ಪುತ್ತೂರು: ಸ್ವಚ್ಚ ಸಂಸ್ಕೃತಿ ನಮ್ಮ ಸಂಸ್ಕೃತಿ ಅಭಿಯಾನಕ್ಕೆ ಪುತ್ತೂರು ತಾಲೂಕಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು ಒಳಮೊಗ್ರು ಗ್ರಾಮದಲ್ಲಿ 10 ದಿನಗಳಲ್ಲಿ 800ಕ್ಕೂ ಅಧಿಕ ಮಂದಿ ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸುವ ಮೂಲಕ ಗ್ರಾಮದಲ್ಲಿ ಸ್ವಚ್ಚತೆಯ ಅರಿವು ಮೂಡಿಸುವುದರ ಜೊತೆಗೆ ಸ್ವಚ್ಛ ಗ್ರಾಮವನ್ನಾಗಿಸುವಲ್ಲಿ ಶ್ರಮ ವಹಿಸಿದ್ದಾರೆ. ನೋಡೆಲ್ ಅಧಿಕಾರಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿಯವರ ಮಾರ್ಗದರ್ಶನದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರವರ ಮುಂದಾಳತ್ವದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮನ್ಮಥ ಅಜಿರಂಗಳರವರ ಮುತುವರ್ಜಿ ಹಾಗೂ ಗ್ರಾಪಂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಜ.22 ರಂದು ಆರಂಭಗೊಂಡ ಸ್ವಚ್ಚತಾ ಶ್ರಮದಾನ ಅಭಿಯಾನ ಜ.31ರ ತನಕ ಗ್ರಾಮವ್ಯಾಪ್ತಿ ನಡೆದಿದ್ದು ಕಸ ಹೆಕ್ಕುವುದರ ಜೊತೆಯಲ್ಲಿ ದಂಡ ವಿಧಿಸುವ ಕೆಲಸವೂ ನಡೆದಿದ್ದು ಕಸ ಎಸೆಯುವುದು ಅಪರಾಧ ಎನ್ನುವ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಿದೆ.
ಗ್ರಾಮದ 4 ವಾರ್ಡ್ಗಳಲ್ಲಿ ಆಯಾ ವಾರ್ಡ್ನ ಸದಸ್ಯರ ಸಹಕಾರದೊಂದಿಗೆ ಪ್ರತಿದಿನ ಬೆಳಿಗ್ಗೆ 3 ರಿಂದ 4 ಗಂಟೆಗಳ ತನಕ ಸ್ವಚ್ಚತಾ ಕಾರ್ಯ ನಡೆದಿದೆ. ಪ್ರತಿ ವಾರ್ಡ್ನಲ್ಲೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಈ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಪ್ರತಿ ದಿನ ಒಬ್ಬೊಬ್ಬರು ದಾನಿಗಳು ಉಪಹಾರದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಕುಂಬ್ರದಲ್ಲಿ ಉದ್ಘಾಟನೆಗೊಂಡ ಸ್ವಚ್ಛತಾ ಶ್ರಮದಾನ ಬಳಿಕ ಪರ್ಪುಂಜ, ಕೈಕಾರ, ಬೊಳ್ಳಾಡಿ,ಅಜ್ಜಿಕಲ್ಲು, ಶೇಖಮಲೆ,ಕುಟ್ಟಿನೋಪಿನಡ್ಕ, ಅಜಲಡ್ಕ ಹೀಗೆ ಗ್ರಾಮದ ಮೂಲೆ ಮೂಲೆಯಲ್ಲಿ ನಡೆಯಿತು. ಪ್ರತಿ ಭಾಗದಲ್ಲೂ ಗ್ರಾಮಸ್ಥರು ಬಹಳ ಹುರುಪಿನಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸಂಗ್ರಹವಾದ ಕಸ, ತ್ಯಾಜ್ಯಗಳನ್ನು ಗ್ರಾಪಂ ಸ್ವಚ್ಛತಾ ವಾಹಿನಿ ವಾಹನದ ಮೂಲಕ ಸ್ವಚ್ಛ ಘಟಕಕ್ಕೆ ರವಾನೆ ಮಾಡುವ ಕೆಲಸವೂ ನಡೆಯಿತು.
