ಪುತ್ತೂರು: ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್ಪಿಆರ್ ಫಿಲ್ಮ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಡಿ.31ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ತೆರೆ ಕಾಣುತ್ತಿದ್ದು, ಇಲ್ಲಿನ ಜಿ.ಎಲ್ ವನ್ ಮಾಲ್ನ ಭಾರತ್ ಸಿನೆಮಾಸ್ನಲ್ಲಿಯೂ ಬಿಡುಗಡೆಗೊಂಡಿತು.
ಬ್ರಹ್ಮವಾಹಕ ರಾಧಾಕೃಷ್ಣ ಪುತ್ತೂರಾಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಜಿಲ್ಲೆ ಸಂಸ್ಕೃತಿಯ ಬೀಡು. ತುಳು ನಾಟಕ, ಯಕ್ಷಗಾನ ವಿವಿಧ ಕ್ಷೇತ್ರಗಳ ಮೂಲಕ ಇಲ್ಲಿ ತುಳು ಭಾಷೆ ಎತ್ತಿ ಹಿಡಿಯುವಂತ ಕೆಲಸವಾಗುತ್ತಿದೆ. ಈ ಚಲನಚಿತ್ರವು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಲಿ. ಪ್ರೇಕ್ಷಕರೆರೆಲ್ಲರೂ ನೋಡುವ ಮೂಲಕ ಶತದಿನೋತ್ಸವ ಆಚರಿಸಲಿ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಮಾತನಾಡಿ, ಮದ್ಯಮ ವರ್ಗದ ಜನರ ಸಮಸ್ಯೆಗಳನ್ನು ಸಮಾಜಕ್ಕೆ ತೋರಿಸುವ ಚಿತ್ರವಾಗಿದೆ. ಬಹಳಷ್ಟು ಚಲನಚಿತ್ರಗಳು ಆಗುತ್ತಿದೆ. ದೇಶ ವಿದೇಶಗಳ ಕಲಾವಿದರು ಭಾಗವಹಿಸುತ್ತಿದ್ದಾರೆ. ಎಲ್ಲರೂ ಚಿತ್ರ ವೀಕ್ಷಣೆ ಮಾಡುವ ಮೂಲಕ ತುಳು ಚಿತ್ರ ರಂಗ, ನಿರ್ಮಾಪಕರು ಬೆಳೆಯಲು ಸಹಕಾರಿಯಾಗಲಿ ಎಂದರು.
ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ತುಳು ಭಾಷೆಗೆ ಪ್ರಧಾನ್ಯತೆ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿದೆ. ತುಳು ಚಲನ ಚಿತ್ರಗಳ ಮುಖಾಂತರ ತುಳು ಕಲೆ, ಸಂಸ್ಕೃತಿ ಬೆಳೆಯಲು ಸಹಕಾರಿಯಾಗಲಿ ಎಂದರು. ಚಿತ್ರನಟ ಸುಂದರ ರೈ ಮಂದಾರ ಮಾತನಾಡಿ, ತುಳು ಚಲನಚಿತ್ರಗಳನ್ನು ಪ್ರತಿಯೊಬ್ಬರೂ ವೀಕ್ಷಣೆ ಮಾಡಿ, ಇತರರನ್ನು ನೋಡುವಂತೆ ಪ್ರೇರಣೆ ನೀಡುವ ಮೂಲಕ ತುಳು ಚಿತ್ರ ರಂಗ ಬೆಳೆಯಲು ಸಹಕಾರ ನೀಡಬೇಕು ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ ಮಾತನಾಡಿ, ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾವನ್ನು ಎಲ್ಲಾ ಜನರು ನೋಡಬೇಕು. ಮಿಡ್ಲ್ ಕ್ಲಾಸ್ ಫ್ಯಾಮಿಲಿ ಹೈ ಕ್ಲಾಸ್ ಆಗಲಿ ಎಂದರು.
ಗೀತಾ ರಾಧಾಕೃಷ್ಣ ಪುತ್ತೂರಾಯ, ಭಾರತ್ ಸಿನೆಮಾಸ್ನ ವ್ಯವಸ್ಥಾಪಕ ಜಯರಾಮ ವಿಟ್ಲ ಉಪಸ್ಥಿತರಿದ್ದರು. ಪದ್ಮರಾಜ್ ಚಾರ್ವಾಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ವಂದಿಸಿದರು.