ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ-ಹಲವು ಬೇಡಿಕೆಗಳನ್ನು ಈಡೇರಿಸಲು ಸಭೆಯಲ್ಲಿ ಮಕ್ಕಳ ಆಗ್ರಹ

0

ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳ ಗ್ರಾಮ ಸಭೆ ಜ.29 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನಂದನ ಕುಮಾರಿ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಅವರ ಅಗತ್ಯತೆಗಳನ್ನು ಪೂರೈಸುವಲ್ಲಿ ಹಿರಿಯರ ಪಾತ್ರ ಬಹಳ ಮುಖ್ಯ.ಮಕ್ಕಳ ಹಕ್ಕುಗಳಾದ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಅವರು ತಪ್ಪು ದಾರಿ ಹಿಡಿಯದಂತೆ ಮಕ್ಕಳಿಗೆ ರಕ್ಷಣೆ ನೀಡುವುದು ಸೇರಿದಂತೆ ಮಕ್ಕಳ ಬೆಳವಣಿಗೆ ಮತ್ತು ಸಮಾಜದಲ್ಲಿ ಮುಂದೆ ಉತ್ತಮ ಪ್ರಜೆಗಳಾಗಿ ಬಾಳಲು ಬೇಕಾದ ವಾತಾವರಣ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಅವರು ವಿವರಿಸಿದರು.

ಬೆಟ್ಟಂಪಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಮಾತನಾಡಿ ಮಕ್ಕಳು ತಮಗೆ ಆಗುವ ಸಾಮಾಜಿಕ ದೌರ್ಜನ್ಯಗಳನ್ನು ಮುಚ್ಚಿಡದೆ ಇನ್ನೊಬ್ಬರ ಜತೆ ಹೇಳಿದಾಗ ಅದಕ್ಕೆ‌ ಪರಿಹಾರ ಮತ್ತು ದೌರ್ಜನ್ಯಗಳನ್ನು ತಡೆಯಲು ಸಾಧ್ಯ.ಶಾಲೆಯಲ್ಲಿ ಇರುವ ನಿಯಮಗಳನ್ನು ಪಾಲಿಸಿಕೊಂಡು ತಮ್ಮ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸಬೇಕು. ಮಕ್ಕಳು ಕೆಟ್ಟ ವಿಚಾರದಲ್ಲಿ ಹೆಚ್ಚು ಗಮನ ಹರಿಸದೆ ಉತ್ತಮ ರೀತಿಯಲ್ಲಿ ಬದುಕಲು ಬೇಕಾದ ಎಲ್ಲಾ ಪ್ರಯತ್ನ ಪಡುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಪ್ರಾಥಮಿಕ ಆರೋಗ್ಯ ಇಲಾಖೆಯ ಸಿ.ಎಚ್.ಒ ಲಕ್ಷ್ಮೀ ಮಾತನಾಡಿ ಮಕ್ಕಳು ತಮ್ಮ ಅರೋಗ್ಯವನ್ನು ಕಾಪಾಡಿಕೊಂಡು ಬರುವ ರೀತಿ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಕ್ಕಳ ಬೇಡಿಕೆ ಪ್ರತಿಕ್ರಿಯೆ ನೀಡಿ ಪಂಚಾಯತಿನಿಂದ ಸಾಧ್ಯವಾದ ಮಟ್ಟಿಗೆ ಪ್ರಯತ್ನಿಸುವುದಾಗಿ ಹೇಳಿ, ಉಳಿದವುಗಳನ್ನು ಆಯಾಯ ಇಲಾಖೆಗೆ ಕಳಿಸುವುದಾಗಿ ಭರವಸೆ ನೀಡಿದರು. ಬೆಟ್ಟಂಪಾಡಿ ಪ್ರೌಢಶಾಲಾ ವಿದ್ಯಾರ್ಥಿನಿ ಆಯಿಷತ್ ಸ್ವಾಲಿಹಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಸಂಧ್ಯಾಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲೆಗೆ ಬೇಕಾದ ಕೆಲವು ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಆಯಾ ಶಾಲೆಯ ಮಕ್ಕಳು ಪಂಚಾಯತ್ ಗೆ ಸಲ್ಲಿಸಿದರು.

