ಬ್ಯಾನರ್ ಅಳವಡಿಕೆ ವಿಚಾರದಲ್ಲಿ ತಾರತಮ್ಯ ಮಾಡದೆ ನಿಯಮ ಪಾಲಿಸಿದರೆ ನಗರಸಭೆಗೆ ರೂ.3 ಕೋಟಿಯಷ್ಟು ಆದಾಯ ಹೊಂದಿಸಬಹುದಿತ್ತು ಸಭೆಯಲ್ಲಿ ಪ್ರಸ್ತಾಪ
ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿನ ಹಲವು ಕಡೆ ಅಳವಡಿಸಿರುವ ಬ್ಯಾನರ್ ಕಟೌಟ್‌ಗಳ ಕುರಿತು ಸರಿಯಾದ ನಿಯಮವನ್ನು ಜಾರಿ ಮಾಡಿದರೆ ಅಥವಾ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೆ ನಗರಸಭೆಗೆ ಸುಮಾರು 3 ಕೋಟಿ ರೂಪಾಯಿ ಆದಾಯ ಬರಬಹುದು. ಅದು ಬಿಟ್ಟು ಬ್ಯಾನರ್ ಅಳವಡಿಕೆ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ನಗರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ನಗರ ಸಭೆಯ 2025-26ನೇ ಸಾಲಿನ ಬಜೆಟ್ ಪೂರ್ವಭಾವಿಯಾಗಿ ಎರಡನೇ ಸಭೆಯು ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಂಗಣದಲ್ಲಿ ನಡೆಯಿತು.
ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಜಿ ಪುರಸಭೆ ಅಧ್ಯಕ್ಷ ಗಣೇಶ್ ರಾವ್ ಅವರು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳು ಮುಗಿದರೂ ಬ್ಯಾನರ್ ಕಟೌಟ್‌ಗಳು ಇನ್ನೂ ತೆರವಾಗಿಲ್ಲ ಎಂದು ಪ್ರಸ್ತಾಪಿಸಿದರು. ಧ್ವನಿಗೂಡಿಸಿದ ಇನ್ನೋರ್ವ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರು, ತೆರವು ಮಾಡಲು ಅದು ಅನುಮತಿ ಪಡೆಯದೆ ಅಳವಡಿಸಿದ ಬ್ಯಾನರ್‌ಗಳಾಗಿದೆ. ಪ್ರತಿನಿಧಿಗಳು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರು ಅನುಮತಿ ಪಡೆಯದೇ ಬ್ಯಾನರ್ ಅಳವಡಿಸುವುದು ಭ್ರಷ್ಟಾಚಾರವಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಯಾರೋ ಪಾಪದವರಿಗೆ ಕಾರ್ಯಕ್ರಮದ ಬ್ಯಾನರ್ ಅಳವಡಿಸಲು ಅನುಮತಿ ಬೇಕು ಮತ್ತು ಅದನ್ನು ಕಾರ್ಯಕ್ರಮ ಮುಗಿದ ಮೂರು ದಿನದ ಒಳಗೆ ತೆರವು ಮಾಡಬೇಕು. ಇಲ್ಲವಾದಲ್ಲಿ ನಗರಸಭೆಯಿಂದಲೇ ತೆರವು ಮಾಡಲಾಗುತ್ತದೆ. ಆದರೆ, ರಾಜಕೀಯವಾಗಿ ಅಳಡಿಸಿದ ಬ್ಯಾನರ್ ಇನ್ನೂ ತೆರವಾಗಿಲ್ಲ. ಬ್ಯಾನರ್ ಅಳವಡಿಕೆ ಅನುಮತಿ ವಿಚಾರದಲ್ಲಿ ನಗರಸಭೆ ಯಾಕೆ ತಾರತಮ್ಯ ಮಾಡುವುದು ಎಂದರಲ್ಲದೆ, ನಗರಸಭೆಯಿಂದ ಸರಿಯಾದ ನಿಯಮ ಪಾಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೆ ಕೇವಲ ಬ್ಯಾನರ್ ಅಳವಡಿಕೆಯಿಂದಲೇ ಸುಮಾರು 3 ಕೊಟಿ ರೂಪಾಯಿಯಷ್ಟು ಆದಾಯ ನಗರಸಭೆಗೆ ಬರಬಹುದಿತ್ತು. ಆಗ ಬಜೆಟ್‌ಗೂ ಹೊಂದಾಣಿಕೆ ಮಾಡಬಹುದಿತ್ತು ಎಂದರು. ಮೂರು ದಿನದೊಳಗೆ ಬ್ಯಾನರ್ ತೆರವು ಮಾಡಲು ಸೂಚನೆ ನೀಡಲಾಗುವುದು ಎಂದು ನಗರಸಭೆಯಿಂದ ಉತ್ತರ ಬಂದಾಗ, ನೀವು ಅನುಮತಿ ಕೊಟ್ಟರೆ ತಾನೆ ಸೂಚನೆ ನೀಡುವುದು ಎಂದು ಬನ್ನೂರು ಹೇಳಿದರು.
