇಷತೆಯನ್ನು ಉಲ್ಲೇಖಿಸಲಾಗಿದೆ. ಇದನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಇಂತಹ ಕಾರ್ಯಕ್ರಮ ಯುವಕ ಮಂಡಲದಿಂದ ಆಗುತ್ತಿರುವುದು ಉತ್ತಮ ವಿಚಾರ. ಈ ಉತ್ಸವ ನಿರಂತರ ನಡೆಯಲಿದೆ. ಶ್ರೀ ವಿಷ್ಣು ಯುವಕ ಮಂಡಲ ಮಾದರಿಯಾಗಿ ಕಾರ್ಯಕ್ರಮ ನೀಡಲಿ ಎಂದರು.
ಈ ಸ್ಥಳದ ಶಕ್ತಿಯ ಮಹಿಮೆಯಿಂದ ಜನರ ಸಹಕಾರ:
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಪರಿಸರದ ಜನರ ಸಹಕಾರದಿಂದ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕ್ರೀಯಾಶೀಲವಾದ ಅಧ್ಯಕ್ಷರಿಂದ ಅಚ್ಚುಕಟ್ಟಾದ ಶಿಸ್ತು ಬದ್ಧವಾದ ಉತ್ತಮ ಯೋಜನೆ ನಡೆಯುತ್ತಿದೆ. ಅದಕ್ಕೂ ಎಲ್ಲರ ಸಹಕಾರ ಸಿಕ್ಕಿದೆ. ಈ ವರ್ಷ ಮೂರು ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ ಎಂದರು.
ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ಸ್ಥಾಪಕ ಕಾರ್ಯದರ್ಶಿ ನೆಲ್ಲಿಕಟ್ಟೆ ಈಶ ವಿದ್ಯಾಲಯದ ಸಂಚಾಲಕ ಡಾ| ಯಂ. ಗೋಪಾಲಕೃಷ್ಣ ಮತ್ತು ದ.ಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಬೆಳ್ಳಿಪ್ಪಾಡಿ ಸರಕಾರಿ ಶಾಲೆಯ ಮುಖ್ಯಗುರು ಕೆಮ್ಮಾಯಿ ನಿವಾಸಿ ಯಶೋಧ ಎನ್ ಎಂ ಅವರನ್ನು ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ಗೋಪಾಲಕೃಷ್ಣ ಅವರು ನಾನು ಈ ಮಟ್ಟಕ್ಕೆ ಬೆಳೆಯಲು ಕೆಮ್ಮಾಯಿ ಊರು, ಊರಿನವರು ಕಾರಣ. ನನಗೆ ಸನ್ಮಾನಕ್ಕಿಂತ ಯುವಕ ಮಂಡಲ ಹೆಮ್ಮಾರವಾಗಿ ಬೆಳೆದಿರುವುದು ನನಗೆ ಹೆಮ್ಮೆಯ ವಿಚಾರ ಎಂದರು. ಯಶೋದಾ ಅವರು ಮಾತನಾಡಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಸಹಕಾರ ನೀಡುವಂತೆ ಮನವಿ ಮಾಡಿದರು. ಯುವಕ ಮಂಡಲದ ಸಕ್ರೀಯರಾಗಿದ್ದು ಅಶ್ವತ್ಥ ಕಟ್ಟೆಯಲ್ಲಿ ನಿತ್ಯ ಸೇವಾ ಕಾರ್ಯ ಮಾಡುತ್ತಿರುವ ಏಕ ನಿವಾಸಿ ಈಶ್ವರ್ ಅವರನ್ನು ಗೌರವಿಸಲಾಯಿತು. ಪ್ರಶಾಂತ್ ಕೆಮ್ಮಾಯಿ ಸನ್ಮಾನ ಪತ್ರ ವಾಚಿಸಿದರು.