ಮುಂಡೂರು ಶಾಲಾ ಮಕ್ಕಳಿಂದ ಸಲ್ಲಿಸಿದ ಬೇಡಿಕೆಗಳು

  1. ಶಾಲೆಗೆ ಸುಸಜ್ಜಿತ ಶೌಚಾಲಯ ನಿರ್ಮಾಣ.
  2. ಜಾರು ಬಂಡಿ ನಿರ್ಮಾಣ.
  3. ವಿಶಾಲವಾದ ಆಟದ ಮೈದಾನ ನಿರ್ಮಾಣ.
  4. ಶಾಲಾ ಜಾಗಕ್ಕೆ ಆವರಣ ಗೋಡೆ ನಿರ್ಮಾಣ.
  5. ಶಾಲೆಗೆ ಶಾಲಾ ಬಸ್ಸು.
  6. ಕಂಪ್ಯೂಟರ್ ಲ್ಯಾಬ್ ಮತ್ತು ಶಿಕ್ಷಕರ ನೇಮಕ.
  7. ಶಾಲಾವನ ನಿರ್ಮಾಣಕ್ಕೆ ಅವಕಾಶ.
  8. ವಿಜ್ಞಾನದ ಉಪಕರಣ ಮತ್ತು ಲ್ಯಾಬ್ ಅವಶ್ಯಕತೆ.
  9. ಪಂಚಾಯತ್ ನಿಂದ ಶಾಲೆಗೆ ಹೋಗುವ ರಸ್ತೆಗೆ ನಾಮಫಲಕ ಅಳವಡಿಕೆ.
  10. ಪಂಚಾಯತ್ ನಲ್ಲಿ ಸಾರ್ವಜನಿಕ ಗ್ರಂಥಾಲಯ ಆರಂಭಿಸುವುದು

ಚೂರಿಪದವು ಶಾಲಾ ಬೇಡಿಕೆ

  1. ಶಾಲಾ ಆವರಣದ ಒಳಗೆ ಅನೇಕ ಸಮಯದಿಂದ ಒಂದು ನಾಗರಹಾವು ಸುತ್ತುತ್ತಿದ್ದು ಇದರಿಂದ ಮಕ್ಕಳಿಗೆ ತೊಂದರೆ.
  2. ಶಾಲಾ ಗೇಟಿನ ಬಳಿ ಅಳವಡಿಸಿದ ದಾರಿ ದೀಪ ಕೆಲವು ಸಮಯದಿಂದ ಉರಿಯದೆ ಇದ್ದು ದುರಸ್ತಿ ಪಡಿಸಿ.
  3. ಶಾಲಾ ಪರಿಸರದಲ್ಲಿ ಗುಟ್ಕಾ ತಿಂದು ಅದರ ಪ್ಯಾಕೆಟ್ ಹಾಗೂ ಮದ್ಯಪಾನ ಮಾಡಿ ಅದರ ತ್ಯಾಜ್ಯ ಎಸೆದು ಶಾಲಾ ಪರಿಸರ ಹಾಳು ಮಾಡುತ್ತಿದ್ದು ಇದರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವುದು.
  4. ಚೂರಿಪದವಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಕಲ್ಪಿಸುವುದು.

ನಿಡ್ಪಳ್ಳಿ ಪ್ರಾಥಮಿಕ ಶಾಲಾ ಬೇಡಿಕೆಗಳು

  1. ಖಾಲಿ ಇರುವ ಖಾಯಂ ಶಿಕ್ಷಕರ ನೇಮಕ.
  2. ಸುಸಜ್ಜಿತ ರಂಗಮಂದಿರ ನಿರ್ಮಾಣ.
  3. ಬಿದ್ದು ಹೋದ ಶಾಲಾ ಆವರಣ ಗೋಡೆ ದುರಸ್ತಿ.
  4. ಗುತ್ತು ಚಾವಡಿ ಬಳಿಯಿಂದ ಶಾಲೆಯವರೆಗಿನ ರಸ್ತೆಗೆ ಕಾಂಕ್ರೀಟಿಕರಣ
  5. ಬಿರುಕು ಬಿಟ್ಟ ಆರನೆಯ ತರಗತಿ ಗೋಡೆ ದುರಸ್ತಿ
  6. ಆಟದ ಮೈದಾನ ವಿಸ್ತರಣೆ

