2ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿ ಹಿನ್ನೆಲೆ ‘ಧನ್ಯೋಸ್ಮಿ’ ಕಾರ್ಯಕ್ರಮ

0

*2025ರ ಡಿ.27,28,29ಕ್ಕೆ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ-ಅರುಣ್ ಕುಮಾರ್ ಪುತ್ತಿಲ
*ನೂರು ಜೋಡಿಗೆ ಉಚಿತ ವಿವಾಹ ಕಾರ್ಯಕ್ರಮ

ಪುತ್ತೂರು: 2ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಭಕ್ತರ ಭಕ್ತಿ ಮತ್ತು ಸಹಕಾರದಿಂದ ಯಶಸ್ವಿಯಾಗಿದೆ.ಮುಂದೆ 2025ರ ಡಿ.27, 28 ಮತ್ತು 29ರಂದು 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಮಾಡುವ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬುವ ಹಿನ್ನೆಲೆಯಲ್ಲಿ ನೂರು ಜೋಡಿಗೆ ಉಚಿತ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಘೋಷಣೆ ಮಾಡಿದರು.


ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಿ.29ರಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಜ.19ರಂದು ಪುತ್ತೂರು ಕೊಟೇಚಾ ಹಾಲ್‌ನಲ್ಲಿ ನಡೆದ ‘ಧನ್ಯೋಸ್ಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಈ ಕುರಿತು ಉಲ್ಲೇಖಿಸಿದ್ದೆ.ಈ ನಿಟ್ಟಿನಲ್ಲಿ ಅದಕ್ಕೆ ಈಗಾಗಲೇ ಕಾರ್ಯಪ್ರವೃತ್ತರಾಗಬೇಕು.ಮುಂದಿನ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಿಂದೂ ಸಮಾಜದ ಶಕ್ತಿಯಾಗಿ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಯಾಚಿಸಿದರು.ಕಾರ್ಯಕರ್ತರ ಭಾವನೆಗಳಿಗೆ ಪೂರಕವಾಗಿ ಹಿಂದೂ ಸಮಾಜ ಮತ್ತೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಮಾಡಬೇಕೆಂಬ ಬೇಡಿಕೆಯ ನಿಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.


ಕಾರ್ಯಕರ್ತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ:
ಯಾವುದೇ ರೀತಿಯ ನ್ಯೂನತೆ ಇಲ್ಲದೆ ಕಾರ್ಯಕ್ರಮ ಸುಲಲಿತವಾಗಿ ನಡೆದಿರುವುದು ಪುತ್ತೂರಿನ ಜನರ ಹೃದಯಶ್ರೀಮಂತಿಕೆ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ. ಭಕ್ತ ಸಮಿತಿಯ ಪರವಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ಸಮಿತಿಯ ಪದಾಧಿಕಾರಿಗಳು, ದಾನಿಗಳು, ಸ್ವಯಂ ಸೇವಕರು, ಕಾರ್ಯಕರ್ತರು ಜೊತೆಯಾಗಿ ಎಲ್ಲವೂ ತನ್ನ ಮನೆಯ ಕಾರ್ಯಕ್ರಮ ಎಂದು ಕೆಲಸ ಮಾಡಿದ್ದಾರೆ.ಕಾರ್ಯಕರ್ತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.


1 ಲಕ್ಷದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ:
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸುಮಾರು 75 ಸಾವಿರದಿಂದ 1 ಲಕ್ಷದಷ್ಟು ಮಂದಿ ಅನ್ನಪ್ರಸಾದವನ್ನು ಸ್ವೀಕಾರ ಮಾಡಿ ಪುತ್ತೂರಿನ ಜನರು ಧರ್ಮ ಮತ್ತು ಧಾರ್ಮಿಕತೆಗೆ ಇರುವ ಸಂದೇಶ ನೀಡಿದ್ದಾರೆ.ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಮಾನ್ಯ ಭಕ್ತರಂತೆ ಪಾಲ್ಗೊಂಡು ಉತ್ತಮ ಸಹಕಾರ ನೀಡಿದ್ದಾರೆ.ಅದೇ ರೀತಿ ಮೆಸ್ಕಾಂ ಇಲಾಖೆ, ಅರಣ್ಯ, ನಗರಸಭೆ ಪೂರ್ಣ ಸಹಕಾರ ನೀಡಿದೆ.ಒಟ್ಟು ವ್ಯವಸ್ಥೆಯ ಹಿಂದೆ ಕಾರ್ಯಕರ್ತರ ಶ್ರಮವಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಯಶಸ್ವಿ ಕಾರ್ಯಕ್ರಮ ಅರುಣಣ್ಣನಿಂದ ಮಾತ್ರ ಸಾಧ್ಯ:
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸ್ವಾಗತ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ ಅವರು ಮಾತನಾಡಿ ಇಂತಹ ಉತ್ತಮ ಕಾರ್ಯಕ್ರಮ ಯಶಸ್ವಿಯಾಗಲು ಅರುಣಣ್ಣನಿಂದ ಮಾತ್ರ ಸಾಧ್ಯ.ಯಾಕೆಂದರೆ ಕಾರ್ಯಕ್ರಮದ ಪೂರ್ವ ಸಿದ್ದತೆಯಿಂದ ಹಿಡಿದು ಕಾರ್ಯಕ್ರಮದ ಕೊನೆಯ ತನಕ ಎಲ್ಲವೂ ಪಾರದರ್ಶಕವಾಗಿ ಅಚ್ಚುಕಟ್ಟಾಗಿ ನಡೆದಿದೆ.ಇದು ಮುಂದಿನ ಕಾರ್ಯಕ್ರಮಕ್ಕೆ ಮುಂದಡಿಯಿಟ್ಟಂತಾಗಿದೆ ಎಂದರು.


3ನೇ ವರ್ಷದ ಕಲ್ಯಾಣೋತ್ಸವಕ್ಕೆ ಈಗಲೇ ತಯಾರಿಯಾಗಬೇಕು:
ಶ್ರೀನಿವಾಸ ಕಲ್ಯಾಣೊತ್ಸವ ಸಮಿತಿ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ ಅವರು ಮಾತನಾಡಿ ಮುಂದೆ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಈಗಲೇ ಸಿದ್ಧತೆ ನಡೆಸಬೇಕು ಎಂದರು.


ಪಾಕತಜ್ಞ ಹರೀಶ್ ಭಟ್ ಅವರಿಗೆ ಸನ್ಮಾನ:
ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಮಂದಿಗೆ ಅನ್ನಪ್ರಸಾದ ತಯಾರಿಸಿದ ಪಾಕತಜ್ಞ ಹರೀಶ್ ಭಟ್ ಮತ್ತು ಅವರ ತಂಡಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ಅಭಿನಂದನೆ ಸಲ್ಲಿಸಿ,ಹರೀಶ್ ಭಟ್ ಅವರನ್ನು ಸನ್ಮಾನಿಸಲಾಯಿತು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್ ಸಂಪ್ಯ ಲೆಕ್ಕಪತ್ರ ಮಂಡಿಸಿ ಸಭೆಯಿಂದ ಅನುಮೋದನೆ ಪಡೆದರು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹೇಂದ್ರ ವರ್ಮ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಹಸಂಚಾಲಕ ಮನೀಶ್ ಕುಲಾಲ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮಹಿಳಾ ಸಮಿತಿ ಸಹಸಂಚಾಲಕಿ ಪುಷ್ಪಾರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿಮಠ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here