800ಕ್ಕೂ ಅಧಿಕ ಮಂದಿ ಭಾಗಿ
10 ದಿನಗಳ ಕಾಲ ನಡೆದ ಸ್ವಚ್ಚತಾ ಶ್ರಮದಾನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಅಧಿಕಾರಿ ವರ್ಗದವರು, ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಸೇರಿದಂತೆ ಸುಮಾರು 800ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಅರಿವು ಮೂಡಿಸಿದ ಕಾರ್ಯಕ್ರಮ
ಕೇವಲ ಸ್ವಚ್ಛತಾ ಶ್ರಮದಾನವಲ್ಲದೆ ವಿದ್ಯಾರ್ಥಿಗಳಲ್ಲಿ, ಗ್ರಾಮಸ್ಥರಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಕೆಲಸವೂ ನಡೆದಿದೆ. ಕರಪತ್ರ ವಿತರಣೆ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಸ್ವಚ್ಚತೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಸಾರ್ವಜನಿಕವಾಗಿ ಕಸ ಹಾಕಿದವರಿಗೆ ದಂಡ ವಿಧಿಸುವ ಕೆಲಸವೂ ನಡೆಯಿತು.
ಇಂದು ಸಮಾರೋಪ ಸಮಾರಂಭ
ಸ್ವಚ್ಚತಾ ಶ್ರಮದಾನ ಕಾರ್ಯಕ್ರಮದ ಸಮಾರೋಪ ಸಮಾರಂಭ ಫೆ.01ರಂದು ಮಧ್ಯಾಹ್ನ 2.30ಕ್ಕೆ ಗ್ರಾ.ಪಂ. ಕಛೇರಿ ಸಭಾಂಗಣದಲ್ಲಿ ನಡೆಯಲಿದೆ. ಕುಂಬ್ರ ಬಸ್ಸು ತಂಗುದಾಣದಲ್ಲಿ ಕಸದ ಬುಟ್ಟಿಗಳ ಅಳವಡಿಕೆ ಹಾಗೇ ಶ್ರಮದಾನ ಕಾರ್ಯಕ್ರಮದಲ್ಲಿ ಉಪಹಾರ ವ್ಯವಸ್ಥೆ ಮಾಡಿದವರಿಗೆ ಅಭಿನಂದನೆ ಸಲ್ಲಿಕೆ ಹಾಗೇ ಭಾಗವಹಿಸಿದ ಗ್ರಾಮಸ್ಥರಿಗೆ ಕೃತಜ್ಞತೆ ಈ ಕಾರ್ಯಕ್ರಮದಲ್ಲಿ ನಡೆಯಲಿದೆ.
‘ ಜ.21 ರಿಂದ 31 ರವರೆಗೆ ನಡೆದ ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಸ್ವಚ್ಚತಾ ಅಭಿಯಾನದಲ್ಲಿ ಇಡೀ ತಾಲೂಕಿನಲ್ಲೇ ಅಭೂತಪೂರ್ವ ಸ್ಪಂದನೆ ದೊರೆತಿದೆ. ಒಳಮೊಗ್ರು ಗ್ರಾಮ ಪಂಚಾಯತ್ ಕೂಡ ಎಲ್ಲರ ಸಹಕಾರ ಪಡೆದುಕೊಂಡು ಒಂದು ಮಾದರಿ ಕಾರ್ಯಕ್ರಮ ಮಾಡುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ರಾಜ್ಯಕ್ಕೆ ಇದೊಂದು ಮಾದರಿ ಕಾರ್ಯಕ್ರಮವಾಗಿದೆ.’
ನವೀನ್ ಭಂಡಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ
‘ ಸ್ವಚ್ಚ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬಂತೆ 10 ದಿನಗಳ ಕಾಲ ನಡೆದ ಸ್ವಚ್ಚತಾ ಶ್ರಮದಾನದಲ್ಲಿ ಗ್ರಾಮವ್ಯಾಪ್ತಿಯಲ್ಲಿ ಸ್ವಚ್ಛತೆ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮದ ಸರ್ವರ ಸಹಕಾರಕ್ಕಾಗಿ ಪಂಚಾಯತ್ ವತಿಯಿಂದ ಗ್ರಾಮದ ಸಮಸ್ತ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