ಒಳಚರಂಡಿಗೆ ಡಿಪಿಆರ್ ಮಾಡಿ ಹಣ ಪೋಲು ಮಾಡುವುದು ಬೇಡ:
ನಗರಸಭೆಗೆ ಒಳಚರಂಡಿ ಯೋಜನೆಗೆ ಸಂಬಂಧಿಸಿ ರೂ.೫೦ ಲಕ್ಷದಲ್ಲಿ ಡಿಪಿಆರ್ ಮಾಡುವ ಕುರಿತು ಮಾಧ್ಯಮದ ಮೂಲಕ ಮಾಹಿತಿ ಪಡೆದು ಕೊಂಡಿದ್ದೇನೆ. ಆದರೆ ಈ ಹಿಂದೆ ಮೂರು ಬಾರಿ ಡಿಪಿಆರ್ ಆಗಿದೆ. ಅದು ಏಲ್ಲಿ ಹೋಗಿದೆ. ಈಗ ಮತ್ತೊಮ್ಮೆ ಡಿಪಿಆರ್ ಮಾಡಿ ನಗರಸಭೆಯ ಹಣ ಪೋಲು ಮಾಡುವುದು ಬೇಡ ಎಂದು ರಾಜೇಶ್ ಬನ್ನೂರು ಹೇಳಿದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಬಾಲಚಂದ್ರ ಅವರು, ಶಾಸಕರು ಇದ್ದಾಗ ನಡೆದ ಸಭೆಯಲ್ಲಿ ಡಿಪಿಆರ್‌ಗೆ ರೂ.೫೦ ಲಕ್ಷ ನೀಡುವ ವಿಚಾರ ಪ್ರಸ್ತಾಪ ಆಗಿತ್ತು. ಆಗ, ನಮಗೆ ಒಳಚರಂಡಿಗೆ ರೂ.೬೦೦ ಕೋಟಿ ಅನುದಾನ ತರುವುದು ಖಚಿತವಾದರೆ ಮಾತ್ರ ನಗರಸಭೆಯಿಂದ ರೂ.೫೦ ಲಕ್ಷ ಕೊಡೋಣ ಎಂದು ಜೀವಂಧರ್ ಜೈನ್ ಹೇಳಿದ್ದಾರೆ. ಹಾಗಾಗಿ ಈ ಕುರಿತು ನಗರಸಭೆಯಿಂದ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಶೌಚಾಲಯದ ಗುಂಡಿಯಿಂದ ಮನೆ ಬಾವಿಗೆ ತೊಂದರೆ:
ಆವರಣಗೋಡೆಯ ಬಳಿ ಶೌಚಾಲಯದ ಗುಂಡಿ ಮಾಡಿ ಪಕ್ಕದ ಮನೆಗಳ ಬಾವಿಗೆ ತೊಂದರೆ ಆಗುತ್ತಿದೆ. ಈ ಕುರಿತು ದೂರು ನೀಡಿದರೂ ಯಾರೂ ಸ್ಪಂದಿಸುತ್ತಿಲ್ಲ ಯಾಕೆ ಎಂದು ಶೈಲೇಶ್ ಅವರು ಪ್ರಶ್ನಿಸಿದರು. ಮನೆ ನಿರ್ಮಾಣದ ವೇಳೆಯೇ ಎಲ್ಲಾ ರೀತಿಯ ದಾಖಲೆ ಪಡೆಯಬೇಕು. ಇದೀಗ ಆ ಭಾಗದಲ್ಲಿ ಸಮಸ್ಯೆ ಉದ್ಭವಿಸಿದೆ ಎಂದು ಸಭೆಯಲ್ಲಿದ್ದವರು ಪ್ರಸ್ತಾಪಿಸಿದರು. ಈ ಸಮಸ್ಯೆ ನಗರಸಭೆಯ ರಾಜಕಾಲುವೆಯಲ್ಲೂ ಕಾಣುತ್ತಿದೆ. ಉದಾಹರಣೆಗೆ ಮಯೂರ ಇನ್‌ಲ್ಯಾಂಡ್ ಬಳಿ ರಾತ್ರಿ ಬಂದು ಪರಿಶೀಲಿಸಿ. ಆಗ ಎಷ್ಟು ಗಲೀಜು ಎಲ್ಲಿಂದ ಬರುತ್ತದೆ ಎಂಬುದು ಗೊತ್ತಾಗುತ್ತದೆ. ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಚರಂಡಿಯ ದುರಸ್ತಿ ಮಾಡುವ ಬದಲು ಇಡೀ ಚರಂಡಿಯ ಸ್ಲ್ಯಾಬ್ ತೆರವು ಮಾಡಿ ಬೇರೆ ನಿರ್ಮಾಣ ಮಾಡಿರುವುದು ಯಾಕೆ ಎಂದರು.
