ಪುತ್ತೂರು: ತಾಲೂಕಿನಾದ್ಯಂತ ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಸ್ವಚ್ಚತಾ ಶ್ರಮದಾನದ ಪ್ರಯುಕ್ತ ಸಂಸಾರ ಜೋಡುಮಾರ್ಗ ತಂಡದ ಮೌನೇಶ್ ವಿಶ್ವಕರ್ಮರವರ ಮುಂದಾಳತ್ವದಲ್ಲಿ ಕುಂಬ್ರ ಜಂಕ್ಷನ್ನಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಬಗ್ಗೆ ಬೀದಿ ನಾಟಕವು ಜ.30 ರಂದು ನಡೆಯಿತು.
ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ, ನಾವು ಕಸ ಹೆಕ್ಕಲಿಕ್ಕೆ ನಿಮ್ಮ ಬಳಿಗೆ ಬಂದಿಲ್ಲ ಬದಲಾಗಿ ನಾವೆಲ್ಲರೂ ಸ್ವಚ್ಚತೆಯ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಸ್ವಚ್ಛ ಪರಿಸರವನ್ನು ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಸ್ವಚ್ಚತೆಯ ಬಗ್ಗೆ ನಾಟಕ ನೋಡಿದರೆ ಸಾಲದು ಅದರಲ್ಲಿರುವ ವಿಷಯಗಳನ್ನು ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಸ್ವಚ್ಛತಾ ಶ್ರಮದಾನದಲ್ಲಿ ಒಳಮೊಗ್ರು ಗ್ರಾಮದಲ್ಲಿ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಸ್ಪಂದನೆ ಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಮಾತನಾಡಿ, ಸ್ವಚ್ಚತೆಯ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಮುಂದೆಯೂ ಕಸ ಹಾಕುವುದೂ ಮುಂದುವರಿದರೆ ದಂಡದ ಮೂಲಕ ಎಚ್ಚರಿಕೆ ಕೊಡಬೇಕಾದ ಅಗತ್ಯತೆಯೂ ಇದೆ. ಇದಕ್ಕೆ ಯಾರೂ ಕೂಡ ಆಸ್ಪದ ಕೊಡಬಾರದು ಎಂದು ಹೇಳಿದರು.
ಈ ಸಂದಭದಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಬಿ.ಸಿ ಚಿತ್ರಾ, ಶಾರದಾ, ತಾಪಂನ ಜಗತ್ ಹಾಗೇ ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿಗಳು, ಸ್ವಚ್ಚತಾ ಸೇನಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಮೌನೇಶ್ ವಿಶ್ವಕರ್ಮ ಸ್ವಾಗತಿಸಿ, ವಂದಿಸಿದರು.