ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಟ ವೇತನ ನೀಡಬೇಕು ಹಾಗೂ ಗುಜರಾತ್ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕಾರ್ಯಕರ್ತೆಯರನ್ನು ಸಿ ದರ್ಜೆ, ಸಹಾಯಕಿಯರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು ಧರಣಿಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕುನಿಂದ ಸುಮಾರು 500 ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದಾರೆ.
ಮುಷ್ಕರದ ಆರಂಭ ದಿನ
ಜ. 28ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಆಗಮಿಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಕೆಯ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕೂಡ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಬೇಡಿಕೆ ಈಡೇರುವವರೆಗೂ ನಮ್ಮ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲರವರು ತಿಳಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷೆ ತಾರಾ ಬಲ್ಲಾಳ್, ಕಾರ್ಯದರ್ಶಿ ಶೈಲಜಾ ಈಶ್ವರಮಂಗಲ,ಉಪಾಧ್ಯಕ್ಷೆ ರಾಜೀವಿ ಕುಂಬ್ರ, ಕೋಶಾಧಿಕಾರಿ ಚಂದ್ರಿಕ ಪುಳಿತ್ತಡಿ, ಜತೆ ಕಾರ್ಯದರ್ಶಿ ಜಯಂತಿ ಕೋಡಿಂಬಾಡಿ, ನಿಕಟಪೂರ್ವ ಕಾರ್ಯದರ್ಶಿ ಪುಷ್ಪಲತಾ ಕೊಳ್ತಿಗೆ, ಸಂಧ್ಯಾ ಬೀರಿಗ, ಮಾಜಿ ಅಧ್ಯಕ್ಷರುಗಳಾದ ಮಲ್ಲಿಕಾ ಎಸ್.ಆಳ್ವ, ಜೈನಾಬಿ ಕಡಬ, ಶ್ರೀಲತಾ ರಾವ್, ಮೀನಾಕ್ಷಿ ಬೆಳ್ಳಿಪ್ಪಾಡಿ, ಗುಣವತಿ ಉಪ್ಪಿನಂಗಡಿ, ಮಾಜಿ ಜಿಲ್ಲಾಧ್ಯಕ್ಷೆ ಅರುಣ ಡಿ., ಮಾಜಿ ಕಾರ್ಯದರ್ಶಿ ಜಯಲತಾ ಹಾಗೂ ವಲಯದ ಪ್ರತಿನಿಽಗಳು ಸೇರಿದಂತೆ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದಾರೆ.
ಅಂಗನವಾಡಿ ಕೆಲಸದ ಜತೆಗೆ ಇತರ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಕಳೆದ 50 ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿದ್ದಾರೆ. ಆದರೆ ಕನಿಷ್ಠ ಕೂಲಿಯನ್ನೂ ಈವರಗೆ ಜಾರಿ ಮಾಡಿಲ್ಲ.
ಐಸಿಡಿಎಸ್ ಯೋಜನೆ ಪ್ರಾರಂಭವಾಗಿ 50 ವರ್ಷ ಆಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರೂ.25ಸಾವಿರ ಹಾಗೂ ಅಂಗನವಾಡಿ ಸಹಾಯಕಿಯರಿಗೆ ಮಾಸಿಕ ರೂ.12ಸಾವಿರ ಕನಿಷ್ಠ ವೇತನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಸಿ.ದರ್ಜೆ ನೌಕರರಂತೆ ಹಾಗೂ ಸಹಾಯಕಿಯರನ್ನು ಡಿ.ದರ್ಜೆ ನೌಕರರೆಂದು ಪರಿಗಣಿಸಿ ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಕರ್ನಾಟಕ ರಾಜ್ಯದಲ್ಲೂ ಜಾರಿ ಮಾಡಿ ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಪ್ರಮುಖ ಬೇಡಿಕೆ ಯಾಗಿದೆ.