ಪೌರಾಯುಕ್ತರು ಮಾತನಾಡಿ ೨೫ ಫೀಟ್ ಇರುವಲ್ಲಿ ಎಸ್‌ಟಿಪಿ(ಶುದ್ದೀಕರಿಸುವ ನೀರಿನ ಘಟಕ)ಮಾಡಲೇಬೇಕು.ಕೆಲವು ಕಡೆ ಇಲ್ಲದೇ ಇರುವಲ್ಲಿಗೆ ಲೀಗಲ್ ನೋಟೀಸ್ ನೀಡುತ್ತೇವೆ. ನಗರ ವ್ಯಾಪ್ತಿಯಲ್ಲಿ ೧೦ ರಿಂದ ೧೨ ಎಂಎಲ್‌ಡಿಯಷ್ಟು ನೀರು ಬರುತ್ತದೆ. ನಾವು ೧೦ ಎಂ.ಎಲ್.ಡಿಯಷ್ಟು ನೀರನ್ನು ಸ್ವೀಕರಿಸುತ್ತಿದ್ದೇವೆ. ಅದರಲ್ಲಿ ಶೇ.೮೦ರಷ್ಟು ಉಪಯೋಗಿಸಿ ವೇಸ್ಟ್ ನೀರು ಆಗುತ್ತದೆ. ೮ ಎಮ್.ಎಲ್.ಡಿ.ಯಷ್ಟು ವೇಸ್ಟ್ ನೀರು ಸಿಗುತ್ತದೆ. ಈ ವೇಸ್ಟ್ ನೀರಿಗೆ ಎಸ್‌ಟಿಪಿ(ನೀರನ್ನು ಶುದ್ದೀಕರಿಸುವ ಘಟಕ)ಯೋಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಒಟ್ಟು ೧೯.೫ ಕೋಟಿ ಅನುದಾನ ರಾಜ್ಯ ಮತ್ತು ಕೇಂದ್ರದಿಂದ ಬರಲಿದೆ. ಮುಂದಿನ ದಿನ ಅದನ್ನು ೯ ಕಿ.ಮೀ.ನಷ್ಟು ಡೈವರ್ಷನ್ ಮಾಡಿ ಎಸ್‌ಟಿಪಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪುತ್ತೂರು ಗುಡ್ಡ ಪ್ರದೇಶವಾದ್ದರಿಂದ ಸಮಗ್ರವಾಗಿ ಯೋಜನೆಗೆ ಕಷ್ಟ ಸಾಧ್ಯವಾದ್ದರಿಂದ ಮೊದಲು ನಗರ ವ್ಯಾಪ್ತಿಯೊಳಗಿನ ಯೋಜನೆ ಕೈಗೆತ್ತಿಕೊಳ್ಳುತ್ತೇವೆ. ಇದರೊಂದಿಗೆ ಶಾಸಕರು ಹೇಳಿದಂತೆ ಯುಜಿಡಿ ಯೋಜನೆಯೂ ಆದರೆ ಉತ್ತಮ ಯೋಜನೆಯಾಗಿ ರೂಪುಗೊಳ್ಳುತ್ತದೆ ಎಂದರು.
