ಅರ್ಹರಿಗೆ ಯೋಜನೆ ತಲುಪಿಸಲು ಅನುಷ್ಠಾನ ಸಮಿತಿಯಿಂದ ಪ್ರಯತ್ನ; ಸುಧೀರ್ಕುಮಾರ್ ಶೆಟ್ಟಿ
ನೆಲ್ಯಾಡಿ: ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಯುವನಿಧಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಗೆ ಕಡಬ ತಾಲೂಕು ಪಂಚಾಯತ್ ವತಿಯಿಂದ ಕಡಬ ತಾಲೂಕಿನ ಕೌಕ್ರಾಡಿ, ನೆಲ್ಯಾಡಿ, ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೋಂದಾವಣೆಗೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಜ.೨೯ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಸಭಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲೂಕು ಇದರ ಅಧ್ಯಕ್ಷ ಸುಧೀರ್ಕುಮಾರ್ ಶೆಟ್ಟಿ ಅವರು ಇಬ್ಬರು ಫಲಾನುಭವಿಗಳ ಜೊತೆ ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಂಚಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದಷ್ಟಿಯ ಯೋಜನೆಗಳಾಗಿವೆ. ವಿಧಾನಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಐದೂ ಯೋಜನೆಗಳನ್ನೂ ಜಾರಿಗೆ ತಂದಿದೆ. ಈ ಮೂಲಕ ತಾಯಂದಿರ ಕಣ್ಣೀರೊರೆಸುವ ಕೆಲಸ ಸರಕಾರ ಮಾಡಿದೆ ಎಂದು ಹೇಳಿದರು. ಪಂಚ ಗ್ಯಾರಂಟಿ ಯೋಜನೆ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸಿಗಬೇಕೆಂಬ ಹಿನ್ನೆಲೆಯಲ್ಲಿ ಸರಕಾರ ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಿದೆ. ಈ ಸಮಿತಿಯೂ ಅರ್ಹರಿಗೆ ಯೋಜನೆಯನ್ನು ತಲುಪಿಸುವಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ ಸುಧೀರ್ಕುಮಾರ್ ಅವರು, ಕಳೆದ ಡಿಸೆಂಬರ್ ತಿಂಗಳ ತನಕ ಕಡಬ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 31,847 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 25,738 ಫಲಾನುಭವಿಗಳಿಗೆ ಈ ತನಕ 73,60,80,00 ರೂ. ಬಂದಿದೆ. ಯುವ ನಿಧಿ ಯೋಜನೆಯಡಿ 206 ಫಲಾನುಭವಿಗಳಿಗೆ 24,82,500 ರೂ.ಬಂದಿದೆ. 27,513 ಮಂದಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ 1,80,22,905 ಮಂದಿ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ ಸಾವಿರಾರು ಕೋಟಿ ರೂ.,ಅನುದಾನ ನೀಡುತ್ತಿದೆ. ಶೇ.95ರಷ್ಟು ಮಂದಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗುತ್ತಿದಾರೆ. ಯೋಜನೆಯ ಲಾಭ ನೇರವಾಗಿ ಫಲಾನುಭವಿಗೆ ಸಿಗುವ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಯಾವುದೇ ಸೋರಿಕೆಯೂ ಆಗುತ್ತಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕೆಲವೊಂದು ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದೇ ಇರಬಹುದು. ಎಲ್ಲಾ ಅರ್ಹ ಫಲಾನುಭವಿಗಳಿಗೂ ಪ್ರಯೋಜನ ಸಿಗಬೇಕೆಂಬ ನಿಟ್ಟಿನಲ್ಲಿ ಸರಕಾರ ಅನುಷ್ಠಾನ ಸಮಿತಿ ರಚನೆ ಮಾಡಿದೆ ಎಂದು ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು, ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿವೆ. ಈ ಯೋಜನೆಗೆ ಸರಕಾರದ ದೊಡ್ಡ ಮಟ್ಟದಲ್ಲಿ ಅನುದಾನ ನೀಡುತ್ತಿದೆ. ಜನಸಾಮಾನ್ಯರು ಸ್ವಾವಲಂಬಿಗಳಾಗಬೇಕು, ಬಡತನದಿಂದ ಮುಕ್ತರಾಗಬೇಕೆಂಬ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಇದರ ಸಮರ್ಪಕ ಅನುಷ್ಠಾನಕ್ಕೆ ಅನುಷ್ಠಾನ ಸಮಿತಿಯೂ ರಚನೆಗೊಂಡಿದೆ. ಸಣ್ಣ ತೊಡಕುಗಳಿಂದ ಕೆಲವೊಂದು ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಎಲ್ಲಾ ಫಲಾನುಭವಿಗಳಿಗೂ ಯೋಜನೆಯ ಸೌಲಭ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಉಷಾ ಅಂಚನ್, ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಮೆಸ್ಕಾಂ ಕಡಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಅವಿನಾಶ್ ಬೈತ್ತಡ್ಕ. ಸತೀಶ್ ಪಳಿಕೆ, ರಾಘವೇಂದ್ರ ದೈಪಿಲ, ಭವಾನಿಶಂಕರ್, ಮಾಧವ ಪೂಜಾರಿ, ಹನೀಫ್ ಕೆ.ಎಮ್.,ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾಮ ಪಂಚಾಯಿತಿ ಪಿಡಿಒ ಮೋಹನ್ಕುಮಾರ್ ವಂದಿಸಿದರು. ಉದ್ಯೋಗಖಾತ್ರಿ ಯೋಜನೆ ಕಡಬ ತಾಲೂಕು ಸಂಯೋಜಕ ಭರತ್ರಾಜ್ ನಿರೂಪಿಸಿದರು. ನಳಿನಾಕ್ಷಿ ಪ್ರಾರ್ಥಿಸಿದರು.
ಸಭೆಯಲ್ಲಿ ಕೌಕ್ರಾಡಿ, ನೆಲ್ಯಾಡಿ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರು, ಗ್ರಾಮ ಪಂಚಾಯತ್ ಪಿಡಿಒಗಳು, ಕಾರ್ಯದರ್ಶಿಗಳು, ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಮಾಹಿತಿ ಕೇಂದ್ರ ತೆರೆದು ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಸಮಸ್ಯೆ ಸರಕಾರದ ಗಮನಕ್ಕೆ;
ಜಿಎಸ್ಟಿ, ಐಟಿ ರಿಟರ್ನ್ಸ್ ಸಲ್ಲಿಕೆ ಹಾಗೂ ಇನ್ನಿತರ ಸಮಸ್ಯೆಗಳಿಂದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದರೂ ಹಣ ಬಾರದೇ ಇರುವ ಫಲಾನುಭವಿಗಳೇ ಶಿಬಿರಕ್ಕೆ ಬಂದಿದ್ದರು. ಇವರ ಹೆಸರು ಮತ್ತು ಮೊಬೈಲ್ ನಂಬರ್ ಪಡೆದುಕೊಂಡಿದ್ದೇವೆ. ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹಾರ ಮಾಡಲು ಪ್ರಯತ್ನಿಸುತ್ತೇವೆ.
-ಸುಧೀರ್ಕುಮಾರ್ ಶೆಟ್ಟಿ, ಅಧ್ಯಕ್ಷರು
ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ, ಕಡಬ ತಾಲೂಕು