ಪಾಣಾಜೆ: ಇಲ್ಲಿನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಉತ್ಸವದ ಅಂಗವಾಗಿ ಜ.28ರಂದು ಆರ್ಲಪದವು ದೈವಸ್ಥಾನದ ಮಾಡದಲ್ಲಿ ಬೆಳಿಗ್ಗೆ ಮಲರಾಯ, ಪಿಲಿಭೂತ ನೇಮೋತ್ಸವ ಜರಗಿತು.
ಆರಂಭದಲ್ಲಿ ಮಲರಾಯ ದೈವದ ನೇಮ ನಡೆದು ಬಳಿಕ ಪಿಲಿಭೂತ ನೇಮೋತ್ಸವ ನಡೆಯಿತು. ಪಿಲಿಭೂತ ದೈವ ಓಲಸರಿ ನಡೆದು, ದೈವ ಗುಡಿಯ ಬಳಿಯಿಂದ ಹುಲಿ ಬಂಡಿಯಲ್ಲಿ ಸವಾರಿ ನಡೆಯಿತು. ಸಾವಿರಾರು ಭಕ್ತಾಭಿಮಾನಿಗಳು ಈ ಪುಣ್ಯಪ್ರದ ಕ್ಷಣಗಳನ್ನು ಕಣ್ತುಂಬಿಕೊಂಡರು.
![](https://puttur.suddinews.com/wp-content/uploads/2025/01/2-7.jpg)
ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಸಮಿತಿಯ ಪ್ರಧಾನ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ನಾಯ್ಕ್ ಸುಡುಕುಳಿ, ಕಾರ್ಯದರ್ಶಿ ವಿಶ್ವನಾಥ ಪೈ ಕೊಂದಲ್ಕಾನ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಉಪಸಮಿತಿಗಳ ಸಂಚಾಲಕರು ಹಾಗೂ ಊರ ಪರವೂರ ಪ್ರಮುಖರು, ಭಕ್ತಾಭಿಮಾನಿಗಳು ಶ್ರೀದೈವಗಳ ಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಕೊನೆಯ ಉತ್ಸವದ ದಿನವೂ ಭಾರೀ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ನೆರೆದಿದ್ದರು.
![](https://puttur.suddinews.com/wp-content/uploads/2025/01/3-4.jpg)
ರಾತ್ರಿ ಅವಭೃತ ಸ್ನಾನಕ್ಕೆ ಕೊಂಡೆಪ್ಪಾಡಿಗೆ ಹೋಗಿ ಕಟ್ಟೆಪೂಜೆ ನಂತರ ದೈವಸ್ಥಾನಕ್ಕೆ ಬಂದು ಧ್ವಜಾವರೋಹಣ ನಡೆದು ತಂಬಿಲಗಳು, ನವಕ ಶುದ್ಧಿ, ಮಂತ್ರಾಕ್ಷತೆ ನಡೆಯಿತು. ಜ. 29ರಂದು ಬೆಳಿಗ್ಗೆ ಶ್ರೀ ದೈವಗಳ ಭಂಡಾರ ಶ್ರೀ ದೇವರ ಸನ್ನಿಧಿ ರಣಮಂಗಲಕ್ಕೆ ಹೋಗಲಿದೆ.
![](https://puttur.suddinews.com/wp-content/uploads/2025/01/4-3.jpg)