ಪ್ರತಿಭಾ ಪುರಸ್ಕಾರ:
ಕೆಮ್ಮಾಯಿ ನಿವಾಸಿ ಪ್ರಕಾಶ್ ಅವರ ಪುತ್ರ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಸಚಿತ್ ಟಿ ಕೆ ಮತ್ತು ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರ ಪುತ್ರಿ ಬಹುಮುಖ ಪ್ರತಿಭೆ ರಾಷ್ಟ್ರಮಟ್ಟಕ್ಕೆ ಕ್ರೀಡೆಯಲ್ಲಿ ಪ್ರತಿನಿಧಿಸಿದ ಸಮೃದ್ದಿ ಜೆ ಶೆಟ್ಟಿ ಅವರನ್ನು ಯುವಕ ಮಂಡಲದ ಪರವಾಗಿ ಗಣ್ಯರು ಸನ್ಮಾನಿಸಿದರು.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಯುವಕ ಮಂಡಲದ ಗೌರವಾಧ್ಯಕ್ಷ ಎಸ್ ಚಿದಾನಂದ ರೈ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಬಡಾವು, ಮೂಡಾಯುರು ಗುತ್ತಿನ ನರೇಂದ್ರ ಪಡಿವಾಳ್, ಕೋಶಾಧಿಕಾರಿ ಚಂದ್ರಶೇಖರ್ ಕೆಮ್ಮಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶೋಕ್ ಟಿ ಎಮ್ ಸಿ, ಸುಧಾಕರ್ ನಾಯ್ಕ್, ಉಮಾವತಿ ಕೆಮ್ಮಾಯಿ, ಅಭಿಲಾಷ್, ಜನಾರ್ದನ, ಉಮೇಶ್ ಗೌಡ, ಶಾಲಿನಿ, ರಾಜೇಶ್, ಸುರೇಂದ್ರ ಕುಂಜಾರು, ವಿಘ್ನೇಶ್ ಗೌಡ, ಡಾ.ನಾರಾಯಣ ಕೆಮ್ಮಾಯಿ, ಯುವಕ ಮಂಡಲದ ಸಂಚಾಲಕ ಅಣ್ಣಿಪೂಜಾರಿ ಅತಿಥಿಗಳನ್ನು ಗೌರವಿಸಿದರು.
ವರ್ಷಿಣಿ ಹಾಗು ಪ್ರಿಯ ಅವರು ಪ್ರಾರ್ಥಿಸಿದರು. ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ ಕೆಮ್ಮಾಯಿ ಸ್ವಾಗತಿಸಿದರು. ಯುವಕ ಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿ ಮಂಜುನಾಥ್ ಕೆಮ್ಮಾಯಿ ವಂದಿಸಿದರು. ಯುವಕ ಮಂಡಲದ ಸಲಹೆಗಾರ ನಾಗೇಶ್ ಟಿ ಎಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ವಿಷ್ಣು ಭಜನಾ ತಂಡದಿಂದ ನೃತ್ಯ ಭಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ಮಂಜೇಶ್ವರ ಶಾರದಾ ಆರ್ಟ್ಸ್ ಕಲಾವಿದರಿಂದ “ಕಥೆ ಎಡ್ಡೆಂಡು” ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಹಲವು ಯೋಜನೆಗೆ ಸಹಕಾರದ ಮನವಿ
ಶ್ರೀ ವಿಷ್ಣು ಯುವಕ ಮಂಡಲದಲ್ಲಿ 52 ಸದಸ್ಯರು ಸಕ್ರಿಯ ಸದಸ್ಯರಿದ್ದಾರೆ. ಸದಸ್ಯರ ಸಹಕಾರ ಮತ್ತು ಊರವರ ಪ್ರೋತ್ಸಾಹದಿಂದ ಹಲವು ಉತ್ತಮ ಕಾರ್ಯಕ್ರಮ ನಿರಂತರ ಯುವಕ ಮಂಡಲದ ಮೂಲಕ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿ ಅಶ್ವತ್ಥ ಕಟ್ಟೆಯ ವಠಾರಕ್ಕೆ ಇಂಟರ್ ಲಾಕ್ ಅಳವಡಿಕೆ ಎಲ್ಲರ ಸಹಕಾರದಿಂದ ನಡೆದಿದೆ. ಮುಂದೆಯೂ ಎಲ್ಲರ ಸಹಕಾರಕ್ಕೆ ಮನವಿ ಮಾಡುತ್ತೇನೆ.
ದಯಾನಂದ ಗೌಡ ಅಧ್ಯಕ್ಷರು ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