ಬೆಟ್ಟಂಪಾಡಿ ಪ್ರೌಢಶಾಲಾ ಬೇಡಿಕೆ

  1. ಶಾಲಾ ಗೇಟ್ ಬಳಿ ಒಂದು ಬೀದಿ ದೀಪ ಅಳವಡಿಕೆ
  2. ಬಿದ್ದು ಹೋದ ತಡೆ ಗೋಡೆ ದುರಸ್ತಿ ಮತ್ತು ಮುಂದುವರಿಕೆ.
  3. ಸುಸಜ್ಜಿತ ಆಟದ ಮೈದಾನ ವಿಸ್ತರಣೆ
  4. ಒಡ್ಯ ದೂಮಡ್ಕದಿಂದ ಬೆಳಿಗ್ಗೆ 8.30 ಕ್ಕೆ ರೆಂಜಕ್ಕೆ ಸರಕಾರಿ ಬಸ್ಸು ವ್ಯವಸ್ಥೆ
  5. ಬಾಕಿ ಉಳಿದ ಶಾಲೆಯ ರಸ್ತೆಗೆ ಡಾಮರೀಕರಣ

ಬಹುಮಾನ ವಿತರಣೆ

ಆಯಾಯ ಶಾಲೆಗಳಲ್ಲಿ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಮುಂಡೂರು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಚೂರಿಪದವು ಶಾಲಾ ವಿದ್ಯಾರ್ಥಿನಿ ಶ್ರೀಯಾ ಸ್ವಾಗತಿಸಿದರು. ನಿಡ್ಪಳ್ಳಿ ಶಾಲಾ ಅತಿಥಿ ಶಿಕ್ಷಕಿ ಸುಮಾ.ಡಿ, ಚೂರಿಪದವು ಶಾಲಾ ಶಿಕ್ಷಕಿ ಐರಿನ್ ಕ್ರಾಸ್ತಾ, ಬೆಟ್ಟಂಪಾಡಿ ಪ್ರೌಢಶಾಲಾ ವಿದ್ಯಾರ್ಥಿನಿ ಸುಪ್ರೀತಾ, ಮುಂಡೂರು ಶಾಲಾ ಅತಿಥಿ ಶಿಕ್ಷಕಿ ಧನ್ಯಶ್ರೀ ಬಹುಮಾನದ ಪಟ್ಟಿ ವಾಚಿಸಿದರು. ನಿಡ್ಪಳ್ಳಿ ಶಾಲಾ ವಿದ್ಯಾರ್ಥಿ ಅಹಮ್ಮದ್ ಸುಹೈಲ್ ವಂದಿಸಿದರು. ಬೆಟ್ಟಂಪಾಡಿ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರಿಯಾ ಕಾರ್ಯಕ್ರಮ ನಿರೂಪಿಸಿದರು.

ಪಂಚಾಯತ್ ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ, ಗ್ರಂಥ ಪಾಲಕಿ ಪವಿತ್ರ.ಜಿ, ಸಂಜೀವಿನಿ ಒಕ್ಕೂಟದ ಸಿಬ್ಬಂದಿ ತೇಜಸ್ವಿನಿ, ಭವ್ಯಾ ಮತ್ತಿತರರು ಸಹಕರಿಸಿದರು. ಬೆಟ್ಟಂಪಾಡಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಅತಿಥಿ ಶಿಕ್ಷಕಿ ನಳಿನಿ, ಮುಂಡೂರು ಶಾಲಾ ಮುಖ್ಯ ಗುರು ಆಶಾ, ನಿಡ್ಪಳ್ಳಿ ಶಾಲಾ ಅತಿಥಿ ಶಿಕ್ಷಕಿ ಶೋಭಾ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು, ಸ್ವಚ್ಚತಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here