ಪುತ್ತೂರು ವರ್ತಕ ಸಂಘದ ಕೋಶಾಧಿಕಾರಿ ಉಲ್ಲಾಸ್ ಪೈ ಅವರು ಮಾತನಾಡಿ ಅರುಣಾ ಕಲಾ ಮಂದಿರದ ಬಳಿ ರಸ್ತೆ ಕಿರಿದಾಗಿ ಸಮಸ್ಯೆಯಾಗಿದೆ ಎಂದರು. ಮಾಜಿ ಪುರಸಭೆ ಅಧ್ಯಕ್ಷೆ ಲತಾ ಗಣೇಶ್ ರಾವ್ ಮಾತನಾಡಿ, ಬೊಳುವಾರಿನಲ್ಲಿ ಫುಟ್‌ಪಾತ್ ಸಮಸ್ಯೆ ಇದೆ ಎಂದರು. ಹರೀಶ್ ಆಚಾರ್ಯ ಅವರು, ಬೀರಮಲೆಯ ಬಳಿ ದಾರಿ ದಿಪ ಅಳವಡಿಸಬೇಕು. ಚರಂಡಿ ಬ್ಲಾಕ್ ಆಗಿ ಸಮಸ್ಯೆ ಉದ್ಭವಿಸಿದೆ ಎಂದರು. ಮಾಜಿ ಪುರಸಭೆ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆಯವರು ಮಾತನಾಡಿ ಜಲಸಿರಿಯ ಆದಾಯ ನಗರಸಭೆಗೆ ಸಿಗಬೇಕೆಂದರು. ನಗರಸಭೆ ಸದಸ್ಯ ರಮೇಶ್ ರೈ ಅವರು ಮಾತನಾಡಿ ನೆಲ್ಲಿಕಟ್ಟೆ ಪರಿಸರದಲ್ಲಿ ಚರಂಡಿ ಬ್ಲಾಕ್ ಆಗಿದೆ. ಪ್ರತಿ ಸಲ ಮಳೆಗೆ ದೋಣಿ ತಂದರೆ ಅದರಲ್ಲೇ ಹೋಗಬಹುದು ಎಂದರು. ಬೀದಿ ನಾಯಿಗಳಿಗೆ ಸೆಲ್ಟರ್ ಮಾಡಬೇಕು ಮತ್ತು ಆರ್ವಾ ಪ್ಲಾಂಟ್ ಮಾಡುವಂತೆ ಗಣೇಶ್ ರಾವ್ ಪ್ರಸ್ತಾಪಿಸಿದರು. ೧೦ ವರ್ಷದಿಂದ ವಿಶೇಷ ಚೇತನರಿಗೆ ವಾಸ್ತವ್ಯದ ಮನೆ ನಿವೇಶನಕ್ಕೆ ಅರ್ಜಿ ನೀಡಲಾಗಿದೆ. ಇನ್ನೂ ಅವರಿಗೆ ಯಾವ ನಿವೇಶನವೂ ಸಿಗಲಿಲ್ಲ ಎಂದು ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಪ್ರಸ್ತಾಪಿಸಿದರು.
ಮಾಧವ ಸ್ವಾಮಿ, ಉಲ್ಲಾಸ್ ಪೈ, ನಿವೃತ್ತ ಶಿಕ್ಷಕಿ ಪ್ರಫುಲ್ಲಾ, ನಗರಸಭೆ ಸದಸ್ಯರಾದ ಶೈಲಾ ಪೈ, ಗೌರಿ ಬನ್ನೂರು, ವಿದ್ಯಾ ಆರ್.ಗೌರಿ, ಇಂದಿರಾ ಪುರುಷೋತ್ತಮ ಅಚಾರ್ಯ, ಯೂಸುಫ್ ಡ್ರೀಮ್, ಸಂತೋಷ್ ಬೊಳುವಾರು, ರಾಬಿನ್ ತಾವ್ರೋ, ಮನೋಹರ್ ಕಲ್ಲಾರೆ, ಮಾಜಿ ಸದಸ್ಯೆ ವನಿತಾ ಸಹಿತ ಹಲವಾರು ಮಂದಿ ಸಲಹೆ ನೀಡಿದರು.
ಮಾಸಿಕ ರೂ.೫೦ ಲಕ್ಷ ನಗರಸಭೆ ನಿರ್ವಹಣೆಗೆಬೇಕು
ನಗರಸಭೆಯಲ್ಲಿ ಮೇಜರ್ ಅನುದಾನ ನಿರ್ವಹಣೆಗೆ ಬೇಕಾಗುತ್ತದೆ. ರಸ್ತೆ, ಔಟ್ ಸೋರ್ಸ್ ವಾಹನಕ್ಕೆ ಇಂಧನ, ನೇರಪಾವತಿ ಸೇರಿ ಮಾಸಿಕ ರೂ.೫೦ ಲಕ್ಷ ನಿರ್ವಹಣೆಗೆ ಬೇಕಾಗುತ್ತದೆ. ಅದರಲ್ಲಿ ಉಳಿದ ಮೊತ್ತವನ್ನು ಅಭಿವೃದ್ದಿಗೆ ಬಳಸಬಹುದು ಎಂದು ಪೌರಾಯುಕ್ತರು ಮಾಹಿತಿ ನೀಡಿದರು.